ರಾಮಾಯಣ ೫೧
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೧
*ತ್ವಂ ಹಿ ಸತ್ಯವ್ರತಃ ಶೂರೋ ಧಾರ್ಮಿಕೋ ದೃಢವಿಕ್ರಮಃ ಪರೀಕ್ಷ್ಯಕಾರೀ ಸ್ಮೃತಿಮಾನ್ನಿಸೃಷ್ಟಾತ್ಮಾ ಸುಹೃತ್ಸುಚ*
_ಸುಗ್ರೀವ ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ. ರಾಘವ ಮೂರು ಲೊಕಗಳಲ್ಲಿ ನಿನಗೆ ತಿಳಿಯದಿರುವ ವಿಷಯ ಯಾವುದೂ ಇಲ್ಲ. ಆದರೂ ನನ್ನ ಸುಹೃತ್ ಎಂಬ ಭಾವದಲ್ಲಿ ಹೀಗೆ ವಿಭೀಷಣನ ಬಗೆಗೆ ಹೇಳುತ್ತಿರುವೆ. ನೀನು ಸತ್ಯವ್ರತನು. ಸತ್ಯಕ್ಕೆ ನಿಷ್ಠನಾಗಿ ಬದುಕುವವನು. ಬದುಕಿಗಾಗಿ ಸುಳ್ಳು ಹೇಳುವವನಲ್ಲ. ಅಸಾಮಾನ್ಯ ಶೂರನು. ಮೂರು ಪ್ರಹರಗಳಲ್ಲಿ ಹದಿನಾಲ್ಕು ಸಾವಿರ ಜನರನ್ನು ಕೊಲ್ಲುವುದು ಸಾಮಾನ್ಯವೇ? ಧರ್ಮವನ್ನು ಸಂಪೂರ್ಣವಾಗಿ ಅರಿತವನು. ಧರ್ಮದ ಬಗೆಗೆ ನಿನಗೆ ಸಂಶಯ ವಿಪರೀತ ಜ್ಞಾನ ಇಲ್ಲ. ದೃಢವಾದ ಪರಾಕ್ರಮಿ. ಎಷ್ಟು ಹೊತ್ತು ಬೇಕಾದರೂ ಗಟ್ಟಿಯಾಗಿ ನಿಂತು ರಣರಂಗದಲ್ಲಿ ಹೋರಾಡುವವನು. ಯಾವುದು ಯುಕ್ತ, ಯಾವುದು ಅಯುಕ್ತ ಎಂಬುದನ್ನು ಪರೀಕ್ಷಿಸಿ ಕಾರ್ಯದಲ್ಲಿ ತೊಡಗುವವನು. ಸುಮ್ಮನೆ ಮನಬಂದಂತೆ ಪ್ರವರ್ತಿಸುವವನಲ್ಲ. ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವವನು. ಪ್ರತಿಯೊಂದರ ಕಡೆಗೂ ಏಕಾಗ್ರತೆ ಇದ್ದಾಗ ಎಲ್ಲವೂ ನೆನಪಿನಲ್ಲಿ ಇರುತ್ತದೆ. ಗೆಳೆಯರಲ್ಲಿ ಸಂಪೂರ್ಣ ವಿಶ್ವಾಸ ತಾಳಿದವನು. ಗುಹನಿರಲಿ ಸುಗ್ರೀವನಿರಲಿ ಗೆಳೆಯರೆಂದಾದ ಮೇಲೆ ಅವರ ತಪ್ಪುಗಳನ್ನೂ ಕ್ಷಮಿಸುವ ಉದಾರತೆ ತೋರುವವನು. ಗೆಳೆತನಕ್ಕೆ ಯೋಗ್ಯರನ್ನು ಮಾತ್ರ ಆಯ್ಕೆ ಮಾಡುವವನು. ಹಾಗಾಗಿಯೇ ಈ ವಿಷಯದಲ್ಲಿ ಏನು ಮಾಡಬೇಕೆಂದು ನೀನೇ ನಿರ್ಣಯಿಸು. ರಾಮನ ಭಜಕರಾದ ನಾವು ಇಷ್ಟು ಗುಣಗಳನ್ನು ಹೊಂದಿದರೆ ನಮ್ಮ ಆಂತರ್ಯದಲ್ಲೂ ರಾಮ ಕಾಣಿಸಿಯಾನು ಅಲ್ಲವೇ! ಬರೀ ಜಪ, ತಪ ರಾಮನನ್ನು ಕಾಣಿಸಲಾರದು. ಇವೆಲ್ಲ ಇದ್ದರೆ ರಾಮನೇ ನಮ್ಮ ಬಳಿಗೆ ಬಂದಾನು._
*ಛಾದಯಿತ್ವಾತ್ಮಭಾವಂ ಹಿ ಚರಂತಿ ಶಠಬುದ್ಧಯಃ ಪ್ರಹರಂತಿ ಚ ರಂಧ್ರೇಷು ಸೋನರ್ಥಃ ಸುಮಹಾನ್ಭವೇತ್*
_ಸುಗ್ರೀವ ಮುಂದುವರೆಸುತ್ತಿದ್ದಾನೆ. ರಾಮ, ವಂಚನೆಯ ಬುದ್ಧಿಯಿಂದ ಕೂಡಿದ ಜನರು ತಮ್ಮ ಮನೋಭಾವವನ್ನು ಬಹಿರಂಗಗೊಳಿಸದೆ ಎಲ್ಲೆಡೆ ಸಂಚರಿಸುತ್ತಿರುತ್ತಾರೆ. ಸಮಯ ಸಿಕ್ಕಿದೊಡನೆ ಪ್ರಹಾರ ಮಾಡುತ್ತಾರೆ. ಹಾಗೇನಾದರೂ ಆದರೆ ದೊಡ್ಡ ಅನರ್ಥವೇ ಸಂಭವಿಸುತ್ತದೆ. ಕೆಲವರ ಕಾಯಕವೇ ವಂಚನೆ. ಅವರು ಸಮಯವನ್ನು ಮಾತ್ರ ನಿರೀಕ್ಷಿಸುತ್ತಾರೆ. ನಮ್ಮ ತಪ್ಪುಗಳು ಕಂಡಲ್ಲಿ ಅದನ್ನೇ ದೊಡ್ಡ ದೋಷವನ್ನಾಗಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವರು. ಅಂತಹ ಜನರೊಡನೆ ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕು. ಇಲ್ಲದಿದ್ದರೆ ಮರೆಯಲಾಗದ ಹೊಡೆತ ನೀಡುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಜನ ಇಂತಹವರು ದೊರೆಯುತ್ತಾರೆ. ಇದಕ್ಕೆ ಜಾಗರೂಕತೆಯೇ ಉತ್ತಮ ಉಪಾಯ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ