ರಾಮಾಯಣ ೧೪೧
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೧ 🏝📖
*ತಸ್ಯೈವಂ ಬ್ರುವತಶ್ಚಿಂತಾ ಬಭೂವ ಹೃದಿ ವೀಕ್ಷತಃ | ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ||*
_ಮಾ ನಿಷಾದ ಎಂದು ಬೇಡನ ಕುಕೃತ್ಯವನ್ನು ಕಂಡು ಕ್ಷಣಕಾಲ ಕೋಪಗೊಂಡು ಶಾಪಕೊಟ್ಟರು ವಾಲ್ಮೀಕಿ ಮಹರ್ಷಿಗಳು. ರತಿಯಲ್ಲಿದ್ದಾಗ ಬಾಣಪ್ರಯೋಗ ನಿಷಿದ್ಧ ಶಾಸ್ತ್ರದ ಪ್ರಕಾರ. ಪಾಂಡುವು ಆ ಕಾರಣಕ್ಕೆ ಶಾಪಗ್ರಸ್ತನಾದ. ಬಹಳ ಕಾಲ ನೆಲೆಯಿಲ್ಲದಂತಾಗಲಿ ಎಂದು ಶಾಪವನ್ನು ಕೊಟ್ಟ ಮರುಕ್ಷಣವೇ ವಾಲ್ಮೀಕಿಗಳು ಪರಿತಪಿಸುತ್ತಾರೆ. ಅಯ್ಯೋ ಏನಿದು ತಪದ ಫಲವನ್ನು ಕ್ಷಣಿಕ ಕೋಪಕ್ಕೆ ಬಲಿ ಕೊಟ್ಟೆನಲ್ಲ ಎಂದು. ಈ ಕಾರಣವೇ ಅವರನ್ನು ಮಹರ್ಷಿಯನ್ನಾಗಿಸುವುದು. ಕೋಪ ಬರುವುದು ಮನುಜನ ಸಹಜ ಗುಣ.ಉಪ್ಪು ಹುಳಿ ಖಾರ ತಿನ್ನದವನಿಗೂ ಕೋಪ ಬಂದೇ ಬರುತ್ತದೆ. ಆದರೆ ಕೋಪ ಬಂದ ಮುಂದಿನ ಕ್ಷಣ ಅದಕ್ಕಾಗಿ ಪಶ್ಚಾತ್ತಾಪ ಪಟ್ಟರೆ ಅದು ನಮ್ಮನ್ನು ನಾವು ತಿದ್ದಿಕೊಂಡಂತೆ. ನಾವು ಕೋಪಗೊಂಡು ಬಹಳ ಕಾಲ ಕೆಲವೊಮ್ಮೆ ಅಂತಹ ವ್ಯಕ್ತಿಯ ಬಗೆಗೆ ವರ್ಷಗಳ ಕಾಲ ಅದೇ ಭಾವನೆ ಇಟ್ಟುಕೊಂಡಿರುತ್ತೇವೆ. ಯಾವಾಗ ಆ ಭಾವ ಕ್ಷಣಮಾತ್ರದಲ್ಲಿ ಮರೆಯಾಗುವುದೋ ಹಾಗೂ ಸಂಪೂರ್ಣ ಶಾಸ್ತ್ರ ಸಮ್ಮತವಾದ ಕಾರಣ ಇರುವುದೋ ಅಂತಹ ಸಮಯದ ನಮ್ಮ ಕೋಪ ಪಾಪ ತರದು, ಪುಣ್ಯ ಕಳೆಯಬಹುದಷ್ಟೇ. ಕೋಪದ ಅಂತಹ ನಿಯಂತ್ರಣ ವಾಲ್ಮೀಕಿ ಮುನಿಗಳಿಂದ ನಾವು ಕಲಿಯಬೇಕಾದ ಮುಖ್ಯ ಅಂಶ._
*ಪಾದಬದ್ಧೋಕ್ಷರಸಮಸ್ತನ್ತ್ರೀಲಯಸಮನ್ವಿತಃ | ಶೋಕಾರ್ತಸ್ಯ ಪ್ರವೃತ್ತೋಯಂ ಶ್ಲೋಕೋ ಭವತು ನಾನ್ಯಥಾ*
_ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ ಎಂಬಂತೆ ಕ್ಷಣಿಕ ಕೋಪದಿಂದ ನುಡಿದರೂ ಅವರ ತಪದ ಫಲದಿಂದ ಆ ಮಾತು ಶ್ಲೋಕವಾಯಿತು. ತಪ್ಪಿ ನುಡಿದ ಮಾತು ತಪ್ಪಿಹೋಗದೇ ತಪ್ಪಿಲ್ಲದ ನಾಲ್ಕು ಪಾದದ ಸಮ ಅಕ್ಷರಗಳ ವಾದ್ಯಗಳೊಂದಿಗೆ ಲಯದಲ್ಲಿ ಹಾಡಲು ಅನುಕೂಲವಾಗಲಿ ಎಂದು ಅವರೇ ನುಡಿದರು. ಮಹರ್ಷಿಗಳ ಶೋಕವೇ ಶ್ಲೋಕವಾಗಿ ಪರಿಣಮಿಸಿತು. ಅಕಾರಣವಾಗಿ ಅಥವಾ ಲೌಕಿಕ ವಿಚಾರಗಳಿಗೆ ಪರಿತಪಿಸದ ಆ ಚಿತ್ತವೇ ಹುತ್ತಗಟ್ಟಿದ ಮಹರ್ಷಿಗಳ ಮನವು ವಿಧಿನಿಯಮದಂತೆ ಶೋಕ ಪಟ್ಟಾಗ ಅದೇ ಲೋಕಕ್ಕೆ ಅಶೋಕವಾಗಿ ಪರಿಣಮಿಸಿತು. ಮಹರ್ಷಿಗಳು ಶಿಷ್ಯನಿಗೆ ಅದನ್ನು ಉಪದೇಶಿಸಿ ಅವನಿಂದ ಹೇಳಿಸಿ ಆನಂದಿತರಾದರು. ಅಬ್ಬಾ ನನ್ನ ಮಾತು ವ್ಯರ್ಥವಾಗಲಿಲ್ಲ ಎಂದು ಮನದಲ್ಲಿ ತೃಪ್ತರಾದರು. ಒಂದು ಮಾತು ಆಡುವುದಾದರೂ ಅದಕ್ಕೆ ಸಾರ್ಥಕತೆ ಇರಬೇಕು, ಆಗ ಮಾತ್ರ ಮಾತು ಮಾತಾಗಿ ಉಳಿದೀತು. ಇಲ್ಲದಿದ್ದರೆ ಅದು ಕೇವಲ ರವ. ಮುನಿಗಳ ಮಾತು ಲೋಕೋಪಕಾರವನ್ನೇ ತಂದುಕೊಟ್ಟಿತು._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ