ಮಹಾಭಾರತ ವಿಮರ್ಶೆ

ಸತ್ಯದ ಹುತ್ತ ಭಾಗ-೧

ಅರ್ವಾಚೀನ ಕವಿಗಳ ಉದ್ದೇಶವಾದರೂ ಏನು?

ಮಹಾಭಾರತವೆಂಬ ನಿಷ್ಪಕ್ಷಪಾತಿ ವ್ಯಾಸರ ಮೂಲಕೃತಿಯನ್ನು ತಮಗೆ ಬೇಕಾದಂತೆ  ಬದಲಿಸಿ ಪಾತ್ರಗಳ ನೈಜತೆಯನ್ನು ಮರೆಮಾಚಿ ಮಾಡಹೊರಟಿದ್ದಾದರೂ ಏನು ಎಂಬುದಕ್ಕೆ ಉತ್ತರ ಎಂದಿಗೂ ಸಿಗಲಾರದು.

ಪ್ರಸಂಗ -೧

ದ್ರೌಪದಿ ಸ್ವಯಂವರ

ದ್ರೌಪದಿ ಸ್ವಯಂವರದಲ್ಲಿ ಶಲ್ಯ ಜರಾಸಂಧ ದುರ್ಯೋಧನ ಕರ್ಣ ಮೊದಲಾದ ಎಲ್ಲಾ ವೀರರು ಪಾಲ್ಗೊಂಡಿದ್ದರೂ ಯಾರೊಬ್ಬರೂ ಧನುಸ್ಸನ್ನು ಎತ್ತಲು ಸಮರ್ಥರಾಗುವುದಿಲ್ಲ. ಆಗ ಬ್ರಾಹ್ಮಣ ವೇಷಧಾರಿ ಅರ್ಜುನ ಯಂತ್ರ ಭೇದಿಸುತ್ತಾನೆ. ಮಹಾಭಾರತದ ಮೂಲ ಆವೃತ್ತಿಯಂತೆ ಈ ಸಂದರ್ಭದಲ್ಲಿ ದ್ರೌಪದಿಯ ಮಾತೂ ಇಲ್ಲ. ದೃಷ್ಟದ್ಯುಮ್ನ ಈ ಸಭೆಯ ಸಂಯೋಜಕ. ಕರ್ಣನನ್ನು ಮೆರೆಸಲು ಹೊರಟ ಮುಂದಿನ ಕವಿಗಳು ಅಥವಾ ದಾರ್ಶನಿಕರು ಈ ಸಂದರ್ಭದಲ್ಲಿ ದ್ರೌಪದಿಯನ್ನು ಎಳೆತಂದು ಅವಳು ಸೂತಪುತ್ರನೆಂದು ಕರ್ಣನನ್ನು ತಡೆದಳು ಎಂದಿದ್ದಾರೆ. ಇದರ ಅಗತ್ಯ ಏನಿತ್ತು?

ನಿಜಕ್ಕಾದರೆ ಉಳಿದ ಕ್ಷಾತ್ರಸಭೆ ಅರ್ಜುನನು ಬ್ರಾಹ್ಮಣನೆಂದೆಣಿಸಿ ಯುದ್ಧ ಮಾಡಹೊರಟಾಗ ಕರ್ಣನು ಅರ್ಜುನನನ್ನು ಮನಸಾರೆ ಪ್ರಶಂಸಿಸುತ್ತಾನೆ. ಧನುರ್ವೇದವೇ ಮೂರ್ತಿವೆತ್ತಂತಿರುವ ಈ ಯುವಕ ನಿಜಕ್ಕೂ ಇದಕ್ಕೆ ಅರ್ಹನೆನ್ನುತ್ತಾನೆ. ಈ ಸಂದರ್ಭದ ಕರ್ಣನ ಗುಣಗ್ರಾಹಿತ್ವ ಮೆಚ್ಚುವುದು ಬಿಟ್ಟು ವಿನಾಕಾರಣ ದ್ರೌಪದಿಯನ್ನು ಎಳೆತಂದು ಅವಳ ಮಾತಿಗೊಂದು ಜಾತಿಯ ಬಣ್ಣ ಬಳೆಯುವ ಉದ್ದೇಶ ಏನು? 

ಮೂಲ ಕೃತಿಯನ್ನು ಆಧಾರವಾಗಿಟ್ಟುಕೊಂಡು ತಾವು ಏನೇ ಬರೆಯಲಿ ಮೂಲಕ್ಕೆ ಅಪಚಾರ ಎಸಗುವುದು ಎಷ್ಟೇ ದೊಡ್ಡ ಕವಿಗಳಾಗಲಿ ಅವರಿಗೆ ಶೋಭೆ ತರುವ ವಿಷಯವಲ್ಲ. ಯಾರನ್ನೋ ಮೆಚ್ಚಿಸಲು ಇನ್ಯಾರನ್ನೋ ತುಳಿಯುವ ಪ್ರವೃತ್ತಿ ಹೇಗೆ ತಾನೇ ಪ್ರಾಮಾಣಿಕವಾದೀತು!

ಶಸ್ತ್ರಾಸ್ತ್ರ ಪ್ರದರ್ಶನದ ಸಂದರ್ಭದ ವ್ಯಕ್ತಿ ಪರಿಚಯಕ್ಕೂ ಸ್ವಯಂವರದ ಸಂದರ್ಭದ ವೀರಪ್ರದರ್ಶನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಜಾತಿ ಮತ ಅಂತಸ್ತು ಗೌಣ. ವೀರತೆಯೊಂದೇ ಮಾನದಂಡ. ಹಾಗಾಗಿಯೇ ಅರ್ಜುನನು ಎದ್ದು ನಿಂತಿದ್ದು. ಇದನ್ನು ಅರಿಯದೆ ವಿನಾಕಾರಣ ಯಾರನ್ನೋ ದೂಷಿಸಿ ಯಾರನ್ನೋ ಮೆರೆಸಿ ಪಾತ್ರದ ನೈಜ ಚಿತ್ರಣ ಮರೆಮಾಡುವ ಪ್ರವೃತ್ತಿ ಇನ್ನು ಮುಂದಾದರೂ ನಿಲ್ಲಲಿ. 

ಆಧಾರ- ಮಹಾಭಾರತ ಕ್ರಿಟಿಕಲ್ ಎಡಿಶನ್. ರಾ. ಗಣೇಶರ ಮಾತು. 

ಮುಂದುವರೆಯುವುದು......

ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩