ರಾಮಾಯಣ ೧೬೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖
*ಶಕ್ಯಃ ಪ್ರಾಪ್ತುಮಯಂ ಯಜ್ಞಃ ಸರ್ವೇಣಾಪಿ ಮಹೀಕ್ಷಿತಾ | ನಾಪರಾಧೋ ಭವೆತ್ಕಷ್ಟೋ ಯದ್ಯಸ್ಮಿನ್ಕ್ರತುಸತ್ತಮೇ || ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಹಿ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ ||*
_ಮಹತ್ತಾದ ಕರ್ಮವನ್ನು ಮಾಡಲು ಹೊರಟವರಿಗೆ ಇರಬೇಕಾದ ಎಚ್ಚರವನ್ನು ವಿವರಿಸುತ್ತಿದ್ದಾನೆ ಕವಿ. ಪ್ರಪಂಚದ ಯಾವ ರಾಜರು ಬೇಕಾದರೂ ಅಶ್ವಮೇಧ ನಡೆಸಿ ಫಲವನ್ನುಣ್ಣಬಹುದು. ಆದರೆ ಯಜ್ಞದಲ್ಲಿ ಸ್ವಲ್ಪ ದೋಷ ಉಂಟಾದರೂ ಮಹತ್ತಾದ ಅನರ್ಥಕ್ಕೆ ಕಾರಣವಾಗುತ್ತದೆ. ಸರಿಯಾದ ಯಜ್ಞದ ಆಚರಣೆಯು ಹೇಗೆ ಸತ್ಫಲವನ್ನು ಕರುಣಿಸುವುದೋ ಅಂತೆಯೇ ತಪ್ಪು ಆಚರಣೆಯು ದುಷ್ಫಲವನ್ನು ನಿಶ್ಚಿತವಾಗಿ ಕರುಣಿಸುವುದು. ವಿದ್ವಾಂಸರು ಇನ್ನೊಬ್ಬರಿಗೆ ತಮ್ಮ ವಿದ್ಯೆಯನ್ನು ಬೋಧಿಸದಿದ್ದರೆ ಮುಂದೆ ಬ್ರಹ್ಮರಾಕ್ಷಸರಾಗಿ ಹುಟ್ಟುವರು. ಅಂತಹ ಬ್ರಹ್ಮರಾಕ್ಷಸರು ಯಜ್ಞದಲ್ಲಿ ಉಂಟಾಗುವ ನ್ಯೂನ-ಅತಿರೇಕಗಳನ್ನು ಹುಡುಕಿ ಯಜ್ಞವನ್ನು ನಾಶ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇದರ ಫಲವಾಗಿ ಯಜಮಾನನೂ ನಾಶ ಹೊಂದುವನು. ಹಾಗಾಗಿ ಸ್ವಲ್ಪವೂ ದೋಷವುಂಟಾಗದಂತೆ ಅಚ್ಚುಕಟ್ಟಾಗಿ ಶಾಸ್ತ್ರಸಮ್ಮತವಾಗಿ ಯಜ್ಞ ನಡೆಸಲು ಪ್ರಯತ್ನಿಸಿ. ನಿಮಗೆ ಇಂತಹ ಯಜ್ಞ ಆಯೋಜಿಸಿ ಸಾಕಷ್ಟು ಅನುಭವ ಇರುವ ಕಾರಣ ಹೆಚ್ಚು ಹೇಳಲಾರೆ ಎಂಬುದು ದಶರಥನ ಮಾತು_
_ಕೈಯಲ್ಲಿ ಧನವಿದೆ ಅಥವಾ ಅಧಿಕಾರವಿದೆ ಅಥವಾ ವಿದ್ಯೆ ಇದೆ ಎಂದು ನಾನು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ಯಜ್ಞ ಯಾಗಾದಿಗಳನ್ನು ಹಮ್ಮಿಕೊಳ್ಳುವ ಹಾಗೂ ಪೂರ್ಣಾಹುತಿಯೆಂದು ಸಿಕ್ಕಸಿಕ್ಕ ದ್ರವ್ಯಗಳಿಂದ ಕುಂಡ ತುಂಬಿಸುವುದು, ಸ್ವರ ವಿಕಾರ ಮಾಡಿ ಮಂತ್ರಗಳನ್ನು ಪಠಿಸುವುದು, ರಾಶಿ ರಾಶಿ ಹೂವನ್ನು ಚೆಲ್ಲುವುದು, ಯೋಗ್ಯ ರೀತಿಯಲ್ಲಿ ಅನುಷ್ಠಾನ ಮಾಡದೆ ವಾದ್ಯ ಮೇಳಕ್ಕೆ ಒತ್ತು ಕೊಟ್ಟು ಗೌಜಿ ಗದ್ದಲದ ಹೆಸರಿನಲ್ಲಿ ಅನರ್ಥ ಪರಂಪರೆ ಹುಟ್ಟುಹಾಕುವ ಎಲ್ಲಾ ಆಯೋಜಕರಿಗೂ ದಶರಥನ ಈ ಮಾತು ಎಚ್ಚರಿಕೆಯ ರೂಪದ್ದು. ದಶರಥನಂತಹ ಅನುಭವಿ ಜ್ಞಾನಿ ರಾಜನಿಗೆ ತನ್ನ ಕಾರ್ಯದಲ್ಲಿ ಇಷ್ಟು ಎಚ್ಚರ ಇರಬೇಕಾದರೆ ಸಾಮಾನ್ಯರಾದ ನಾವು ಕ್ಷಣಕ್ಷಣಕ್ಕೂ ನಮ್ಮನ್ನು ನಮ್ಮ ಕರ್ಮಗಳನ್ನು ನಿಕಷಕ್ಕೆ ಒಡ್ಡಬೇಕು. ಆಗ ಮಾತ್ರ ಲೋಕಕ್ಷೇಮವೂ ತನ್ಮೂಲಕ ನಮ್ಮ ಉದ್ಧಾರವೂ ಆದೀತು. ಇಲ್ಲದಿದ್ದರೆ ಲೋಕಕ್ಕೂ ಹಾಳು ನಮ್ಮ ಅವನತಿಗೂ ಕಾರಣ ಎಂದಾದೀತು. ಪ್ರತಿಯೊಬ್ಬ ನಾಯಕನಿಗೂ-ರಾಜನಿಗೂ-ಅಧಿಕಾರಿಗೂ ಬೃಹತ್ ಯೋಜನೆ ಹಮ್ಮಿಕೊಳ್ಳುವ ಪೂರ್ವದಲ್ಲಿ ಯಾವ ಆಲೋಚನೆ ಇರಬೇಕೆಂದು ಕವಿ ಮತ್ತೆ ಹೇಳುತ್ತಿದ್ದಾನೆ. ಹಿಂದೆ ಇಂತಹುದೇ ಒಂದು ಶ್ಲೋಕದಲ್ಲಿ ಅನರ್ಥವನ್ನು ಹೇಗೆ ತಡೆಯಬಹುದೆಂದು ವರ್ಣಿಸಿದ್ದಾನೆ._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ