ರಾಮಾಯಣ ೧೪೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೦ 🏝📖

*ಪಠನ್ದ್ವಿಜೋ ವಾಗೃಷಭತ್ವಮೀಯಾತ್ ಸ್ಯಾತ್ಕ್ಷತ್ರಿಯೋ ಭೂಮಿಪತಿತ್ವಮೀಯಾತ್ ||ವಣಿಗ್ಜನಃ ಪಣ್ಯಫಲತ್ವಮೀಯಾತ್ ಜನಶ್ಚ ಶೂದ್ರೋಪಿ ಮಹತ್ವಮೀಯಾತ್ ||*

_ರಾಮಾಯಣದ ಅಧ್ಯಯನವು ಎಲ್ಲಾ ವರ್ಣಗಳಿಗೂ ಉತ್ತಮ ಫಲವನ್ನೇ ನೀಡುತ್ತದೆ. ಬಹಳಷ್ಟು ಜನರಿಗೆ ಭ್ರಮೆಯಿದೆ ಸಂಸ್ಕೃತ ಗ್ರಂಥಗಳು ಬ್ರಾಹ್ಮಣರಿಗೆ ಮೀಸಲು, ನಮಗೆ ಸಂಬಂಧಿಸಿದ್ದಲ್ಲ. ನಮಗೆ ಅರ್ಥವಾಗುವಂತಹವೂ ಅಲ್ಲ ಇತ್ಯಾದಿ. ಆದರೆ ವಾಲ್ಮೀಕಿಗಳ ಗ್ರಂಥವು ಅದು ಲೋಕೋತ್ತರ. ಎಲ್ಲರ ಒಳಿತಿಗಾಗಿ ಮಾರ್ಗದರ್ಶನಕ್ಕಾಗಿ ರಚಿತವಾದುದು. ಯಾವುದಾದರೂ ಜಾತಿಗೆ ಮತಕ್ಕೆ ಸಂಬಂಧಿಸಿ ಬರೆದದ್ದಲ್ಲ. ರಾಮಾಯಣದ ಪಠನವು ಬ್ರಾಹ್ಮಣರಿಗೆ ಉತ್ತಮ ವಾಕ್ಶಕ್ತಿಯನ್ನು, ಕ್ಷತ್ರಿಯರಿಗೆ ಅಧಿಕಾರವನ್ನೂ, ವೈಶ್ಯರಿಗೆ ವ್ಯಾಪಾರದಲ್ಲಿ ಏಳ್ಗೆಯನ್ನೂ, ಶೂದ್ರರಿಗೆ ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನೂ ಕರುಣಿಸುತ್ತದೆ. ಇಲ್ಲಿ ಒಂದು ವಿಧವಾದ ಪುಣ್ಯದ ಕಲ್ಪನೆ ಇದ್ದರೆ ಮತ್ತೊಂದು ಬಗೆಯಲ್ಲಿ ನಮ್ಮ ಜ್ಞಾನದ ಮಿತಿಯನ್ನು ಹೆಚ್ಚಿಸುವುದರ ಮೂಲಕ, ನಾನಾ ಪಾತ್ರಗಳ ಮೂಲಕ ಜೀವನಾನುಭವಗಳನ್ನು ತಿಳಿಸುತ್ತಾ ನಮ್ಮ ನಮ್ಮ ಜೀವನದಲ್ಲಿ ಅಥವಾ ನಮ್ಮ ಉದ್ಯೋಗದಲ್ಲಿ ಮೇಲುಗೈ ಸಾಧಿಸಲು ರಾಮಾಯಣವು ಅನುವು ಮಾಡಿಕೊಡುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ರಾಮಾಯಣವು ಫಲವನ್ನು ಕೊಡುತ್ತದೆ. ಹಾಗಾಗಿ ಸನಾತನ ಧರ್ಮ ವಿರೋಧಿಗಳೂ, ಬುದ್ಧಿಜೀವಿಗಳೂ, ವಿಶ್ವವಿದ್ಯಾಲಗಳ ಪ್ರಾಧ್ಯಾಪಕರುಗಳೂ ಇಂತಹ ಮಹಾನ್ ಗ್ರಂಥವನ್ನು ಓದಲೇಬೇಕು. ಅವರಿಗೂ ಚಿಂತನೆಗೆ ಸರಕು ದೊರೆಯಬಹುದು. ಸಾಮಾನ್ಯರಿಗೆ ಸದಾ ಆದರಣೀಯ, ಪೂಜನೀಯಕ್ಕಿಂತ ಹೆಚ್ಚು ಪಠನೀಯ ಕಾವ್ಯ._

*ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ | ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ*

_ನಾರದರನ್ನು ಬೀಳ್ಕೊಟ್ಟು ವಾಲ್ಮೀಕ ಸ್ನಾನಾರ್ಥವಾಗಿ ತಮಸಾ ತೀರದತ್ತ ಹೊರಟು ನಿಂತು ಶುದ್ಧವಾದ ಆ ಜಲವನ್ನು ನೋಡುತ್ತಾ ಶಿಷ್ಯರಾದ ಭರದ್ವಾಜರಿಗೆ ನುಡಿಯುವ ಮಾತು- ಅಪ್ಪಾ, ಭರದ್ವಾಜ, ಈ ತಮಸೆಯ ನೀರು ಕನ್ನಡಿಯಷ್ಟು ಸ್ವಚ್ಛವಾಗಿದೆ. ಸ್ವಲ್ಪವೂ ಕೆಸರಿಲ್ಲ ಇಲ್ಲಿ. ಒಂದು ವೇಳೆ ಪಾಪರೂಪದ ಕೆಸರು ಅಥವಾ ಹೊರಗಿನ ಕೆಸರು ಮೈಗಂಟಿದ್ದರೂ ಇದರಲ್ಲಿಯ ಮುಳುಗು ಅದನ್ನೂ ದೂರಮಾಡಿ ತನ್ನಂತೆ ನಮ್ಮನ್ನೂ ಸ್ವಚ್ಛವಾಗಿಸುತ್ತದೆ. ಇದು ಕಂಗಳಿಗೆ ರಮಣೀಯ. ಇಲ್ಲಿ ಶಾಂತತೆ ಇದೆ. ರೌದ್ರತೆ ಅಥವಾ ಅಲ್ಲೋಲಕಲ್ಲೋಲತೆ ಅಲ್ಪವೂ ಇಲ್ಲ. ಒಂದು ಸುಂದರ ಉಪಮೆಯನ್ನೂ ಮಹರ್ಷಿಗಳು ನೀಡುತ್ತಿದ್ದಾರೆ- ಸಜ್ಜನರ ಮನಸ್ಸಿನಂತಿದೆ ಈ ತಮಸೆಯ ಅಂಬು. ಸಜ್ಜನರ ಮನಸ್ಸು ಯಾರ ಬಗೆಗೂ ಕಲ್ಮಷ ತುಂಬಿಕೊಳ್ಳದೆ ಸದಾ ಸ್ವಚ್ಛ, ಯಾವ ಕ್ಲಿಷ್ಟತೆಗೂ-ಸಂಪನ್ನತೆಗೂ ಏರುಪೇರಾಗದ ದೃಢಚಿತ್ತ. ತನ್ನ ಸಂಪರ್ಕದಲ್ಲಿ ಬಂದವರಿಗೂ ಸದ್ಗುಣಗಳನ್ನು ನೀಡಿ ಸಂಗವನ್ನು ಸಾರ್ಥಕವಾಗಿಸುತ್ತದೆ. ಅಂತೆಯೇ ಈ ತಮಸೆಯ ನೀರು. ಮಹರ್ಷಿಗಳ ಮನಸ್ಸೂ ಅವರ ಮಾತಿನಂದದಿ ಲೋಕೋಪಕಾರ ಬುದ್ಧಿಯುಳ್ಳದ್ದಾಗಿದೆ._

ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩