ರಾಮಾಯಣ ೧೪೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೨ 🏝📖
*ಪೂಜಯಾಮಾಸ ತಂ ದೇವಂ ಪಾದ್ಯಾರ್ಘ್ಯಾಸನವಂದನೈಃ | ಪ್ರಣಮ್ಯ ವಿಧಿವಚ್ಚೈನಂ ಪೃಷ್ಟ್ವಾನಾಮಯಮವ್ಯಯಮ್ ||*
_ಕಾವ್ಯ ಹುಟ್ಟಿ ಕೆಲವು ಕ್ಷಣಗಳಾಗಿದೆ ವಾಲ್ಮೀಕಿ ಮುಖಾರವಿಂದದಲ್ಲಿ, ಅರವಿಂದಾಸನನಾದ ಬೊಮ್ಮನು ತಾನೂ ಆಲಿಸಲೆಂಬಂತೆ ಅಲ್ಲಿ ಬಂದುನಿಂತ. ಮಹರ್ಷಿ ಒಮ್ಮೆ ಅವಾಕ್ಕಾಗಿ ನಿಂತು ನಂತರ ವಾಗ್ವ್ಯಾಪಾರ ಆರಂಭಿಸಿದ. ಬಂದವನು ದೇವ, ನಿತ್ಯಶುದ್ಧ. ಹಾಗಿದ್ದರೂ ಸತ್ಕಾರದ ಒಂದು ಪರಂಪರೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಕಾಲು ತೊಳೆಯಲು ನೀರು, ಕೈ ತೊಳೆಯಲು ಅರ್ಘ್ಯ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸಿದ. ಆಶ್ರಮ ಯೋಗ್ಯವಾದ ಆಸನವನ್ನಿತ್ತ. ಅತಿಥಿಸತ್ಕಾರವನ್ನು ಯಥಾವತ್ತಾಗಿ ಮಾಡಿ ಅನಂತರ ಕುಶಲ ಪ್ರಶ್ನೆಯನ್ನು ಕೇಳಿದ. ಏನು ವಿಶೇಷ ಇಲ್ಲಿ ಎಂದರೆ ಬ್ರಹ್ಮನು ಲೋಕದ ಕುಶಲವನ್ನು ಈಕ್ಷಿಸುವ ಮಹಿಮಾನ್ವಿತ. ಅವನಲ್ಲಿ ಏಕೆ ಈ ಪ್ರಶ್ನೆ ಎಂದರೆ ಅದನ್ನೇ ಸಾಮಾಜಿಕ ಮರ್ಯಾದೆ ಅನ್ನುವುದು. ಮನೆಗೆ ಯಾರೇ ಅತಿಥಿಗಳು ಬರಲಿ ಅವರ ಸತ್ಕಾರ, ನಮ್ಮ ಮಾತುಕತೆ ಹೇಗಿರಬೇಕೆಂಬುದನ್ನು ತಮ್ಮ ಕಾರ್ಯಗಳಿಂದ ಮುನಿಗಳು ತೋರಿಕೊಡುತ್ತಿದ್ದಾರೆ. ಆಮಯ ಎಂದರೆ ರೋಗ- ತೊಂದರೆ ಮೊದಲಾದವು. ಅನಾಮಯ ಅಂದರೆ ಸುಖವಾಗಿ ಯಾವ ಪೀಡೆಯೂ ಬಾಧಿಸದಿರುವುದು. ಅತಿಥಿಗೆ ಅಥವಾ ಅಭ್ಯಾಗತರಿಗೆ ಪರಿಚಿತರಿರಲಿ ಅಪರಿಚಿತರಿರಲಿ ಯಥಾಯೋಗ್ಯ ಉಪಚರಿಸಿ ಕುಶಲ ಪ್ರಶ್ನೆ ಕೇಳುವುದು ನಮ್ಮ ಪರಂಪರೆ. ಸೋಂಕಿನ ಈ ಕಾಲದಲ್ಲಿ ಮತ್ತೆ ಪಾದ್ಯ-ಅರ್ಘ್ಯಗಳು ಮುನ್ನಲೆಗೆ ಬಂದಿವೆ. ಅಂದರೆ ಕೈ ಕಾಲು ತೊಳೆದು ಮನೆಯೊಳಗೆ ಕಾಲಿಡುವ ಉತ್ತಮ ಸಂಸ್ಕಾರ._
*ಮಚ್ಛಂದಾದೇವ ತೇ ಬ್ರಹ್ಮನ್ಪ್ರವೃತ್ತೇಯಂ ಸರಸ್ವತೀ | ರಾಮಸ್ಯ ಚರಿತಂ ಕೃತ್ಸ್ನಂ ಕುರು ತ್ವಮೃಷಿಸತ್ತಮ||*
_ಬ್ರಹ್ಮನು ಬಂದು ಇದಿರಿಗೇ ಆಸೀನನಾಗಿದ್ದರೂ ಮುನಿಮಾನಸ ಅರಿಯದೇ ಹೊರಟ ನಾಲ್ಕು ಪಾದದ ರಚನೆಯ ಬಗೆಗೆ ಚಿಂತಿಸತೊಡಗಿದೆ. ಇದನ್ನರಿತ ಬ್ರಹ್ಮನ ಮಾತು- ಬ್ರಹ್ಮನೇ ಅಂದರೇ ಶ್ರೇಷ್ಠನೇ, ನನ್ನ ಅಭಿಲಾಷೆಯಿಂದಲೇ ನಿನ್ನ ಬಾಯಿಯಿಂದ ಸರಸ್ವತಿಯು ಅಥವಾ ಶ್ಲೋಕರೂಪವಾದ ಆ ವಾಣಿ ಹೊರಟಿತು. ಅದಕ್ಕೊಂದು ಮೂಲ ಕಾರಣ ರಾಮನ ಚರಿತ್ರೆಯನ್ನು ನೀನೇ ರಚಿಸಬೇಕಾಗಿರುವುದು. ಒಬ್ಬ ಮಹಾಪುರುಷನ ಚರಿತ್ರೆ ತಿಳಿಸಲು ಅಷ್ಟು ಸಾಮರ್ಥ್ಯ ಹಾಗೂ ಪಕ್ಷಪಾತವಿಲ್ಲದ ಬುದ್ಧಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಮನೆಗೇ ಕನ್ನ ಹಾಕಿದವರನ್ನೂ, ಮಿತಿ ಮೀರಿದವರನ್ನೂ ಮಹಾಪುರುಷರಂತೆ ಚಿತ್ರಿಸಿರುವ ನಮ್ಮ ಈಗಿನ ಇತಿಹಾಸ ಕಣ್ಣ ಮುಂದಿದೆ. ಹಾಗಾಗಿಯೇ ಸೃಷ್ಟಿಕರ್ತನ ಆಯ್ಕೆ ಮನಃಕಲ್ಮಶ ಎಳ್ಳಷ್ಟೂ ಇರದ ವಾಲ್ಮೀಕಿ ಮುನಿಗಳು. ಛಂದ ಶಬ್ದಕ್ಕಿಲ್ಲಿ ಆಸೆ ಅಥವಾ ಬಯಕೆ ಎಂಬ ಅರ್ಥ. ಬ್ರಹ್ಮನ ಬಯಕೆ ವಾಲ್ಮೀಕಿ ಮುನಿಗಳಿಂದ ಲೋಕಪೂಜ್ಯವಾದ ರಾಮನ ಚರಿತೆಯನ್ನು ರಚಿಸಿತು. ಬ್ರಹ್ಮನೇ ಹೇಳಿದ ಮೇಲೆ ಸರಸ್ವತಿಯೂ ಮುನಿಯ ನಾಲಗೆಯಲ್ಲಿ ನೆಲೆನಿಂತು ಲೊಕಪೂಜ್ಯ ಆದಿಕಾವ್ಯ ರೂಪುಗೊಂಡಿತು._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ