ಪದಶಕ್ತಿ ೩೦

🏹*ಪದಶಕ್ತಿ* ---೩೦🌄

*ಗೃಹಸ್ಥ*

_ಗೃಹೇ-ದಾರೇಷು ತಿಷ್ಠತಿ-ಅಭಿರಮತೇ ಇತಿ ಗೃಹಸ್ಥಃ ಎಂಬಂತೆ ಮನೆಯಲ್ಲಿ ಇರುವವ ಅಥವಾ ಪತ್ನಿಯಲ್ಲಿ ಮಾತ್ರ ರಮಿಸುವವ ಎಂಬರ್ಥದ ಸಂಸ್ಕೃತ ಪದ. ಬೇರೆ ಬೇರೆ ಮನೆಗಳಲ್ಲಿ ಬೇರೆ ಬೇರೆ ದಾರರನ್ನು ಅಂದರೆ ಪತ್ನಿಯನ್ನು ಹೊಂದಿದ್ದರೆ ಅವನು ಗೃಹಸ್ಥನಾಗಲಾರ. ಅವನು ಬೇರೆಯೇ ಉಪಾಧಿಯನ್ನು ಪಡೆಯುವನು. ನಮ್ಮ ಧರ್ಮದಲ್ಲಿ ಮಕ್ಕಳಾಗದಿದ್ದಾಗ ಪತ್ನಿಯ ದೈಹಿಕ ತೊಂದರೆ ಅದಕ್ಕೆ ಕಾರಣವಾದಾಗ ಮಾತ್ರ  ಇನ್ನೊಂದು ಮದುವೆಗೆ ಸಮ್ಮತಿ ಇತ್ತೇ ಹೊರತು ಬೇರಾವ ಸಂದರ್ಭದಲ್ಲೂ ಅಲ್ಲ. ರಾಮನ ನಡೆಯೇ ಅದಕ್ಕೆ ಮಾದರಿ._

_ವಿದ್ಯೆಯನ್ನು ಅಭ್ಯಸಿಸಿ ಬಂದವನು ಮುಂದೆ ಈ ಆಶ್ರಮವನ್ನು ಪ್ರವೇಶಿಸುವ ಕಾರಣ ಅವನಿಗೂ ಈ ಪದದ ಪ್ರಯೋಗವಿದೆ. ಸ್ನಾತಕನೂ ಒಂದರ್ಥದ ಗೃಹಸ್ಥನು. ಮನೆಯ ಒಡೆಯನು ಮನೆಯಲ್ಲೇ ಇರುವವನಾದ್ದರಿಂದ ಮಡದಿ ಇಲ್ಲದಿದ್ದರೂ ಗೃಹಸ್ಥ. ಬೃಹತ್ ಕುಟುಂಬ ಹೊಂದಿದ ಬೃಹ್ಮಚಾರಿ ವ್ಯಕ್ತಿಯೂ ಕುಟುಂಬದ ಒಡನಾಟ ಆತ್ಮೀಯತೆಯ ಕಾರಣ ಗೃಹಸ್ಥನು.ಹಾಗಾಗಿ ಯಾರೂ ಮದುವೆಯಾಗದೇ ಹೇಗೆ ನಾನು ಗೃಹಸ್ಥ ಎಂದು ಕೊರಗಬೇಕಿಲ್ಲ. ಎಲ್ಲರೊಳಗೊಂದಾಗಿ ಬದುಕಿದರೆ ಅವನೇ ಗೃಹಸ್ಥ._

_ಇವರಲ್ಲಿ ಎರಡು ವಿಧ- ಉದಾಸೀನ ಹಾಗೂ ಸಾಧಕ. ಅನೇಕ ಪ್ರಸಿದ್ಧ ಅಪ್ರಸಿದ್ಧ ವ್ಯಕ್ತಿಗಳು ಈ ಉದಾಸೀನರು. ಮದುವೆಯಾಗಿಯೂ ದೇವ ಋಣ ಪಿತೃ ಋಣ ಋಷಿ ಋಣ ತೀರಿಸುವ ಗೋಜಿಗೆ ಹೋಗದೇ ಮಡದಿಯನ್ನೂ ದುಡ್ಡನ್ನೂ ಬಿಟ್ಟು ಒಬ್ಬನೇ ಸಂಚರಿಸುವ ಮಂದಿ. ಇವರಲ್ಲಿ ಸ್ವಾರ್ಥವೋ ಪರಾರ್ಥವೋ ಯಾವ ಉದ್ದೇಶವಿರುವುದೆಂದು ನಿರ್ಣಯಿಸಲಾಗದು. ಒಟ್ಟಾರೆ ಇವರು ಈ ವಿಷಯದಲ್ಲಿ ಉದಾಸೀನರು. ಅನಂತರ ಬೇಕಾದರೆ ನೂರಾರು ಕಾರಣಗಳನ್ನು ನೀಡುವರು ತಮ್ಮ ಔದಾಸೀನ್ಯದ ಬಗ್ಗೆ.ಇಂತಹ ವ್ಯಕ್ತಿಗಳ ಉದಾಹರಣೆ ಕೆಲವರಿಗೆ ಬೇಸರ ತಂದೀತು. ಹಾಗಾಗಿ ಇಲ್ಲಿ ಹೆಸರಿಸಿಲ್ಲ. ಇತಿಹಾಸ ನೋಡಿದರೆ ಅನೇಕ ಇಂತಹ ಉದಾಸೀನರು ಸಿಗುತ್ತಾರೆ._

_ಎರಡನೆಯ ವ್ಯಕ್ತಿಗಳು ಸಾಧಕರು. ಕುಟುಂಬವನ್ನು ಮುನ್ನಡೆಸಿ ಸಮಾಜದ ಮುನ್ನಡೆಗೆ ಕಾರಣವಾಗುವ ಉದಾರಿ. ಅವನಿಗೆ ನೀತಿ ನಿಯಮಗಳು ಹೆಚ್ಚು. ಯಜ್ಞವನ್ನು ನಿಯತವಾಗಿ ಆಚರಿಸಬೇಕು. ತಾನು ಮಾಡುವ ಕರ್ಮದಲ್ಲಿ ಸಮರ್ಪಣಾ ಭಾವ ಹಾಗೂ ದೈವೀಚಿಂತನೆ ಹೊಂದಿದ್ದರೆ ಬೀದಿ ಗುಡಿಸುವುದು ಯಜ್ಞವೇ ಆಗುವುದು. ಹಾಗಾಗಿ ಇದು ಕೇವಲ ಬ್ರಾಹ್ಮಣರಿಗೆ ಸಂಬಂಧಿಸಿದ ವಿಷಯ ಎಂದು ಭಾವಿಸಬೇಡಿ. ಅಗ್ನಿಯಲ್ಲಿ ಆಹುತಿ ನೀಡುವಾಗ ಎತ್ತೆತ್ತಲೋ ಮನವು ಕುಣಿಯುತ್ತಲಿದ್ದರೆ ಅದೂ ಯಜ್ಞವಾಗದು. ಶುಭ್ರವಸ್ತ್ರಧಾರಿಯಾಗಿರಬೇಕು ಇವನು. ಏಕೆಂದರೆ ಸಮಾಜವು ಇವನ ನಡೆಯನ್ನು ಅನುಸರಿಸುತ್ತದೆ. ಕೈ-ಬಾಯಿ- ಮಾತಿನ ಚಾಪಲ್ಯ ಇರಬಾರದು. ಜನನೇಂದ್ರಿಯ ಹಾಗೂ ಉದರದ ಬೇಡಿಕೆಗಳ ನಿಯಂತ್ರಣ ಹೊಂದಿರಬೇಕು. ಇಲ್ಲದಿದ್ದರೆ ರೋಗಗಳ ತಾಣವಾದೀತು ದೇಹವೆಂಬ ಅರಮನೆ. ಮುಖ್ಯವಾಗಿ ಶಾಸ್ತ್ರ ಹೇಳುವ ಲಕ್ಷಣ- ಮೈತ್ರಿ. ಎಲ್ಲಾ ಜೀವಿಗಳಲ್ಲಿ ಗೆಳೆತನವನ್ನು ಸಮಭಾವವನ್ನು ಹೊಂದುವವನು , ಕ್ಷಮಾಗುಣ ತೋರುವವನು ನಿಜಾರ್ಥದ ಗೃಹಸ್ಥ. ವಸಿಷ್ಠರು ತಮ್ಮ ಮಕ್ಕಳನ್ನು ಕೊಂದವನನ್ನು ಕ್ಷಮಿಸಿ ಶ್ರೇಷ್ಠ ಗೃಹಸ್ಥರೆನಿಸಿದರು._

_ಗೃಹಸ್ಥನ ಸಂಪಾದನೆ_ *ಅಕ್ಲೇಶೇನ ಶರೀರಸ್ಯ ಕುರ್ವೀತ ಧನಸಂಚಯಮ್* _ಎಂದಿದ್ದಾರೆ.  ಹಗಲೂ ರಾತ್ರಿ ಎಂಬ ಪರಿವೆಯಿಲ್ಲದೆ ಅತಿಯಾಗಿ ದೇಹಬುದ್ಧಿಗಳನ್ನು ದಂಡಿಸಿ ಸಂಪಾದನೆ ಮಾಡುವುದನ್ನು ಶಾಸ್ತ್ರ ಗೃಹಸ್ಥನಿಗೆ ಸರ್ವಥಾ ನಿಷೇಧಿಸಿದೆ. ತನ್ನ ಆರೋಗ್ಯದ ಕಡೆ ಗಮನ ಕೊಟ್ಟು ಅವಶ್ಯವಿದ್ದಷ್ಟು ಸಂಪಾದನೆ ಮಾಡುವುದು ಧರ್ಮ. ಅನವಶ್ಯಕವಾಗಿ ಮಾಡುವ ಅತಿಯಾದ ಸಂಪಾದನೆಯೂ ಅಧರ್ಮ._

_ಉಳಿದ ಮೂರು ಆಶ್ರಮಗಳಿಗೂ ಇದೇ ಮೂಲಾಧಾರ. ಹಾಗಾಗಿಯೇ ಕಾಳಿದಾಸನ ಮಾತು_               *ಧನ್ಯೋ ಗೃಹಸ್ಥಾಶ್ರಮಃ* _ಎಂದು. ಮೂವರೂ ಗೃಹಸ್ಥನ ನೆರವಿಲ್ಲದೆ ಬದುಕಲಾರರು. ಗೃಹಸ್ಥನ ಜವಾಬ್ದಾರಿಯೂ ಹೌದು ಸಮಾಜದ ಉಳಿದವರ ನಿರ್ವಹಣೆ. ತನ್ನ ವಿದ್ಯೆಗನುಗುಣವಾದ ವೃತ್ತಿಯಲ್ಲಿ ತೃಪ್ತಿಯಿಂದ ಬದುಕುವುದು ಗೃಹಸ್ಥನಿಗೆ ಸರ್ವಥಾ ವಿಹಿತವಾದ ಧರ್ಮ._

_ಐದು ಪಾತಕಗಳ ನಿವೃತ್ತಿಗೆ ಐದು ಯಜ್ಞ ಮಾಡಲೇಬೇಕಾದ ಕರ್ತವ್ಯ. ಒಲೆಯಲ್ಲಿ ಬೇಯಿಸುವಾಗ ನಷ್ಟವಾಗುವ ಜೀವರಾಶಿ, ಕಲ್ಲಿನಲ್ಲೂ ಮಿಕ್ಸಿಯಲ್ಲೋ ರುಬ್ಬುವಾಗ ಅಳಿಯುವ ಜೀವಿಗಳು, ಗುಡಿಸುವಾಗ ಒರೆಸುವಾಗ ಪ್ರಾಣ ಕಳೆದುಕೊಳ್ಳುವ ಜೀವರಾಶಿ, ಭತ್ತ ಕುಟ್ಟುವಾಗ- ಬೆಳೆಯುವಾಗ ನಷ್ಟವಾಗುವ ಜೀವಿಗಳು, ಅಕ್ಕಿಯನ್ನು ಧಾನ್ಯಗಳನ್ನು ತರಕಾರಿ ಮೊದಲಾದವನ್ನು ತೊಳೆಯುವಾಗ ಉಂಟಾಗುವ ಪ್ರಾಣಹಾನಿಯ ಪ್ರಾಯಶ್ಚಿತ್ತ ರೂಪ ಈ ಪಂಚಮಹಾಯಜ್ಞಗಳು. ಮನೆಯಲ್ಲಿ ದಿನವೂ ದೇವಪೂಜೆ, ಬಂದ ಅತಿಥಿಗೆ ಸತ್ಕಾರ, ಪ್ರಾಣಿ ಪಕ್ಷಿಗಳಿಗೆ ಅನ್ನ ನೀಡುವಿಕೆ, ವರ್ಷವೂ  ಗತಿಸಿದ ಹಿರಿಯರ ಸ್ಮರಣೆ ಹಾಗೂ ಬದುಕಿರುವ ಗುರುಹಿರಿಯರನ್ನು  ಗೌರವಿಸುವುದು, ತಾನು ಗುರುಮುಖೇನ ಕಲಿತ ವಿದ್ಯೆ ಮರೆಯದೇ ಸಾಧ್ಯವಾದರೆ ಇನ್ನೊಬ್ಬರಿಗೆ ಕಲಿಸುವುದು. ಅನಾಥರನ್ನು ನಿರ್ಗತಿಕರನ್ನು ರೋಗಿಗಳನ್ನು ಉಪಚರಿಸುವುದು ಇವೇ ಐದು ಯಜ್ಞಗಳು. ಇದು ಜಾತಿ ಮತ ಪಂಥ ರಹಿತವಾದ ಸಾಮಾನ್ಯ ಗೃಹಸ್ಥನ ಧರ್ಮಗಳು._

ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1
ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ 2
ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ

ಚಿದಾನಂದ ಅವಧೂತರ ಈ ಕೀರ್ತನೆಯಲ್ಲಿ ಗೃಹಸ್ಥನ ಜವಾಬ್ದಾರಿಯ ಸಂಕ್ಷಿಪ್ತ ಉಲ್ಲೇಖ ಇದೆ.

ನಾವೂ ಗೃಹಸ್ಥನ ಕರ್ತವ್ಯ ಅರಿತು ಆ ಪರಮಾತ್ಮನ ಗೃಹದಲ್ಲಿ ನೆಲೆಸೋಣ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗಾಗಿ ಒಮ್ಮೆ ಇಣುಕಿ-

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩