ರಾಮಾಯಣ ೧೪೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೪ 🏝📖  

*ಉಪಸ್ಪೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ | ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೀಕ್ಷತೇ ಗತಿಮ್||*

_ಬ್ರಹ್ಮನು ತೆರಳಿದ ನಂತರ ಮತ್ತೆ ಮತ್ತೆ ರಾಮನನ್ನೇ ಚಿಂತಿಸಿದರು ವಾಲ್ಮೀಕಿ ಮುನಿಗಳು. ಅನಂತರ ಶುದ್ಧಾಚಮನ ಮಾಡಿ ಪೂರ್ವಾಗ್ರದರ್ಭೆಗಳ ಮೇಲೆ ಕುಳಿತು ಪದ್ಮಾಸನದಲ್ಲಿ ಬದ್ಧಾಂಜಲಿಗಳಾಗಿ ಕುಳಿತು ಯೋಗವನ್ನು ಆಶ್ರಯಿಸಿ ರಾಮನನ್ನು ಅವನ ಕಥೆಯನ್ನು ಚಿಂತಿಸಿದರು. ಧರ್ಮಮಾರ್ಗದಿಂದ ರಾಮನ ಕಥೆ ಹೇಗೆ ನಡೆದಿದೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿದರು. ಲೋಕದಲ್ಲಿ ಎರಡು ಬಗೆಯ ಮಾರ್ಗಗಳಿವೆ - ವ್ಯಕ್ತಿಗಳ ಪೂರ್ವಾಪರಗಳನ್ನು ತಿಳಿಯಲು. ಭಗವಂತನ ಅನುಗ್ರಹ ಪಡೆದು ಯೋಗಮಾರ್ಗವನ್ನು ಆಶ್ರಯಿಸಿ ಅಂದರೆ ಸಮಾಧಿಸ್ಥನಾಗಿ ಒಬ್ಬ ವ್ಯಕ್ತಿಯ ಬಗ್ಗೆ ಚಿಂತಿಸುತ್ತಾ ಹೋದರೆ ಆ ವ್ಯಕ್ತಿಯ ಎಲ್ಲಾ ಚರ್ಯೆಯನ್ನೂ ಅರಿಯಬಹುದು. ಇನ್ನೊಂದು ಅಧರ್ಮ ಮಾರ್ಗ- ಭೂತ, ಯಕ್ಷ,ಪಿಶಾಚಿಗಳನ್ನು ಆರಾಧಿಸಿ ಅವುಗಳ ಕರ್ಣಭಾಷಿತದಿಂದ ಅರಿಯುವುದು. ಇಲ್ಲಿ ಮುನಿಗಳು ಧರ್ಮಮಾರ್ಗದಿಂದ ರಾಮನನ್ನು ಶರಣುಹೊಕ್ಕರು. ಅವನ ಕಥೆ ಅವರ ಮನದ ರಂಗಮಂದಿರದಲ್ಲಿ ನಿಧಾನಕ್ಕೆ ಮೂಡಿಬಂದಿತು._

*ಹಸಿತಂ ಭಾಷಿತಂ ಚೈವ ಗತಿರ್ಯಾ ಯಚ್ಚ ಚೇಷ್ಟಿತಮ್ | ತತ್ಸರ್ವಂ ಧರ್ಮವೀರ್ಯೇಣ ಯಥಾವತ್ಸಂಪ್ರಪಶ್ಯತಿ ||*

_ರಾಮಾದಿಗಳು ನಕ್ಕಿದ್ದು, ನುಡಿದದ್ದು, ವನಸಂಚಾರ ಮಾಡಿದ್ದು, ಜನರೊಡನೆ ವ್ಯವಹಾರ ಮಾಡಿದ್ದು ಹೀಗೆ ಪ್ರತಿಯೊಂದು ಸಂಗತಿಗಳೂ ಅವರ ಮನದಲ್ಲಿ ಅಲೆಅಲೆಯಾಗಿ ಮೂಡಿಬಂದವು. ಯೋಗ ಮಾರ್ಗವನ್ನು ಆಶ್ರಯಿಸಿ ಶುದ್ಧಾಂತಃಕರಣದಿಂದ ಚಿಮತಿಸತೊಡಗಿದಾಗ ಪರಮಾತ್ಮನ ಆ ಅವತಾರ ಲೀಲೆಗಳು ಎಲ್ಲವೂ ಅವರಿಗೆ ಗೋಚರಿಸತೊಡಗಿದವು. ಅವೆಲ್ಲವನ್ನೂ ಮತ್ತೆ ಮತ್ತೆ ಮನದಟ್ಟು ಮಾಡಿಕೊಂಡ ಮುನಿಗಳು ಕಾವ್ಯರೂಪವಾಗಿ ಚಿತ್ರಿಸಲು ಸಿದ್ಧತೆ ಆರಂಭಿಸಿದರು. ರಾಮನ ಅವತಾರದಲ್ಲಿ ಅವನು ಕಳೆದ ಪ್ರತಿಯೊಂದು ಕ್ಷಣಗಳ ಚಿತ್ರಣವೂ ಅವರೆದುರು ಮೂಡಿತು. ಅದೇ ತಪಸ್ಸಿನ ಸಿದ್ಧಿ ಅಥವಾ ಸಫಲತೆ. ವಾಲ್ಮೀಕಿಗಳ ಬಹುದೀರ್ಘಕಾಲದ ತಪಸ್ಸು ಈಗ ಸಾರ್ಥಕತೆಯನ್ನು ಪಡೆಯಿತು._



ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩