ಚಾರುದತ್ತ ೧೯
👳♀ಚಾರುದತ್ತ ಬೆಳಕು- ೧೯👳♀
*मयि द्रव्यक्षयक्षीणे स्त्रीद्रव्येणानुकम्पित: । अर्थत: पुरुषो नारी या नारी सार्थत: पुमान् ।*
_ಚಾರುದತ್ತನ ಮಾತು. ಇವತ್ತಿಗೆ ನಾನು ಬದುಕಿದ್ದೂ ಸತ್ತಂತಾದೆ. ವಸಂತಸೇನೆಯು ನನ್ನ ಬಳಿ ಅಡವಿಟ್ಟ ಆಭರಣವು ಕಳ್ಳನ ಪಾಲಾಯಿತು. ಇದನ್ನರಿತ ನನ್ನ ಬ್ರಾಹ್ಮಣ ಪತ್ನಿಯು ತನ್ನ ಪರಂಪರೆಯಲ್ಲಿ ಬಂದ ತುಂಬಾ ಮೌಲ್ಯದ ಮುತ್ತಿನಹಾರವನ್ನು ಈ ವಿದೂಷಕನ ಮುಖಾಂತರ ನನಗೆ ನೀಡುತ್ತಿದ್ದಾಳೆ. ನನ್ನ ಸಂಪತ್ತು ಸಂಪೂರ್ಣ ನಷ್ಟವಾದ ಕಾರಣ ಸ್ತ್ರೀ ಸಂಪತ್ತಿನಿಂದ ಅನುಕಂಪಕ್ಕೆ ಒಳಗಾಗಿರುವೆ. ಅಯ್ಯೋ ಪಾಪ ಪತಿ ಪರಾಧೀನನಾಗುವುದು ಬೇಡ ಅಥವಾ ಋಣದಿಮದ ಕೂಡಿರುವುದು ಬೇಡ ಎಂದು ಸ್ತ್ರೀಯು ನನ್ನ ಬಗೆಗೆ ಅನುಕಂಪ ತಾಳುತ್ತಿದ್ದಾಳೆ. ಲೋಕದ ಮಟ್ಟಿಗೆ ಇದು ಪ್ರಶಂಸಾರ್ಹ ಅಥವಾ ಅವಶ್ಯ ಮಾಡಬೇಕಾದ ಕರ್ತವ್ಯವಾಗಿದ್ದರೂ ನನ್ನ ಮಟ್ಟಿಗೆ ಇದು ನನ್ನನ್ನೇ ಕಳೆದುಕೊಂಡಂತೆ ಸರಿ. ಏಕೆಂದರೆ ಪೌರುಷವನ್ನು ಆಶ್ರಯಿಸಿ ಧನ ಸಂಪಾದಿಸದ ನಾನು ಸ್ತ್ರೀಯಂತೆ ಆಗಿದ್ದೇನೆ ಅಥವಾ ಸ್ತ್ರೀಯೇ ಆಗಿದ್ದೇನೆ. ನನ್ನ ಪತ್ನಿಯಾದರೋ ಸಂಪತ್ತನ್ನು ಕೊಡುವುದರ ಮೂಲಕ ಅಥವಾ ಸಂಪಾದಿಸುವ ಮೂಲಕ ಪುರುಷಳಾಗಿದ್ದಾಳೆ. ಧನಕ್ಕಾಗಿ ಮಹಿಳೆಯರನ್ನು ಆಶ್ರಯಿಸಿದ ನನ್ನ ಪುರುಷತ್ವಕ್ಕೆ ಧಿಕ್ಕಾರವಿರಲಿ ಎಂಬ ಭಾವ. ಇಲ್ಲಿ ಲೋಕಕ್ಕೂ ಒಂದು ಪಾಠವಿದೆ. ಸಂಪತ್ತಿಗಾಗಿ ತಾನು ದುಡಿಯದೆ ಪತ್ನಿಯ ಸಂಪತ್ತಲ್ಲಿ ಕಾಲ ಕಳೆಯುವ ಪತಿ ಪುರುಷನಾಗಿದ್ದೂ ಸ್ತ್ರೀಯಂತೆಯೇ ಬಾಳುವನು. ಅವನ ಮಡದಿಯಾದರೋ ನಾರಿಯಾದರೂ ಧನಸಂಗ್ರಹದ ಕಾರಣ ಪುರುಷಸದೃಶಳು.ಹಾಗಾಗಿ ಪುರುಷನ ಲಕ್ಷಣವೇ ಧರ್ಮಾನುಸಾರ ಧನಸಂಗ್ರಹ ಹಾಗೂ ತನ್ಮೂಲಕ ಗೃಹಸ್ಥಜೀವನ ಪಾಲನೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ