ರಾಮಾಯಣ ೧೬೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೮🏝📖     

*ಪುನಃ ಪ್ರಾಪ್ತೇ ವಸಂತೇ ತು ಪೂರ್ಣಃ ಸಂವತ್ಸರೋಭವತ್ | ಪ್ರಸವಾರ್ಥಂ ಗತೋ ಯಷ್ಟುಂ ಹಯಮೇಧೇನ ವೀರ್ಯವಾನ್ ||*

_ಮೊದಲು ನಿಶ್ಚಯಿಸಿದಂತೆ ದಶರಥನು ವಸಂತಪೂರ್ಣಿಮೆಯ ದಿನ ಸಾಂಗ್ರಹಣೇಷ್ಟಿಯನ್ನು ಮಾಡಿ ಅಶ್ವಮೇಧಯಾಗಕ್ಕೆ ದೀಕ್ಷೆ ತೊಟ್ಟನು. ನಾಲ್ಕು ವರ್ಣದವರೊಡನೆ ನಾಲ್ಕೂ ದಿಕ್ಕಿಗೂ ಅಶ್ವವು ಪರ್ಯಟನೆ ಹೊರಟಿತು. ಇತ್ತ ರಾಜನು ದೀಕ್ಷೆ ಸ್ವೀಕರಿಸಿದ ನಂತರ ಅನೇಕ ವಿಧಿನಿಯಮಗಳನ್ನು ಅನುಸರಿಸಲಾರಂಭಿಸಿದನು. ಒಮ್ಮೆ ಪ್ರಾರ್ಥನೆ ನಡೆಸಿ ಕಂಕಣ ತೊಟ್ಟರೆ ಯಜ್ಞ ಮುಗಿಯುವ ತನಕ ಬ್ರಹ್ಮಚರ್ಯ ಪಾಲಿಸಬೇಕು. ಕಾಯಾ-ವಾಚಾ-ಮನಸಾ ಸ್ತ್ರೀ ಸಂಪರ್ಕ ನಿಷಿದ್ಧ. ದ್ಯೂತ-ಬೇಟೆ-ಪಾನ-ನಿಷಿದ್ಧ ಆಹಾರ ಸೇವನೆ-ಹಗಲು ನಿದ್ರೆ- ಧಾರಾಳ ನಿದ್ರೆ- ಆಲಸ್ಯ- ಹರಟೆ ಮೊದಲಾದ ವ್ಯರ್ಥಾಲಾಪ- ಪರನಿಂದೆ-ಹಿಂಸೆ-ಅನಿಯಮಿತ ಆಹಾರ ಇವೆಲ್ಲವೂ ನಿಷಿದ್ಧ. ಹಾಗಾಗಿ ಯಜ್ಞದ ಸಂಕಲ್ಪ ಮಾಡಿದರೆ ಸಾಲದು. ಅದಕ್ಕೆ ತಕ್ಕುದಾದ ವ್ರತಾನುಷ್ಠಾನವೂ ಬೇಕು. ಹಾಗಿದ್ದರೆ ಮಾತ್ರ ಯಜ್ಞದ ಫಲ ಸಿಗಬಹುದು. ಶ್ರೌತ ಪ್ರಕ್ರಿಯೆಯಂತೆ ಮೊದಲು ಸಾಂಗ್ರಹಣೇಷ್ಟಿ ನಡೆಸಿ ಅನಂತರ ಸಾವಿತ್ರ್ಯಾದಿ ಕರ್ಮಗಳನ್ನು ನಿಯತವಾಗಿ ಮಾಡುತ್ತಿದ್ದನು. ಹದಿಮೂರು ಅಮಾವಾಸ್ಯೆ ಕಳೆದು ಅಂದರೆ ವಸಂತದ ಅಮಾವಾಸ್ಯೆಯೂ ಸೇರಿ ಫಾಲ್ಗುಣದ ಅಮಾವಾಸ್ಯೆ ಕಳೆದು ಪುನಃ ವಸಂತ ಉದಯಿಸಿದಾಗ ಅಶ್ವಮೇಧದ ಪ್ರಕ್ರಿಯೆ ಆರಂಭಿಸಿದನು. ಅಶ್ವಮೇಧವೆಂದರೆ ಕೆಲವರು  ಭಾವಿಸಿದಂತೆ ಕುದುರೆಯ ಬಲಿ ಮಾತ್ರವಲ್ಲ. ತಾನೂ ಒಂದು ವರ್ಷ ಎಲ್ಲಾ ಸುಖಸಾಧನಗಳಿಗೆ ತಿಲಾಂಜಲಿ ಇತ್ತು, ಇಂದ್ರಿಯಗಳನ್ನು ನಿಗ್ರಹಿಸಿ ದೀಕ್ಷಿತನಾಗಿ ತನ್ನನ್ನೂ ಭಗವಂತನಿಗೆ ಸಮರ್ಪಿಸಿಕೊಳ್ಳಬೇಕು. ಕುದುರೆಗಾದರೂ ಸಿಕ್ಕಿದ್ದು ತಿನ್ನುವ ಬೇಕಾದಲ್ಲಿ ತಿರುಗುವ ಅವಕಾಶ ಇದ್ದರೆ ರಾಜನಿಗೂ ಅದು ಕಟ್ಟುನಿಟ್ಟು. ದಿನಕ್ಕೆ ಮೂವತ್ತೆರಡು ತುತ್ತು ಮಾತ್ರ ಭೋಜನ. ಏಕಾದಶಿ ಉಪವಾಸ ಇತ್ಯಾದಿ. ಹಾಗಾಗಿಯೇ ಎಲ್ಲಾ ರಾಜರೂ ಸಾಮರ್ಥ್ಯ ಇದ್ದರೂ ಅಶ್ವಮೇಧ ಮಾಡುತ್ತಿರಲಿಲ್ಲ. ಎಲ್ಲೋ ಸಗರ, ನಹುಷನಂತಹ ಸಾಹಸಿ ಹಾಗೂ ಶ್ರದ್ಧಾವಂತರು, ದಶರಥ-ರಾಮ-ಯುಧಿಷ್ಠಿರನಂತಹ ಮೇರು ವ್ಯಕ್ತಿತ್ವದವರು ಮಾತ್ರವೇ ಆಚರಿಸುತ್ತಿದ್ದರು. ಹಾಗಿಲ್ಲದಿದ್ದರೆ ರಾವಣ,ಜರಾಸಂಧ, ಶಿಶುಪಾಲ ಮೊದಲಾದವರು ಸಾಕಷ್ಟು ಅಶ್ವಮೇಧ ನಡೆಸುತ್ತಿದ್ದರು. ಯಾಗ ಮಾಡುವ ಯೋಗ್ಯತೆ ಸಂಪಾದಿಸುವುದು ಬಹಳ ಮುಖ್ಯ._

*ಭವಾನ್ ಸ್ನಿಗ್ಧಃ ಸುಹೃನ್ಮಹ್ಯಂ ಗುರುಶ್ಚ ಪರಮೋ ಮಹಾನ್ | ವೋಢವ್ಯೋ ಭವತಾ ಚೈವ ಭಾರೋ ಯಜ್ಞಸ್ಯ ಚೋದ್ಯತಃ ||*

_ಇಷ್ಟೆಲ್ಲಾ ತಯಾರಿ ನಡೆಸಿದ ಮೇಲೆ ವಸಿಷ್ಠರ ಬಳಿ ದಶರಥನು ಹೀಗೆ ನಿವೇದಿಸಿಕೊಂಡನು-  ಗುರುಗಳೇ ಈ ಯಜ್ಞವು ಶಾಸ್ತ್ರವಿಧಿಯನ್ನು ಮೀರದಂತೆ ನಿರ್ವಿಘ್ನವಾಗಿ ನೆರವೇರಲಿ. ತಾವು ನನಗೆ ಸ್ನೇಹಿತರೂ, ನನ್ನ ಮನದ ಕತ್ತಲೆ ಕಳೆಯುವ ಗುರುಗಳೂ ಆಗಿದ್ದೀರಿ. ಆದ್ದರಿಂದ ಈ ಯಜ್ಞದ ಸಂಪೂರ್ಣ ಭಾರವನ್ನು ತಾವು ಹೊತ್ತು ನಮ್ಮನ್ನು ಬೆಳಕಿನೆಡೆಗೆ ಮುನ್ನಡೆಸಬೇಕೆಂದು ವಿನಂತಿಸುತ್ತಿದ್ದೇನೆ. ವಸಿಷ್ಠರು ಮಂತ್ರಿಗಳು-ಉಪಾಧ್ಯಾಯರು-ಮಿತ್ರರು-ಮಾರ್ಗದರ್ಶಕರು ಎಲ್ಲವೂ ಹೌದು ದಶರಥನಿಗೆ. ಒಬ್ಬನನ್ನು ರಾಜನು ನೇಮಕ ಮಾಡಿಕೊಳ್ಳುವಾಗ ಅವನಿಗೆ ಹುದ್ದೆಗೆ ಬೇಕಾದ ಅರ್ಹತೆ ಮಾತ್ರ ನೋಡದೇ ಬೇರೆ ಗುಣಗಳೂ ಇವೆಯಾ ಎಂದು ಪರೀಕ್ಷಿಸಬೇಕು. ಆಗ ಅಂತಹವರು ಯಾವ ಪಾತ್ರವನ್ನಾದರೂ ನಿರ್ವಹಿಸಲು ಶಕ್ತರಿರುತ್ತಾರೆ. ಈ ಬ್ರಹ್ಮರ್ಷಿ ವಸಿಷ್ಠರು ಅಂತಹ ಒಂದು ಮಹತ್ವದ ಪಾತ್ರ. ದಶರಥನ ಪಾಲಿಗೆ ಆತ್ಮೀಯ ಮಿತ್ರರು, ಆಪತ್ತಿನಲ್ಲಿ ಮಾರ್ಗದರ್ಶಕರು, ಸಮಯಕ್ಕೆ ನೆರವಾಗುವವರು ಎಲ್ಲವೂ ಹೌದು. ನಾಯಕನೆನಿಸಿದವನು ತಾನೊಬ್ಬನೇ ಎಲ್ಲಾ ಜವಾಬ್ದಾರಿ ಹೊರದೆ ಕೆಲಸ ಕಾರ್ಯಗಳನ್ನು ಸಮರ್ಥರಿಗೆ ಹಂಚಿ ತಾನು ಮುನ್ನಡೆಸಬೇಕು ಹಾಗೂ ಮೇಲ್ವಿಚಾರಿಸಬೇಕು. ಇಲ್ಲೂ ದಶರಥನು ಯಜ್ಞದಲ್ಲಿ ಬ್ರಹ್ಮನಾಗಿ ಋಷ್ಯಶೃಂಗನಿಗೆ, ಉಳಿದ ಪ್ರಕ್ರಿಯೆಗೆ ವಸಿಷ್ಠನನ್ನು ನೇಮಿಸಿ ತನ್ನ ಹೆಗಲ ಮೇಲಿನ ಅರ್ಧ ಭಾರವನ್ನು ಇಳಿಸಿಕೊಂಡನು. ಒಂದು ಒಳ್ಳೆಯ ಕೆಲಸ ಕೈಗೊಂಡಾಗ ಕಾಲೆಳೆಯುವ ಮಂದಿ ಸಾವಿರಾರು. ಸಾಮರಸ್ಯದ ದೃಷ್ಟಿಯಿಂದ ಸಮಾಜದಲ್ಲಿ ಬೆರೆತರೆ ಕೆಲವರಿಗೆ ಅದು ಪೃಷ್ಠಕ್ಕೆ ಬರೆ ಇಟ್ಟ ಹಾಗಾಗುತ್ತದೆ. ಅಂತಹುದರಲ್ಲಿ ಲೋಕೋದ್ಧಾರ ಹಾಗೂ ಆತ್ಮೋದ್ಧಾರದ ದೃಷ್ಟಿಯಲ್ಲಿ ನಡೆಸಹೊರಟ ಅಶ್ವಮೇಧಕ್ಕೆ ಎಷ್ಟು ವಕ್ರದೃಷ್ಟಿ ಬಿದ್ದಿರಬಹುದು. ಅಂತಹುದನ್ನು ತಡೆಯಲು ಎಲ್ಲವನ್ನೂ ನುಂಗುವ ವಸಿಷ್ಠರ ಬ್ರಹ್ಮದಂಡವೇ ಸರಿ ಎಂದು ನಿರ್ಧರಿಸಿದ ದಶರಥನ ಜಾಣ್ಮೆ ಗಮನಿಸಬಹುದು. ದ್ರವ್ಯ-ದೇವತೆ-ಕರ್ಮ ಯಾವುದೂ ಲೋಪವಾಗದಂತೆ ಮಾಡುವ ಅವನ ಕಾಳಜಿ ನಮಗೆಲ್ಲ ಆದರ್ಶ. ಲೋಕದ ಭಾರವೇ ಹೊರುವ ವಸಿಷ್ಠರಂತಹ ದಿವ್ಯಚೇತನರಿಗೆ ಇವೆಲ್ಲಾ ನಿತ್ಯಕರ್ಮವಿದ್ದಂತೆ. ಹಾಗಾಗಿಯೇ ದಶರಥನು ಅಜ್ಞಾನ ಕಳೆದು ಮುನ್ನಡೆಸೆಂದು ಗುರುವಿನ ಬಳಿ ತಲೆಬಾಗಿ ನಮಿಸಿದ್ದು._

 

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩