ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*तैस्तैः प्रवृद्धविषयैर्विषमैर्विमुक्तं मेघैर्विमुक्तममलं शरदीव सोमम् | आर्यासहायमहमद्य गुरुं दिदृक्षुः प्राप्तोस्मि तुष्टहृदयः स्वजनानुबद्धः ||*
_ಭರತ ರಾಮದರ್ಶನಕ್ಕೆ ಸೈನ್ಯ ಹಾಗೂ ಅಮ್ಮಂದಿರೊಡನೆ ಕಾಡಿಗೆ ಬಂದಿದ್ದಾನೆ. ರಾಮನನ್ನು ಕಂಡು ಅವನಿಗೆ ಆನಂದಬಾಷ್ಪ ಉಕ್ಕುತ್ತಿದೆ. ಆಗ ಹೇಳುವ ನುಡಿ. ಈಗ ಶ್ರೀರಾಮ ಶರತ್ಕಾಲದ ಚಂದ್ರನಂತೆ ಎಡದಲ್ಲಿ ಮಾತೆ, ಬಲದಲ್ಲಿ ಲಕ್ಷ್ಮಣನೊಡಗೂಡಿ ನಕ್ಷತ್ರಗಳ ಮಧ್ಯೆ ಹೊಳೆಯುವಂತೆ ಶೋಭಿಸುತ್ತಿರುವನು. ಇಷ್ಟು ಕಾಲ ಆಯಾ ಸಂದರ್ಭದ ಆಯಾ ಕಷ್ಟಗಳು ಅವನನ್ನು ಮರೆಮಾಚಿದ್ದವು. ಮೋಡದೊಳಗೆ ಮರೆಯಾದ ಚಂದ್ರನಂತೆ ರಾಮನ ಕಾಂತಿ ಮರೆಯಾಗಿತ್ತು. ಆ ಸಮಯದಲ್ಲಿ ನಕ್ಷತ್ರದಂತಿದ್ದ ಸೀತೆಯೂ ಮರೆಯಾಗಿದ್ದಳು. ಈಗ ಅವರೆಲ್ಲರೊಡಗೂಡಿ ಅಪ್ಪನಿಗೆ ಸಮಾನನಾದ ರಾಮನನ್ನು ನೋಡಲು ನನ್ನ ಕಣ್ಣು ಹಾತೊರೆಯುತ್ತಿದೆ. ನೋಡಿದಷ್ಟೂ ತೃಪ್ತಿಯಾಗುತ್ತಿಲ್ಲ ಎಂಬ ಭಾವ. ಈಗ ನನಗೂ ಸಂತೋಷವಾಗಿದೆ. ರಾಜ್ಯವಾಳುತ್ತಿದ್ದರೂ ಅಣ್ಣ ಕಷ್ಟದಲ್ಲಿರುವಾಗ ಯಾವ ತಮ್ಮ ತಾನೇ ಸುಖಿಸಿಯಾನು. ಅಣ್ಣನ ಸುಖವೇ ನನ್ನ ಸುಖ. ಅಣ್ಣ ಸಂತೋಷಪಟ್ಟರೆ ನಾನೂ ಸಂತುಷ್ಟಹೃದಯ. ತನ್ನ ಜನರೊಡಗೂಡಿ ಇಷ್ಟು ಕಾಲ ಹೇಳಿಕೊಳ್ಳಲಾಗದಷ್ಟು ಬೆಟ್ಟದಷ್ಟು ಕಷ್ಟಗಳು ರಾಮನನ್ನು ಮುತ್ತಿಕ್ಕಿದ್ದವು. ಈಗ ಅವೆಲ್ಲ ಮರೆಯಾಗಿ ಹೋಗಿವೆ. ಹಾಗಾಗಿಯೇ ಶರತ್ಕಾಲದ ಚಂದ್ರನಂತೆ ಶುಭ್ರವಾದ ಆಗಸದಲ್ಲಿ ರಾಮನು ತಾರೆಗಳಂತಿರುವ ತನ್ನ ಸಮೂಹದೊಡನೆ ಶೋಭಿಸುತ್ತಿರುವನು. ಕಷ್ಟಗಳನ್ನು ಎಂದಿಗೂ ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬಾರದು. ಅವು ಮತ್ತಷ್ಟು ದುಃಖವನ್ನೇ ತರುವವು. ಅದೇ ಸುಖದ ಘಳಿಗೆಯನ್ನು ಬಾರಿ ಬಾರಿಗೂ ನೆನೆಸಿ ಪ್ರತಿಕ್ಷಣ ಆನಂದಿಸಬೇಕು ಎಂಬ ಭಾವದಲ್ಲೇ ಕವಿ ಆಯಾ ಕಾಲದ ದೊಡ್ಡ ಕಷ್ಟಗಳೆಂದು ಸೂಚ್ಯವಾಗಿ ಹೇಳಿದ್ದಾನೆ.ರಾಮನೂ ಚಂದನಂತೆ ಪ್ರಜೆಗಳ ಬಾಳಿಗೆ ತಂಪು ಚೆಲ್ಲುವವನು. ಹಾಗಾಗಿ ಹೋಲಿಕೆ ಹತ್ತಿರವಿದೆ. *ಪ್ರಜಾಸುಖತ್ವೇ ಚಂದ್ರಸ್ಯ* ಎಂಬ ವಾಲ್ಮೀಕಿಗಳ ಮಾತು ಇದಕ್ಕೆ ಸಾಕ್ಷಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ