ರಾಮಾಯಣ ೧೬೯
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೯🏝📖
*ತತೋಬ್ರವೀದ್ವಿಜಾನ್ನ್ವೃದ್ಧಾನ್ಯಜ್ಞಕರ್ಮಸು ನಿಷ್ಠಿತಾನ್ | ಸ್ಥಾಪತ್ಯೇ ನಿಷ್ಠಿತಾಂಶ್ಚೈವ ವೃದ್ಧಾನ್ಪರಮಧಾರ್ಮಿಕಾನ್ || ಕರ್ಮಾಂತಿಕಾನ್ ಶಿಲ್ಪಕರಾನ್ವರ್ಧಕೀನ್ಖನಕಾನಪಿ | ಗಣಕಾನ್ ಶಿಲ್ಪಿನಶ್ಚೈವ ತಥೈವ ನಟನರ್ತಕಾನ್ ||*
_ವಸಿಷ್ಠರಲ್ಲಿ ನಿವೇದಿಸಿಕೊಂಡ ನಂತರ ರಾಜನು ಅನೇಕ ಜನರನ್ನು ಆಮಂತ್ರಿಸಿದನು. ಬ್ರಹ್ಮನನ್ನು ತಿಳಿದ ಜ್ಞಾನಿಗಳನ್ನೂ, ಅನೇಕ ಯಜ್ಞಗಳಲ್ಲಿ ಪಾಲ್ಗೊಂಡ ಅನುಭವಿಗಳನ್ನೂ, ಅಶ್ವಮೇಧ ಶ್ರೌತ ಪ್ರಕ್ರಿಯೆಗನುಸಾರ ನಡೆಯುವ ಯಾಗವಾದ್ದರಿಂದ ಶ್ರೌತಕರ್ಮಪರಿಣತರನ್ನೂ, ಯಜ್ಞಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇರೆ ಬೇರೆ ದ್ರವ್ಯಗಳನ್ನು ತಂದುಹಾಕುವ ವ್ಯಾಪಾರೀ ವರ್ಗದವರನ್ನೂ, ಪರಮ ಧಾರ್ಮಿಕರನ್ನೂ, ಯಜ್ಞದ ಕೊನೆಯವರೆಗೂ ಅನೇಕ ಕೆಲಸಗಳನ್ನು ಮಾಡುವ ಕಾರ್ಮಿಕರನ್ನೂ, ಲಕ್ಷಾಂತರ ಸಂಖ್ಯೆಯ ಇಟ್ಟಿಗೆಗಳನ್ನು ನಿರ್ಮಿಸಲು ಶಿಲ್ಪಿಗಳನ್ನೂ, ಯಜ್ಞದಲ್ಲಿ ಬಳಸುವ ಬೇರೆ ಬೇರೆ ಬಗೆಯ ಮರದ-ಮಣ್ಣಿನ-ಲೋಹದ ಪಾತ್ರೆಗಳನ್ನು ನಿರ್ಮಿಸಲು ಬಡಗಿಗಳನ್ನೂ, ಒಂದೊಂದು ಕರ್ಮಕ್ಕೆ ಸರಿಯಾಗಿ ಮುಹೂರ್ತ ನೋಡಲು ಬಹುಶ್ರುತರಾದ ಜ್ಯೋತಿಷಿಗಳನ್ನೂ, ಚಿತ್ರಗಳನ್ನು ಬರೆದು ಜನರನ್ನು ರಂಜಿಸಲು ಚಿತ್ರಕಾರರನ್ನೂ, ಅಭಿನಯ ನರ್ತನ ಗಾನದಲ್ಲಿ ಪರಿಣತರಾದ ಸಾವಿರಾರು ನಟರನ್ನೂ ಕರೆದು ಯಜ್ಞದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ನಿವೇದಿಸಿಕೊಂಡನು._
_ಒಂದು ಯಜ್ಞ ಎಂದರೆ ಸಾಮಾನ್ಯ ಕಾರ್ಯವಲ್ಲ. ಸಮಾಜದ ಯಾವೆಲ್ಲ ವೃತ್ತಿಗಳು ಇವೆಯೋ ಅವರೆಲ್ಲರೂ ಒಮ್ಮತದಿಂದ ಪಾಲ್ಗೊಂಡು ನಡೆಸುವ ಮಹಾಕಾರ್ಯ. ಮೇಲೆ ಹೆಸರಿಸಿದ ವೃತ್ತಿಗಳು ಕೆಲವು ಮಾತ್ರ. ಜನಜೀವನಕ್ಕೆ ಯಾವೆಲ್ಲ ವೃತ್ತಿಗಳು ಅವಶ್ಯಕತೆ ಇದೆಯೋ ಅವೆಲ್ಲವೂ ಪಾಲ್ಗೊಂಡಿದ್ದವು. ಕೇವಲ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಊಟಕ್ಕಾಗಿ ಅಥವಾ ದಕ್ಷಿಣೆಗಾಗಿ ಮಾಡಿದ ಪ್ರಕ್ರಿಯೆಯಲ್ಲ ಅದು. ಅದೊಂದು ಸಾಮಾಜಿಕ ಕಳಕಳಿಯ, ವ್ಯಕ್ತಿಗತವಲ್ಲದ ಶ್ರೇಷ್ಠ ಮಾರ್ಗ. ಇಲ್ಲಿ ಹೇಗೆ ಋತ್ವಿಜರು ದಕ್ಷಿಣೆ ಪಡೆಯುತ್ತಿದ್ದರೋ ಅಂತೆಯೇ ಬಡಗಿಗಳು, ಶಿಲ್ಪಿಗಳು, ನಾನಾ ಕಾರ್ಮಿಕರು ಅವರಿಗೆ ತಕ್ಕ ಸಂಭಾವನೆ ಪಡೆಯುತ್ತಿದ್ದರು. ಪರಿಣತರಿಗೆ ಹೆಚ್ಚು ಸಿಗುವುದು ಈಗಿನಂತೆಯೇ ಆಗಲೂ ಸ್ವಾಭಾವಿಕವಾಗಿತ್ತು. ಈಗಿನ ಕೆಲವು ಅರೆಬೆಂದ ಮೂರ್ಖರು ಆಪಾದಿಸುವಂತೆ ಅದು ಬ್ರಾಹ್ಮಣ್ಯ ಅಥವಾ ವೈದಿಕತೆ ಹೇರುವ ವಿಧಾನವಾಗಿರದೇ ಸಮಾಜದಲ್ಲಿ ಸಾಮರಸ್ಯವನ್ನು ಹೊಣೆಗಾರಿಕೆಯನ್ನು ಸಂಸ್ಕೃತಿಯನ್ನು ಪಸರಿಸುವ ಉತ್ತಮ ಸಾಧನವಾಗಿತ್ತು._
*ಆಗತಾನಾಂ ಸುದೂರಾಚ್ಚ ಪಾರ್ಥಿವಾನಾಂ ಪೃಥಕ್ಪೃಥಕ್ | ವಾಜಿವಾರಣಶಾಲಾಶ್ಚ ತಥಾ ಶಯ್ಯಾಗೃಹಾಣಿ ಚ || ಭಟಾನಾಂ ಮಹದಾವಾಸಾ ವೈದೇಶಿಕನಿವಾಸಿನಾಮ್ | ಆವಾಸಾ ಬಹುಭಕ್ಷ್ಯಾ ವೈ ಸರ್ವಕಾಮೈರುಪಸ್ಥಿತಾಃ ||*
_ಯಜ್ಞಕ್ಕೆ ದೂರದಿಂದ ಬರುವ ಋತ್ವಿಜರಿಗೆ, ಅಯೋಧ್ಯೆಯ ಪ್ರಜೆಗಳಿಗೆ, ಬೇರೆ ಬೇರೆ ದೇಶದ ರಾಜರಿಗೆ, ವಿದೇಶದ ಸೈನಿಕರಿಗೆ ವಾಸಿಸಲು ಯೋಗ್ಯವಾದ ಭವನಗಳನ್ನು ನಿರ್ಮಿಸಿರಿ, ಈ ಮನೆಗಳಲ್ಲಿ ಭಕ್ಷ್ಯ-ಭೋಜ್ಯಗಳು ಸದಾ ಸಿದ್ಧವಾಗಿರಬೇಕು, ಶೃಂಗಾರಯೋಗ್ಯ ಚಂದನಾದಿಗಳು-ಕಾಮೋಪಭೋಗ್ಯ ವಸ್ತುಗಳೂ ಲಭ್ಯವಿರಬೇಕು. ವಿದೇಶಗಳಿಂದ ಬರುವ ಅತಿಥಿಗಳಿಗೆ ತಂಗಲು ಅವರಿಗೆ ಅನುಕೂಲಕರವಾದ ಮನೆಗಳನ್ನು ನಿರ್ಮಿಸಬೇಕು. ಬರುವ ಯಾವುದೇ ಅತಿಥಿಗೆ ವಿಧಿವತ್ತಾಗಿ ಉಪಚಾರ ಮಾಡಬೇಕು. ಎಲ್ಲಾ ವರ್ಣಗಳ ಜನರೂ ಪೂಜಿಸಲ್ಪಟ್ಟು ಸತ್ಕೃತರಾಗುವಂತೆ ಮಾಡಬೇಕು. ಕಾಮ-ಕ್ರೋಧಾದಿಗಳ ಕಾರಣದಿಂದ ಅನಾದರ-ಅನಾಸ್ಥೆ ಕಂಡುಬರಬಾರದು._
_*ಸರ್ವೇ ವರ್ಣಾ ಯಥಾ ಪೂಜಾಂ ಪ್ರಾಪ್ನುವಂತಿ ಸುಸಂಸ್ಕೃತಾಃ* ಈ ಶ್ಲೋಕ ಇಲ್ಲಿ ಎಲ್ಲರೂ ಗಮನಿಸಬೇಕಾದ ವಿಷಯ. ನಾಲ್ಕು ವರ್ಣದವರಿಗೆ ಯಾರೊಬ್ಬರಿಗೂ ಸತ್ಕಾರ ಮಾನಗಳಲ್ಲಿ ಕಡಿಮೆ ಆಗದಂತೆ ವ್ಯವಸ್ಥೆ ಆಗಬೇಕು ಎಂಬುದು ದಶರಥನ ಆಜ್ಞೆ. ಹೇಗೆ ಒಂದು ಕ್ರೀಡಾಕೂಟ ನಡೆಯುವಾಗ ಕ್ರೀಡಾಳುಗಳ ಎಲ್ಲಾ ವಿಧದ ಬಯಕೆಗಳ ಈಡೇರಿಕೆಗೆ ಶ್ರಮಿಸಲಾಗುವುದೋ ಅಂತೆಯೇ ಈ ಯಜ್ಞದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಸಂತೃಪ್ತಿಯೂ ಯಜ್ಞದ ಯಶಸ್ಸಿಗೆ ಕಾರಣವಾಗುತ್ತಿತ್ತು. ಹಾಗಾಗಿಯೇ ಯಜ್ಞದ ಪ್ರಕ್ರಿಯೆಯಲ್ಲಿ ಇನ್ನೊಬ್ಬರಿಂದ ಹೊಡೆದ ದುಡ್ಡಾಗಲಿ, ಇನ್ನೊಬ್ಬರನ್ನು ನೋಯಿಸುವುದಾಗಲೀ ನಿಷಿದ್ಧ. ಸರ್ವರಿಗೂ ಸಮಾನ ಉಪಚಾರ ಹಾಗೂ ತೃಪ್ತಿಪಡಿಸುವ ಶ್ರೇಷ್ಠವಾದ ಒಂದು ಪರಂಪರೆ ಅಲ್ಲಿ ಮೈದಾಳುತ್ತಿತ್ತು. ರಾಜರು ಅಥವಾ ಯೋಧರು ಬಂದಾಗ ಅಶ್ವ ಶಾಲೆ ಗಜಶಾಲೆ, ನೂರಾರು ಪಾಕಶಾಲೆ ಹೀಗೆ ಒಂದು ಪಟ್ಟಣದ ಹೊಸನಿರ್ಮಾಣವೇ ಆ ಯಜ್ಞ ನಡೆಯುವ ಜಾಗದಲ್ಲಿ ಉಂಟಾಗುತ್ತಿತ್ತು. ತನ್ಮೂಲಕ ಲಕ್ಷಾಂತರ ಉದ್ಯೋಗಗಳು, ರಾಷ್ಟ್ರಕ್ಕೆ ವಿದೇಶೀ ವಿನಿಮಯ, ಸಂಸ್ಕೃತಿಯ ಕೊಡುಕೊಳ್ಳುವಿಗೆ, ವ್ಯಕ್ತಿತ್ವ ನಿರ್ಮಾಣ ಇವುಗಳೆಲ್ಲವೂ ನಡೆದು ಒಂದು ದೇಶದ ಉನ್ನತಿಗೆ ಬಹುದೊಡ್ಡ ಕಾರಣವಾಗುತ್ತಿದ್ದವು. ಹಾಗಾಗಿಯೇ ದೊಡ್ಡ ಯಜ್ಞ ಕೈಗೊಂಡ ರಾಜರಾರೂ ದಾರಿದ್ರ್ಯದಿಂದ ಬಳಲುತ್ತಿರಲಿಲ್ಲ. ಇದಕ್ಕೆ ವಿರುದ್ಧವಾಗಿ ಅಂತಹ ದೇಶದ ಜನತೆ ಮತ್ತಷ್ಟು ಶ್ರೀಮಂತರು ಗುಣವಂತರೂ ಆಗುತ್ತಿದ್ದರು. ಕಾಮೋಪಭೋಗ ಸಾಧನಗಳ ಲಭ್ಯತೆಯ ಅವಶ್ಯಕತೆಯಿಂದಾಗಿ ಅಲಂಕಾರಿಕರೂ, ವೇಶ್ಯೆಯರೂ, ಉಳಿದ ವೃತ್ತಿಗಳಿಗೂ ಸಾಕಷ್ಟು ಕೆಲಸ ದೊರೆತು ಸಮಾಜ ಸರ್ವತೋಮುಖವಾಗಿ ತೃಪ್ತಿ ಹೊಂದುತ್ತಿತ್ತು._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ