ರಾಮಾಯಣ ೧೪೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೩ 🏝📖 

*ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ | ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್ ||*

_ಬ್ರಹ್ಮನ ಮಾತು. ಈ ನಿನ್ನ ಕಾವ್ಯದಲ್ಲಿ ಯಾವ ಅಂಶವೂ ಸುಳ್ಳಾಗದು. ಅಂತಹ ರಾಮಕಥೆಯನ್ನು ಶ್ಲೋಕಬದ್ಧವಾಗಿ ಮನೋಹಾರಿಯಾಗಿ ರಚಿಸು. ಈ ಮಾತನ್ನು ನೋಡಿದಾಗ ನಮಗರಿವಾಗುವ ಅಂಶ ವಾಲ್ಮೀಕಿ ಯಾವುದನ್ನೂ ಮುಚ್ಚಿಡುವ ಅಥವಾ ಸುಳ್ಳುಹೇಳುವ ಪ್ರಯತ್ನ ಮಾಡಿಲ್ಲ ಎಂಬುದು. ಅರ್ವಾಚೀನ ಕವಿಗಳನೇಕರು ವಾಲ್ಮೀಕಿಯ ಮನದ ಭಾವ ಹೀಗಿತ್ತು, ಅವನು ಹೇಳದೇ ಹೋದ ಎಂದೆಲ್ಲಾ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ವಾಲ್ಮೀಕಿಗಳಿಗೆ ರಾಮನನ್ನು ಅಥವಾ ಯಾರನ್ನಾಗಲಿ ಚಿತ್ರಿಸಿ ಯಾವ ಲಾಭ ನಷ್ಟ ಪ್ರಶಸ್ತಿಯ ಅಪೇಕ್ಷೆ ಇರಲಿಲ್ಲ. ಬ್ರಹ್ಮನ ಆಣತಿಯಂತೆ ಸತ್ಯವನ್ನು ಮಾತ್ರ ಚಿತ್ರಿಸಿದ ಮಹಾಮುನಿ ಅವರು. ಸೀತೆಗೆ ಯಾರ ಬಗೆಗೋ ಒಲವಿತ್ತು, ಲಕ್ಷ್ಮಣನ ಮನದಲ್ಲಿ ಏನೋ ಇತ್ತು ಇತ್ಯಾದಿ ರಾಮಾಯಣದ ಪಾತ್ರಗಳನ್ನು ಕುಲಗೆಡಿಸಹೊರಟ ಖ್ಯಾತನಾಮರು ಹಾಗೂ ಅವರ ಅನುಯಾಯಿಗಳು ಈ ಅಂಶವನ್ನು ಓದಿ ಮುಂದುವರಿಯುವುದು ಅವರ ವಿಮರ್ಶೆಗೆ ಒಳಿತು._

*ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ||ಯಾವದ್ರಾಮಾಯಣಕಥಾ ತ್ವತ್ಕೃತಾ ಪ್ರಚರಿಷ್ಯತಿ | ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯತಿ ||*

_ಹಿಂದೆಯೇ ಬ್ರಹ್ಮ ಎಚ್ಚರಿಕೆ ರೂಪದ ಆದೇಶ ನೀಡಿದ್ದನು. ನಿನ್ನ ಕಾವ್ಯದಲ್ಲಿ ಸತ್ಯ ಮಾತ್ರ ಇರುವುದೆಂದು. ಹಾಗೆ ಸತ್ಯ ನುಡಿದರೆ ಆ ವಚನ ಲೋಕದಲ್ಲಿ ಪರ್ವತ- ನದಿಗಳು ಎಲ್ಲಿಯವರೆಗೆ ಅಸ್ತಿತ್ವ ಹೊಂದಿರುವವೋ ಅಲ್ಲಿಯವರೆಗೂ ಈ ರಾಮಕಥೆ ಜೀವಂತವಿರುವುದು. ಯುಗಯುಗಗಳು ಕಳೆದರೂ ಸತ್ಯಕ್ಕೆಂದೂ ಸಾವಿಲ್ಲ. ಅದು ಎಷ್ಟು ರೂಪಾಂತರ, ದೇಶಾಂತರ ಹೊಂದಿದರೂ ಮತ್ತೆ ಮತ್ತೆ ಅನುರಣಿಸುವ ಮುತ್ತು. ಅಷ್ಟಲ್ಲದೇ ಇಂತಹ ಮಹೋನ್ನತ ಕೃತಿಯ ಕರ್ತೃವಿಗೆ ಏನು ಫಲ ಎಂದರೆ ಅದಕ್ಕುತ್ತರ-  ರಾಮಾಯಣ ಕಥೆ ಲೋಕದಲ್ಲಿ ಇರುವಷ್ಟು ಕಾಲ ವಾಲ್ಮೀಕಿ ಮಹರ್ಷಿಗೆ ಬ್ರಹ್ಮಲೋಕದಲ್ಲಿ ವಾಸಿಸುವ ಯೋಗ. ಸದಾ ಆನಂದ ಮಾತ್ರ ತುಂಬಿರುವ ಬ್ರಹ್ಮಲೋಕವು ಬಹುಕಾಲದ ತಪಸ್ಸಿನಿಂದಲೂ ದೊರೆಯದ ಸಂಪತ್ತು. ವಾಲ್ಮೀಕಿ ರಾಮನೆಂಬ ಮುತ್ತನ್ನು ಅಕ್ಷರಗಳಲ್ಲಿ ಪೋಣಿಸಿ ಲೋಕಕ್ಕೆ ಆಭರಣವಾಗಿ ನೀಡಿದುದರ ಫಲ ಬ್ರಹ್ಮಲೋಕವಾಸ. ಭಗವಂತನ ಸೇವೆ ಯಾವ ರೂಪದಲ್ಲಿ ಪ್ರಾಮಾಣಿಕವಾಗಿ ಮಾಡಿದರೂ ಅದರ ಫಲ ಅತ್ಯಂತ ಮಹತ್ತಾದುದು ಎನ್ನುವುದಕ್ಕೆ ವಾಲ್ಮೀಕಿಯೇ ಪ್ರತ್ಯಕ್ಷ ಸಾಕ್ಷಿ._

ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩