ರಾಮಾಯಣ ೧೬೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೪🏝📖       

*ವವ್ರೇ ಪ್ರಸಾದಂ ವಿಪ್ರೇಂದ್ರಾತ್ಮಾ ವಿಪ್ರಂ ಮನ್ಯುರಾವಿಶೇತ್* 

_ಋಷ್ಯಶೃಂಗನ ಆಗಮನವೇನೋ ಆಯಿತು. ಆದರೆ ತಂದೆ ಈ ಕೃತ್ಯದಿಂದ ಕೋಪಗೊಂಡರೆ ಮತ್ತೆ ರಾಜ್ಯದ ಗತಿಯೇನಾದೀತು! ಹೀಗೆ ಆಲೋಚಿಸಿದ ರೋಮಪಾದನು ಮೊದಲು ವಿಭಾಂಡಕನು ತನ್ನ ಮೇಲೆ ಕೋಪಿಸದಿರಲೆಂದು ಋಷ್ಯಶೃಂಗನ ಬಳಿ ಪ್ರಾರ್ಥಿಸಿದನು‌. ರಾಜನಾದವನು ತನ್ನ ಕಾರ್ಯ ಒಳಿತಿಗೇ ಮೀಸಲಾಗಿದ್ದರೂ ಮುಂದಿನ ಪರಿಣಾಮವನ್ನು ಚಿಂತಿಸಬೇಕು. ದೇಶಕ್ಕೆ ಒಳಿತಾಗುವುದೆಂದು ಒಮ್ಮೆಲೇ ಯಾವ ಕಾರ್ಯವನ್ನೂ ಮಾಡಬಾರದು. ಪರಿಸರ ಹಾನಿಕರ ಎಂದು ಏಕಾಏಕಿ ಪ್ಲಾಸ್ಟಿಕ್-ಪೆಟ್ರೋಲ್ ಮೊದಲಾದವನ್ನು ನಿಷೇಧಿಸಿದರೆ ಜನಜೀವನ ಅಸ್ತವ್ಯಸ್ತವಾದೀತು. ವಿಭಾಂಡಕನಿಗೆ ತಿಳಿಸದೇ ಮಗನನ್ನು ಕರೆದೊಯ್ದು ಮತ್ತೆ ಶಾಪಕ್ಕೊಳಗಾಗಿ ರಾಜ್ಯ ಬರದತ್ತ ಸಾಗಬೇಕೇ! ಹಾಗಾಗಿ ಮೊದಲು ತನ್ನ ಕಾರ್ಯಕ್ಕೆ ಕ್ಷಮೆಯಾಚಿಸಿ ತಂದೆ ಕೋಪಗೊಳ್ಳದಿರಲೆಂದು ಮಗನನ್ನು ಯಾಚಿಸಿದನು. ರಾಜನಾದರೂ ತಪಶ್ಶಕ್ತಿಯ ಎದುರು ನಿಸ್ಸಹಾಯಕ ಹಾಗೂ ವಿನೀತಭಾವ._

*ಅಂತಃಪುರಂ ಪ್ರವಿಶ್ಯಾಸ್ಮೈ ಕನ್ಯಾಂ ದತ್ವಾ ಯಥಾವಿಧಿ| ಶಾಂತಾಂ ಶಾಂತೇನ ಮನಸಾ ರಾಜಾ ಹರ್ಷಮವಾಪ ಸಃ||*

_ರಾಜ್ಯದ ಕ್ಷಾಮ ನೀಗಿ ಲಕ್ಷಾಂತರ ಜನರ ಪಾಲಿಗೆ ಬೆಳಕಾದವನನ್ನು ಸತ್ಕರಿಸುವ ಪರಿ ಇದು. ಸಮಾಧಾನ ಚಿತ್ತದಿಂದ ಋಷ್ಯಶೃಂಗನನ್ನು ಅಂತಃಪುರಕ್ಕೆ ಕರೆದೊಯ್ದು ವಿಧಿವತ್ತಾಗಿ ತನ್ನ ಮಗಳನ್ನು ಧಾರೆಯೆರೆದು ಕೊಟ್ಟು ಆನಂದಪಟ್ಟನು. ವಾಲ್ಮೀಕಿ ಮಹರ್ಷಿ ಈ ಶ್ಲೋಕದಲ್ಲಿ ಎರಡು ಶಬ್ದಗಳಿಂದ ರಾಜನ ಭಾವವನ್ನು ತೆರೆದಿಟ್ಟಿದ್ದಾನೆ. ಮೊದಲಾಗಿ ಕೊಡುವಾಗ ಅಯ್ಯೋ ಕೊಡಬೇಕಲ್ವಾ  ಅಥವಾ  ಇವನ ಮನವು ತಣಿಯಬೇಕಲ್ವಾ ಎಂದು ಉದ್ವೇಗಮಾನಸನಾಗಿ ಕೊಟ್ಟಿದ್ದಲ್ಲ. ಯೋಗ್ಯನೊಬ್ಬನು ಮನೆಗೆ ಬಂದಾಗ ತನ್ನ ಧನವನ್ನು ಕೊಟ್ಟು ಸತ್ಕರಿಸುವ ನಿಜವಾದ ಶಾಂತ ಮನಸ್ಸು ರಾಜನದು. ಸ್ತ್ರೀ ವಾದಿಗಳು ಆಕ್ಷೇಪಿಸುವ ಯಾವ ಸಂಗತಿಯೂ ಇಲ್ಲಿಲ್ಲ. ಋಷ್ಯಶೃಂಗನು ಬಹಳ ವರ್ಷ ಬರದಿಂದ ಬಳಲಿದ್ದ ನಾಡಿಗೆ ಮಳೆಯನ್ನೇ ತರಿಸಿದವನು. ವಿಜ್ಞಾನಿ ಎನ್ನಬೇಕೋ, ಮಹಾತ್ಮ ಎನ್ನಬೇಕೋ, ಭಗವಂತನ ಅವತಾರ ಎನ್ನಬೇಕೋ ನೀವೇ ನಿರ್ಧರಿಸಬಹುದು. ಈವರೆಗೆ ಯಾವ ಸ್ತ್ರೀಯನ್ನೂ ಕಣ್ಣೆತ್ತಿ ನೋಡದ ನಿಜಾರ್ಥದ ಬ್ರಹ್ಮಚಾರಿ. ಯಾವ ರೋಗಾದಿಗಳಿಂದ ಬಳಲದೇ ಪುಷ್ಟಕಾಯನಾಗಿ, ಅದರಲ್ಲೂ ಬಹಳ ವಿದ್ಯಾವಂತನಾಗಿದ್ದಾನೆ. ಇಂತಹ ಗಂಡು ಸಿಗುವುದೇ ಪುಣ್ಯ. ಹಾಗಾಗಿ ಶಾಂತೆಯು ಮರುಮಾತಿಲ್ಲದೆ ವರಿಸಿದಳು. ಕೊಟ್ಟ ನಂತರ ರಾಜನು ಹರ್ಷಗೊಂಡನು‌. ಇಲ್ಲೂ ಮಹರ್ಷಿ ನಂತರವಾದರೂ ರಾಜನು ದುಃಖಿಸಿದನೇ ಎಂದರೆ ಇಲ್ಲವೆನ್ನುತ್ತಾನೆ. ಯೋಗ್ಯನಿಗೆ ಕೊಟ್ಟ ನಂತರ ಇನ್ನಷ್ಟು ಆನಂದವೇ ಸಿಗುವುದು. ಮಗಳನ್ನು ಸಮರ್ಥನಿಗೆ ಕೊಟ್ಟ ತಂದೆ ಕಣ್ಣೀರುಗರೆಯುವ ಪ್ರಸಂಗ ಬರುವುದಿಲ್ಲ. ಹಾಗಾಗಿಯೇ ರಾಜನು ಅವರ ಜೋಡಿಯನ್ನು ಕಂಡು ಹರ್ಷಿಸಿದ್ದು. ಅಲ್ಲೇ ಬಹಳ ಕಾಲ ರಾಜನ ಕೋರಿಕೆಯಂತೆ ಸುಖವಾಗಿ ನೆಲೆಸಿದನು ಋಷ್ಯಶೃಂಗ. ಮಾವನ ಮನೆಯಲ್ಲಿ ಉಳಿದಷ್ಟೂ ಋಷ್ಯಶೃಂಗನಿಗೆ ಆನಂದ ಸಿಕ್ಕಿತೋ ಇಲ್ಲವೋ ಮಗಳಾದ ಶಾಂತೆಗಂತೂ ಸಹಜವಾಗಿ ಸಂತೋಷವಾಗಿರುತ್ತದೆ. ಅಪ್ಪ-ಅಮ್ಮನ ಎದುರು ಪತಿಯ ಜೊತೆಗೆ ತನ್ನ ದಾಂಪತ್ಯ ಕಟ್ಟಿಕೊಳ್ಳುತ್ತಾ  ಸುಖಪಡುವ ಯೋಗ ಎಷ್ಟು ಹೆಣ್ಣುಮಕ್ಕಳಿಗೆ ತಾನೇ ಸಿಗುವುದು. ಆ ನಿಟ್ಟಿನಲ್ಲಿ ಸ್ತ್ರೀ ಪರ ಚಿಂತಕರು ರೋಮಪಾದನ ಈ ಕಾರ್ಯವನ್ನು ಉದಾರ ಮನಸ್ಸಿನಿಂದ ಹೊಗಳುವುದು ಬಿಟ್ಟರೆ ಇನ್ನೇನೂ ಮಾಡಲಾಗದು._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩