ರಾಮಾಯಣ ೫೪
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೪
*ಪೃಚ್ಛ್ಯಮಾನೋ ವಿಶಂಕೇತ ಸಹಸಾ ಬುದ್ಧಿಮಾನ್ವಚಃ ತತ್ರ ಮಿತ್ರಂ ಪ್ರದುಷ್ಯೇತ ಮಿಥ್ಯಾ ಪೃಷ್ಟಂ ಸುಖಾಗತಮ್*
_ಹನುಮ ತನ್ನ ಮಾತು ಮುಂದುವರೆಸುತ್ತಿದ್ದಾನೆ. ವಿಭೀಷಣನ ಬಳಿ ನಾವು ಬಂದ ಕೂಡಲೇ " ನೀನಾರು, ಎಲ್ಲಿಂದ ಬಂದಿರುವೆ, ಏಕೆ ಬಂದಿರುವೆ?" ಎಂದೆಲ್ಲ ಕೇಳಿದರೆ ಬುದ್ಧಿವಂತನಾದ ಅವನು ನಮ್ಮ ವಿಷಯದಲ್ಲಿ ಸಂದೇಹಪಡುವನು. ನಮಗೆ ಅವನ ಪರಿಚಯವಿದ್ದರೂ ಏನೂ ತಿಳಿಯದೆಂಬ ರೀತಿಯಲ್ಲಿ ಪ್ರಶ್ನಿಸುವುದರಿಂದ ಸುಲಭವಾಗಿ ಸಿಕ್ಕಿದ ಮಿತ್ರನ ಮನಸ್ಸು ಕೆಟ್ಟುಹೊಗಬಹುದು. ಇದರಿಂದ ನಮಗೆ ಮಿತ್ರಲಾಭವು ಕೈ ತಪ್ಪಬಹುದು. ಒಬ್ಬನ ಬಗ್ಗೆ ತಿಳಿದೂ ಅವನ ಬಗ್ಗೆ ಪ್ರಶ್ನಿಸಿದರೆ ಬುದ್ಧಿವಂತನಾದ ಮಾನವ ಒಳ್ಳೆಯ ಭಾವನೆ ತಾಳಿಯಾನೇ? ಈ ತಪ್ಪು ನಾವೂ ಕೆಲವೊಮ್ಮೆ ಮಾಡುತ್ತೇವೆ. ತಿಳಿದೂ ತಿಳಿಯದಂತೆ ಪ್ರಶ್ನಿಸುವುದು ಎದುರಿಗಿರುವವನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದಂತೆ. ಇದರಿಂದ ಅವರಿಗೆ ನಮ್ಮ ಮೇಲಿನ ಸದ್ಭಾವನೆ ಹೊರಟುಹೋಗಬಹುದು.ಹಾಗಾಗಿ ವ್ಯವಹಾರದಲ್ಲಿ ಎಚ್ಚರಿಕೆ ಅವಶ್ಯ._
*ಅಶಕ್ಯಃ ಸಹಸಾ ರಾಜನ್ಭಾವೋ ವೇತ್ತುಂ ಪರಸ್ಯ ವೈ ಅಂತಃ ಸ್ವಭಾವೈರ್ಗೀತೈಸ್ತೈರ್ನೈಪುಣ್ಯಂ ಪಶ್ಯತಾ ಭೃಶಮ್*
_ಬೇರೆಯವರ ಮನದ ಭಾವನೆ ಏನೆಂಬುದು ಅರಿಯಲು ಬಹಳ ಕಷ್ಟ. ಆದರೆ ಅವರು ಮಾತನಾಡುವಾಗ ಮಧ್ಯ ಮಧ್ಯದಲ್ಲಿ ಆಗುವ ಸ್ವರಭೇದಗಳಿಂದ ಅವನ ಸ್ವಭಾವವನ್ನು ಅರಿಯಬಹುದು. ಬಂದ ಉದ್ದೇಶವು ಸಾಧುವೋ ಅಸಾಧುವೋ ಎಂಬುದನ್ನು ಸೂಕ್ಷ್ಮವಾಗಿ ಮಾತನಾಡುವಾಗ ಗಮನಿಸಿದರೆ ತಿಳಿಯಬಹುದು. ಹನುಮನ ಈ ಮಾತು ಮನೋವಿಜ್ಞಾನಿಗಳ ಮಾತಿನಂತಿದೆ. ಎದುರಿನವನು ಯಾವ ಭಾವನೆಯಿಂದ ನಮ್ಮ ಬಳಿ ಬಂದವನೆಂದು ಅರಿಯಲು ಬಹಳ ಕಷ್ಟ. ಮನದ ಭಾವನೆ ಮನವೇ ಅರಿಯುವುದು ಹೊರತು ಪರರಲ್ಲ. ಪರರ ಮಾತಿನ ಏರು- ಇಳಿತ, ಧ್ವನಿಯಲ್ಲನ ವ್ಯತ್ಯಾಸ, ಮುಖವಿಕಾರ, ಧ್ವನಿಯ ಬದಲಾವಣೆಗಳು ಇವನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ವಲ್ಪವಾದರೂ ಭಾವಗ್ರಹಣೆ ಸಾಧ್ಯವಾಗುವುದು.ಎಷ್ಟು ಸತ್ಯವಾದ ಮಾತು._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ