ರಾಮಾಯಣ ೫೫
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೫
*ನ ತ್ವಸ್ಯ ಬ್ರುವತೋ ಜಾತು ಲಕ್ಷ್ಯತೇ ದುಷ್ಟಭಾವತಾ ಪ್ರಸನ್ನಂ ವದನಂ ಚಾಪಿ ತಸ್ಮಾನ್ಮೇ ನಾಸ್ತಿ ಸಂಶಯಃ*
_ಹನುಮನ ಮಾತು ಮುಂದುವರಿದಿದೆ. ರಾಮ,ವಿಭೀಷಣನ ಮಾತಿನಲ್ಲಿ ಯಾವ ದೌಷ್ಟ್ಯವೂ ಕಾಣುತ್ತಿಲ್ಲ. ಅವನ ಮೊಗವೂ ಪ್ರಸನ್ನವಾಗಿದೆ. ಹಾಗಾಗಿ ಅವನ ಭಾವವೂ ಸಾಧುವೇ ಆಗಿರಬಹುದೆಂಬುದು ನನ್ನ ಮತ. ದುಷ್ಟನು ಎಂದಿಗೂ ನಿಃಶಂಕನಾಗಿ ಸ್ವಾಸ್ಥಚಿತ್ತನಾಗಿ ನಮ್ಮ ಮುಂದೆ ಬರಲಾರನು. ಅಷ್ಟಲ್ಲದೆ ಇವನ ಮಾತೂ ದೋಷರಹಿತವಾಗಿದೆ. ಆದುದರಿಂದ ಇವನ ವಿಷಯದಲ್ಲಿ ನನಗೆ ಸ್ವಲ್ಪವಾದರೂ ಸಂದೇಹವಿಲ್ಲ. ಮುಖದ ಪ್ರಸನ್ನತೆ ಅರಿತು ಭಾವವನ್ನು ಅರಿಯಬಹುದಲ್ಲವೇ!_
*ಆಕಾರಶ್ಛಿದ್ಯಮಾನೋಪಿ ನ ಶಕ್ಯೋ ವಿನಿಗೂಹಿತಮ್ ಬಲಾದ್ಧಿ ವಿವೃಣೋತ್ಯೇವ ಭಾವಮಂತರ್ಗತಂ ನೃಣಾಮ್*
_ಮನುಷ್ಯನು ತನ್ನ ಆಕಾರ ಮರೆಮಾಚಬಹುದು. ಆದರೆ ತನ್ನ ಮನದ ಭಾವನೆ ಮುಚ್ಚಿಟ್ಟುಕೊಳ್ಳಲಾರನು. ಹೊರಗಿನ ಮುಖವು ಅಂತರಂಗದ ಭಾವನೆಯನ್ನು ಬಲಪೂರ್ವಕವಾಗಿ ಪ್ರಕಟಿಸಿಯೇ ತೀರುತ್ತದೆ. ಎಷ್ಟು ಸತ್ಯ. ನಾವು ಎಷ್ಟು ಪ್ರಯತ್ನಪಟ್ಟರೂ ಮನದ ಭಾವ ಮುಖದಲ್ಲಿ ಹೇಗಾದರೂ ಪ್ರಕಟವಾಗುವುದು. ಒಳಗೆ ಕುದಿಯುತ್ತಾ ಹೊರಗೆ ಸೌಮ್ಯತೆ ತೋರುವುದು ಸಾಧ್ಯವೇ! ಬಹಳ ಕಷ್ಟದ ಕೆಲಸವದು. ಹನುಮನು ಬಹಳ ವರ್ಷ ಮನಶ್ಶಾಸ್ತ್ರ ಓದಿದವನಂತೆ ಮಾತಮಾಡುತ್ತಿರುವ ಪರಿ ಅದ್ಭುತ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ