ರಾಮಾಯಣ ೧೩೯
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೯ 🏝📖
*ಪ್ರಹೃಷ್ಟಮುದಿತೋ ಲೋಕಃ ತುಷ್ಟಃಪುಷ್ಟಃ ಸುಧಾರ್ಮಿಕಃ ನಿರಾಮಯೋ ಹ್ಯರೋಗಶ್ಚ ದುರ್ಭಿಕ್ಷಭಯವರ್ಜಿತಃ*
*ನ ಪುತ್ರಮರಣಂ ಕಿಂಚಿದ್ದ್ರಕ್ಷ್ಯಂತಿ ಪುರುಷಾಃ ಕ್ವಚಿತ್ ನಾರ್ಯಶ್ಚಾವಿಧವಾ ನಿತ್ಯಂ ಭವಿಷ್ಯಂತಿ ಪತಿವ್ರತಾಃ*
_ರಾಮರಾಜ್ಯದ ಲಕ್ಷಣಗಳನ್ನು ಇಲ್ಲಿ ನಾರದರು ವರ್ಣಿಸುತ್ತಿದ್ದಾರೆ. ಬಾಲಕಾಂಡದ ಮೊದಲ ಸರ್ಗದ ಎಂಭಂತ್ತೆಂಟನೇ ಶ್ಲೋಕವಿದು. ರಾಮ ರಾಜ್ಯದಲ್ಲಿ ಪ್ರಜೆಗಳು ಸದಾ ಆನಂದಭರಿತರಾಗಿದ್ದರು. ದುಃಖ ಪಡಲು ಯಾವುದಾದರೂ ಕೊರತೆ ಕಾಣದಾಗಿತ್ತು. ಮನಸ್ಸಿನಲ್ಲಿ ಸಂತೋಷ, ದೈಹಿಕವಾಗಿ ಪುಷ್ಟರಾಗಿದ್ದರು. ಇದಕ್ಕೆ ಮೂಲಕಾರಣ ಜನರು ಧರ್ಮವನ್ನು ಅನುಸರಿಸುತ್ತಿದ್ದರು. ಧರ್ಮವೇ ಜೀವನಕ್ರಮವಾಗಿತ್ತು. ಈಗ ನಾವೆಲ್ಲರೂ ಅರ್ಥಮೂಲರು ಅಥವಾ ಕಾಮಮೂಲರಾಗಿದ್ದೇವೆ. ಧರ್ಮವನ್ನು ಇವೆರಡಕ್ಕಾಗಿ ಕೆಲವೊಮ್ಮೆ ತ್ಯಜಿಸುತ್ತೇವೆ. ಪ್ರಜೆಗಳು ಯಾವ ರೋಗಗಳಿಲ್ಲದೆ ದೃಢಕಾಯರಾಗಿ ಬದುಕುತ್ತಿದ್ದರು. ಯಾವ ವಿಧದ ಮಾನಸಿಕ ಚಿಂತೆಯೂ ಜನರಿಗೆ ಇರಲಿಲ್ಲ. ಬರಗಾಲದ ಭಯವು ಜನರನ್ನು ಬಾಧಿಸುತ್ತಿರಲಿಲ್ಲ. ಸದಾ ಸಸ್ಯಸಮೃದ್ಧವಾಗಿ ಜಲಸಮೃದ್ಧಿಯು ಇದ್ದ ಕಾರಣ ಬರದ ಛಾಯೆಯೂ ಸುಳಿಯುತ್ತಿರಲಿಲ್ಲ. ತಂದೆ ತಾಯಿ ಬದುಕಿದ್ದಾಗಲೇ ಮಕ್ಕಳು ಸಾಯುತ್ತಿರಲಿಲ್ಲ. ಸಾವು ಜೀವಿಗೆ ನಿಶ್ಚಿತವಾದುದು. ಆದರೆ ತಮ್ಮ ಕಣ್ಣೆದುರೇ ಮಕ್ಕಳು ಸಾಯುವುದನ್ನು ಪಾಲಕರೆಂದಿಗೂ ಬಯಸಲಾರರು. ಅಂತಹ ಸ್ಥಿತಿಯೂ ಬಂದಿರಲಿಲ್ಲ ರಾಮರಾಜ್ಯದಲ್ಲಿ. ನಾರಿಯರು ವಿಧವೆಯರಾಗುತ್ತಿರಲಿಲ್ಲ. ಪತಿಯ ಮರಣಕ್ಕೆ ಮುಂಚೆ ಮೃತರಾಗುತ್ತಿರಲಿಲ್ಲ. ಲೋಕದಲ್ಲಿ ಸಹಜವಾಗಿ ಪತಿಯ ವಯಸ್ಸಿಗಿಂತ ಪತ್ನಿ ಕಡಿಮೆ ವಯಸ್ಸಿನವಳು. ಹಾಗಿರುವಾಗ ಮರಣವೂ ಪತಿಯ ನಂತರ ಬರಬೇಕಾದದ್ದು. ಪತಿಯನ್ನು ಬಿಟ್ಟು ಪತ್ನಿಯರು, ಪತ್ನಿಯರನ್ನು ಬಿಟ್ಟು ಪತಿಯರ ಅನ್ಯಸ್ತ್ರೀ- ಪುರುಷರ ಸಂಗವು ಇರಲಿಲ್ಲ. ಸ್ತ್ರೀಯರು ಪತಿವ್ರತೆಯರಾಗಿದ್ದರು. ಪುರುಷರೂ ವಾಮಮಾರ್ಗ ಹಿಡಿಯುತ್ತಿರಲಿಲ್ಲ. ಶಾಸನದ ಭಯವಿದ್ದುದು ಒಂದು ಕಾರಣವಾದರೆ, ಜೀವನವು ಧರ್ಮಮೂಲವಾಗಿದ್ದುದು ಎರಡನೇ ಕಾರಣ._
*ನ ಚಾಗ್ನಿಜಂ ಭಯಂ ಕಿಂಚಿನ್ನಾಪ್ಸು ಮಜ್ಜಂತಿ ಜಂತವಃ ನ ವಾತಜಂ ಭಯಂ ಕಿಂಚಿನ್ನಾಪಿ ಜ್ವರಕೃತಂ ತಥಾ ನ ಚಾಪಿ ಕ್ಷುದ್ಭಯಂ ತತ್ರ ನ ತಸ್ಕರಭಯಂ ತಥಾ*
*ನಗರಾಣಿ ಚ ರಾಷ್ಟ್ರಾಣಿ ಧನಧಾನ್ಯಯುತಾನಿ ಚ ನಿತ್ಯಂ ಪ್ರಮುದಿತಾಃ ಸರ್ವೇ ಯಥಾ ಕೃತಯುಗೇ ತಥಾ*
_ರಾಮನಾಳ್ವಿಕೆಯಲ್ಲಿ ಬೆಂಕಿಯ ಭಯವಿರಲಿಲ್ಲ. ಅಗ್ನಿಯ ಪ್ರಕೋಪವಿಲ್ಲದ ಕಾರಣ ಅಗ್ನಿಶಾಮಕ ವಿಭಾಗವಿರಲಿಲ್ಲ. ಜನರು ನೀರಿನಲ್ಲಿ ಮುಳುಗಿ ಸಾಯುತ್ತಿರಲಿಲ್ಲ. ಬಿರುಗಾಳಿಯ ಭಯವಿರಲಿಲ್ಲ. ನಾನಾ ಬಗೆಯ ಜ್ವರಗಳಿಂದ ಜನರು ಬಳಲುತ್ತಿರಲಿಲ್ಲ. ಜ್ವರವು ರೋಗದಲ್ಲಿ ಪ್ರಬಲವಾದುದು. ಅನೇಕ ರೋಗಗಳ ಮುಖ್ಯಲಕ್ಷಣವೇ ಜ್ವರ. ಅನಾವೃಷ್ಟಿ ಉಂಟಾಗದ ಕಾರಣ ಹಸಿವು ಬಾಧಿಸುತ್ತಿರಲಿಲ್ಲ. ಆಹಾರದ ಸಮೃದ್ಧಿಯಿತ್ತು. ಕಳ್ಳರ ಭಯವಿರಲಿಲ್ಲ. ಕಳ್ಳತನ ಮಾಡುವವರನ್ನು ರಾಜನು ಕಠಿಣ ದಂಡನೆಗೆ ಒಳಪಡಿಸುತ್ತಿದ್ದ ಕಾರಣ ಕಳ್ಳತನ ನಡೆಯುತ್ತಿರಲಿಲ್ಲ. ಕೇವಲ ನಗರಗಳಲ್ಲಿ ಮಾತ್ರ ಇಂತಹ ಪರಿಸ್ಥಿತಿ ಇರದೇ ಹಳ್ಳಿ ಗ್ರಾಮ ಕೇರಿ ಹೀಗೆ ರಾಷ್ಟ್ರದ ಎಲ್ಲೆಡೆ ಧನ-ಧಾನ್ಯದ ಸಮೃದ್ಧಿ ನೆಲೆಸಿತ್ತು. ಕೃತಯುಗದ ಜನರಂತೆ ಜನರು ಸದಾ ಸುಖಿಗಳಾಗಿದ್ದರು. ಇದು ತ್ರೇತಾಯುಗದ ಜನರ ಸಹಜತೆ ಅಲ್ಲ. ಆದರೆ ರಾಮನ ಉತ್ತಮ ಆಡಳಿತದ ಕಾರಣ ಈ ಆನಂದವು ನೆಲೆಸಿತ್ತು. ರಾಮರಾಜ್ಯದ ವರ್ಣನೆ ಕೇಳಿಯೇ ಆನಂದವಾಗುತ್ತದೆ. ಒಂದು ವೇಳೆ ನಾವು ನೆಲೆಸಿದ್ದರೆ ಬಹುಶಃ ಸ್ವರ್ಗಸುಖ ಅದೇ ಆಗಿತ್ತೇನೋ!_
ಎಲ್ಲರಿಗೂ ಸೌರ ಕೃಷ್ಣಾಷ್ಟಮಿಯ ಶುಭಾಶಯಗಳು. ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ