ರಾಮಾಯಣ ೫೮

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೮

*ಪಿಶಾಚಾನ್ದಾನವಾನ್ಯಕ್ಷಾನ್ಪೃಥಿವ್ಯಾಂ ಚೈವ ರಾಕ್ಷಸಾನ್ ಅಂಗುಲ್ಯಗ್ರೇಣ ತಾನ್ಹನ್ಯಾಮಿಚ್ಛನ್ಹರಿಗಣೇಶ್ವರ*

_ರಾಮನು ತನ್ನ ಮಾತು ಮುಂದುವರೆಸುತ್ತಿದ್ದಾನೆ. ಹರಿಗಣಗಳ ಒಡೆಯನೇ, ನಾನು ಬಯಸಿದ್ದೇ ಆದಲ್ಲಿ ಈ ಭೂಮಿಯಲ್ಲಿರುವ ಪಿಶಾಚರನ್ನೂ, ದಾನವರನ್ನೂ, ಯಕ್ಷರನ್ನೂ, ರಾಕ್ಷಸರನ್ನೂ ನನ್ನ ಬೆರಳಿನ ತುದಿಯಿಂದಲೇ ಸಂಹರಿಸುವೆನು. ರಾಮನ ಪರಾಕ್ರಮದ ಎತ್ತರ ಎಷ್ಟಿತ್ತೆಂದು ಅವನ ಮಾತಲ್ಲೇ ಅರಿವಾಗುತ್ತದೆ. ಯಾರನ್ನಾದರೂ ವಧಿಸಬೇಕೆಂದು ಇಚ್ಛಿಸಿದರೆ ಅತ್ಯಲ್ಪಕಾಲದಲ್ಲೇ ಕೊಲ್ಲುವನು ರಾಮ. ಹಾಗಾಗಿ ವಿಭೀಷಣನು ದುಷ್ಟನಿರಲಿ, ಶಿಷ್ಟನಿರಲಿ ಅವನಿಂದ ಯಾವ ಭಯವೂ ಎನಗಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದಾನೆ._

*ಶ್ರೂಯತೇ ಹಿ ಕಪೋತೇನ ಶತ್ರುಃ ಶರಣಮಾಗತಃ ಅರ್ಚಿತಶ್ಚ ಯಥಾನ್ಯಾಯಂ ಸ್ವೈಶ್ಚ ಮಾಂಸೈರ್ನಿಮಂತ್ರಿತಃ*

_ರಾಮನು ಶರಣಾಗತನನ್ನು ಕೈ ಬಿಡಬಾರದೆಂದು ಇದೊಂದು ಕಥೆ ಹೇಳುತ್ತಿದ್ದಾನೆ. ಪಾರಿವಾಳವೊಂದು ವಾಸವಾಗಿದ್ದ ವೃಕ್ಷದ ಬಳಿಗೆ ಬೇಡನೊಬ್ಬ ನಡುಗುತ್ತಾ ಬಂದನು. ಸ್ವಭಾವತಃ ಅವನು ಅದಕ್ಕೆ ಶತ್ರು. ಅದಕ್ಕೆ ಮಿಗಿಲಾಗಿ ಆ ಬೇಡನು ಜೊತೆಗಿದ್ದ  ಹೆಣ್ಣು ಕಪೋತವೊಂದನ್ನು ಕೊಂದಿದ್ದನು. ಅಂತಹ ಶತ್ರು ಬಂದರೂ ಕಪೋತವು ತನ್ನ ಅತಿಥಿಯೆಂದು ಭಾವಿಸಿ ಯಥೋಚಿತವಾಗಿ ಸತ್ಕರಿಸಿತು. ಬೆಂಕಿಯನ್ನು ಹೊತ್ತಿಸಿ ಕಾಯಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟು, ಅನಂತರ ಅವನಿಗೆ ಆಹಾರವಾಗಿ ತಾನೇ ಬೆಂಕಿಯಲ್ಲಿ ಬಿದ್ದು ಸುಟ್ಟುಹೋಯಿತು. ತನ್ನ ಆಶ್ರಯ ಬಯಸಿ ಬಂದವನನ್ನು ಹೇಗೆ ಆದರಿಸಬೇಕೆಂದು ಪಕ್ಷಿಮಾತ್ರವಾದ ಪಾರಿವಾಳದಿಂದ ನಾವು ಕಲಿಯಬೇಕು. ಹಾಗಾಗಿ ವಿಭೀಷಣನು ಏನೇ ಇರಲಿ, ಅವನಿಗೆ ಆಶ್ರಯ ಕೊಡುವುದು ನಮ್ಮ ಧರ್ಮ. ಕಪೋತದ ಉದಾರತೆ ನಮಗೆ ಸಾಧ್ಯವಾಗುವುದೇ!_

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩