ರಾಮಾಯಣ ೧೩೮
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೮ 🏝📖
*ಪ್ರಕೃತೀನಾಂ ಹಿತೇ ಯುಕ್ತಂ ಪ್ರಕೃತಿಪ್ರಿಯಕಾಮ್ಯಯಾ ಯೌವರಾಜ್ಯೇನ ಸಂಯೋಕ್ತುಂ ಐಚ್ಛತ್ಪ್ರೀತ್ಯಾ ಮಹೀಪತಿಃ*
_ಸುಂದರ ಕಾಂಡದಿಂದ ಆರಂಭವಾದ ರಾಮಾಯಣ ಲೇಖನ ಯಜ್ಞ ಮತ್ತೆ ಬಾಲಕಾಂಡದೆಡೆಗೆ ಹೊರಳಿದೆ. ಇಷ್ಟು ದಿನ ಬರೆಯದಿದ್ದುದಕ್ಕೆ ಕ್ಷಮೆ ಕೋರುತ್ತಾ ಮುಂದುವರೆಸುತ್ತಿದ್ದೇನೆ._
_ಬಾಲಕಾಂಡದ ಇಪ್ಪತ್ತನೇ ಶ್ಲೋಕವಿದು. ನಾರದರು ವಾಲ್ಮೀಕಿಮಹರ್ಷಿಗಳಿಗೆ ಹೇಳುವ ಮಾತು. ದಶರಥನು ಕೇವಲ ಹಿರಿಯನೆಂಬ ಆಧಾರದಲ್ಲಿ ರಾಮನನ್ನು ಪಟ್ಟಗಟ್ಟಲು ಯೋಚಿಸಿದ್ದಲ್ಲ. ಅನೇಕರು ಹಿರಿಯರೆಂದು ಹಿಂದುಮುಂದು ನೋಡದೇ ಅಧಿಕಾರದಲ್ಲಿ ಇರಿಸುತ್ತಿದ್ದರು ಎಂದು ತಪ್ಪು ಅಭಿಪ್ರಾಯಪಡುತ್ತಾರೆ. ಆದರೆ ಹೆಚ್ಚಿನ ಬಾರಿ ಭಾರತೀಯ ಇತಿಹಾಸದಲ್ಲಿ ಹಿರಿಯರು ಕಿರಿಯರು ಎನ್ನುವುದಕ್ಕಿಂತ ಯೋಗ್ಯರಿಗೆ ಪಟ್ಟ ಸಿಕ್ಕಿದೆ ಎನ್ನುವುದು ಸತ್ಯ. ರಾಮನು ಪ್ರಜೆಗಳ ಪ್ರೀತಿಗೆ ಪಾತ್ರನಾದವನು ಹಾಗೂ ಪ್ರಜೆಗಳ ಹಿತಚಿಂತನೆಯಲ್ಲಿ ರತನಾದವನು. ಇದು ರಾಜನಾಗುವವನಿಗೆ ಅತ್ಯಂತ ಅವಶ್ಯವಾಗಿ ಇರಬೇಕಾದ ಗುಣ. ವಿದ್ವತ್ತು, ಪರಾಕ್ರಮ, ರೂಪ, ಜ್ಯೇಷ್ಠತೆ ಮೊದಲಾದ ಬೇರೆ ಗುಣಗಳಿಗಿಂತ ಪ್ರಜಾರಂಜನೆ ಮೊದಲ ಅರ್ಹತೆ. ಅದು ರಾಮನಲ್ಲಿ ಉಳಿದ ಮೂವರಿಗಿಂತ ಹೆಚ್ಚಿದ್ದ ಕಾರಣ ದಶರಥ ರಾಜಾರಾಮನನ್ನು ಕಾಣಲು ಬಯಸಿದನೇ ಹೊರತು ಕೇವಲ ಮೊದಲು ಜನಿಸಿದನೆಂಬ ಕಾರಣಕ್ಕಲ್ಲ. ಯಯಾತಿ ತನ್ನ ಕಿರಿಮಗನಾದ ಪುರುವನ್ನು ಅಧಿಕಾರದಲ್ಲಿ ಕೂಡಿಸಲೂ ಇಂತಹದೇ ಕಾರಣ ಮುಖ್ಯವಾಗಿತ್ತು._
*ಸ ಸತ್ಯವಚನಾದ್ರಾಜಾ ಧರ್ಮಪಾಶೇನ ಸಂಯತಃ ವಿವಾಸಯಾಮಾಸ ಸುತಂ ರಾಮಂ ದಶರಥಃ ಪ್ರಿಯಮ್*
_ದಶರಥನನ್ನು ಸ್ತ್ರೀ ಲಂಪಟ, ಚಂಚಲಮನಸ್ಥಿತಿಯವನು ಎಂದೆಲ್ಲಾ ಚಿತ್ರಿಸುವ ಬಣ್ಣಿಸುವ ಅನೇಕ ಜನರು ಈ ಎರಡು ಗುಣಗಳನ್ನು ಗಮನಿಸುವುದಿಲ್ಲ. ಸತ್ಯವಚನ ಹಾಗೂ ಧರ್ಮಕ್ಕನುಗುಣವಾಗಿ ವ್ಯವಹರಿಸುವುದು ಇವೆರಡೂ ಮಾನವ ಜೀವನದಲ್ಲಿ ಸದಾ ಅನುಸರಿಸಬೇಕಾದ ಗುಣಗಳು. ನಾವು ಇದೆರಡನ್ನು ಅನುಸರಿಸದೇ ದಶರಥನನ್ನು ಎಷ್ಟು ಟೀಕಿಸಿದರೂ ಅದು ಆಕಾಶಕ್ಕೆ ಮುಖಮಾಡಿ ಉಗುಳಿದಂತೆಯೇ ಸರಿ. ಆಡಿದ ಮಾತನ್ನು ಎಂದಿಗೂ ತಪ್ಪದಿರುವುದು ದಶರಥನ ಮಹಾ ಗುಣ. ಅಡಿಗಡಿಗೆ ಮಾತು ಮರೆಯುವ, ಸುಳ್ಳಾಡುವ ನಾವು ರಾಮನನ್ನು ಕಾಣಬೇಕಾದರೆ ದಶರಥನ ಈ ಗುಣವನ್ನು ಅಳವಡಿಸಿಕೊಳ್ಳಬೇಕು. ಎರಡನೆಯದು ಧರ್ಮಾಚರಣೆ. ಕಾಯಾ ವಾಚಾ ಮನಸಾ ಚಿಂತನೆ ಒಂದಾಗಿರುವುದು. ರಾಮನನ್ನು ಕಾಡಿಗೆ ಕಳುಹಲು ಇವುಗಳೇ ದಶರಥನಿಗೆ ಮುಖ್ಯ ಕಾರಣ ಹೊರತು ಇನ್ನಾವುದೂ ಅಲ್ಲ. ಸ್ತ್ರೀ ಮೋಹಿತನಾಗಲು ಅವನಾಗಲೇ ವೃದ್ಧ. ರಾಮನ ಸಾನ್ನಿಧ್ಯದಲ್ಲಿ ಚಂಚಲತೆ ಮೊದಲಾದ ಗುಣಗಳು ಎಂದಿಗೂ ಅವನಲ್ಲಿ ಪ್ರಕಟವಾಗಲಾರವು. ಹೀಗಾಗಿ ಧರ್ಮದ ಪಾಶಕ್ಕೆ ಕಟ್ಟುಬಿದ್ದು ರಾಮನ ವಿವಾಸನ ಅಂದರೆ ಅರಣ್ಯವಾಸ ನಡೆಯಿತು. ಅದು ದಶರಥನ ದೌರ್ಬಲ್ಯವಲ್ಲ.ನನ್ನ ಪ್ರಕಾರ ಧರ್ಮದಂತೆ ಅವನು ನಡೆದದ್ದು ಅವನ ಹೆಗ್ಗಳಿಕೆ._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ