ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*इमामहं वेद न तावकीं धियं विचित्ररुपाः खलु चित्तवृत्तयः | विचिन्तयन्त्या भवदापदं परां रुजन्ति चेतः प्रसभं ममाधयः ||*

_ದ್ರೌಪದಿಯ ಮಾತು ಧರ್ಮಜನಿಗೆ. ಸುಖದುಃಖಗಳನ್ನು ಸಮನಾಗಿ ಕಾಣುವ ನಿನ್ನ ಬಗೆ ನನಗೆ ಹೇಗೆಂದೇ ತಿಳಿಯದು. ರಾಜಸೂಯ ಯಾಗದ ಅಭಿಷೇಕಕಾಲದಲ್ಲಿ ಯಾವ ಸಮಾಧಾನ ನಿನ್ನ ಮನದಲ್ಲಿತ್ತೋ ಅದೇ ಸಮಾಧಾನ ಇಂದಿನ ಈ ಕಷ್ಟದ ವನವಾಸ ಕಾಲದಲ್ಲೂ ನಿನ್ನಲ್ಲಿದೆ. ಮನದ ವ್ಯಾಪಾರ ವ್ಯಕ್ತಿಯಿಂದ ವ್ಯಕ್ತಿಗೆ ವಿಚಿತ್ರವಾಗಿದೆ. ನಮ್ಮ ಅವಸ್ಥೆ ಕಂಡು ಎನಗೆ ಶೋಕವಾಗುತ್ತಿದ್ದರೆ, ನೀನು ಏನು ಆಗದವನಂತೆ ಶಾಂತವಾಗಿರುವೆ. ಲೋಕದಲ್ಲಿ ಜನರ ಮನವನ್ನು ಅರಿಯುವುದು ಕಷ್ಟ. ಒಬ್ಬೊಬ್ಬರ ವರ್ತನೆಯೂ ಒಂದೊಂದು ಬಗೆಯ ವೈಚಿತ್ರ್ಯ ಹೊಂದಿದೆ. ಒಂದೇ ಸ್ಥಿತಿಯಲ್ಲಿರುವ ನಮ್ಮಿಬ್ಬರ ಮನಸ್ಥಿತಿ ವಿರುದ್ಧವಾಗಿದೆ. ಆದರೆ ನಿನ್ನ ಕಷ್ಟವನ್ನು ನೋಡಿದ ನನ್ನ ಮನವು ಇನ್ನಷ್ಟು ವ್ಯಥೆಯನ್ನು ಅನುಭವಿಸುತ್ತಿದೆ. ನಿನ್ನ ಕಷ್ಟವು ನಿನಗೆ ಸುಖಕರವಾಗಿದ್ದರೂ ನನ್ನ  ಪಾಲಿಗೆ ಮನೋವ್ಯಥೆಯನ್ನು ಕ್ಷಣದಿಂದ ಕ್ಷಣಕ್ಕೆ ಹೆಚ್ಚಿಸುತ್ತಲೇ ಇದೆ. *ಆಧಿ* ಎಂದರೆ ಮನದ ಚಿಂತೆ. ಅದು ತಡೆಯಲಾಗದಷ್ಟು ಉಕ್ಕುತ್ತಿದೆ. ಹಾಗಾಗಿಯೇ ನಿನ್ನ ಮೇಲೆ ಅಪಾರ ಗೌರವವಿದ್ದರೂ  ನಿನ್ನ ಪ್ರವೃತ್ತಿ ವಿಮುಖತೆಯು ನನ್ನನ್ನು ಮಾತನಾಡಿಸುತ್ತಿದೆ. ನಿನಗೆ ಇವೆಲ್ಲವೂ ತಿಳಿದಿದ್ದರೂ ಮತ್ತೆ ಮತ್ತೆ ಹೇಳುತ್ತಲೇ ಇದ್ದೇನೆ. *ವಜ್ರಾದಪಿ ಕಠೋರಾಣಿ* ಎಂಬ ಸೂಕ್ತಿಯು ಇಂತಹ ಮನದ ಬಗೆಗೇ ಹೇಳಿದ್ದಿರಬೇಕು. ಎಷ್ಟು ಕಷ್ಟ ಬಂದರೂ ಎಷ್ಟೇ ದುಃಖ ಬಂದರೂ ಸಮಭಾವ ತಾಳುವ ಧರ್ಮಜನ ಮನಸ್ಥಿತಿ ಕ್ಷಣದಲ್ಲೇ ಬದಲಾಗುವ ಭಾವವಿರುವ ನಮಗೆ ಕಲ್ಪಿಸಿಕೊಳ್ಳಲೂ ಕಷ್ಟ. ನಾವು ದ್ರೌಪದಿಯಂತೆ ಭಾವುಕರು. ನಮ್ಮ ಕಷ್ಟಕ್ಕೂ ಮರುಗುತ್ತೇವೆ. ಇನ್ನೊಬ್ಬರ ಕಷ್ಟವನ್ನು ಕಂಡು ಮತ್ತಷ್ಟು ದುಃಖಿಸುತ್ತೇವೆ. ಕಷ್ಟಕ್ಕೆ ಕಾರಣರಾದವರ ಬಗೆಗೆ ಕೋಪಗೊಳ್ಳುತ್ತೇವೆ. ಧರ್ಮಜನ ಮಾರ್ಗವನ್ನು ಹಿಡಿದು ಎಂತಹ ಸ್ಥಿತಿಯಲ್ಲೂ ಸ್ಥಿರವಾಗಿ ನಿಲ್ಲುವ ಮನಸ್ಥಿತಿಯನ್ನು ಬೆಳೆಸೋಣ. ಸದಾ ಪ್ರಶಾಂತತೆಯನ್ನು ಅನುಭವಿಸೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩