ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*रेणुः समुत्पतति लोध्रसमानगौरः सम्प्रावृणोति च दिशः पवनावधूतः | शञ्खध्वनिश्च पटहस्वनधीरनादैः सम्मूर्छितो वनमिदं नगरीकरोति ||*
_ಸೀತಾರಾಮರು ಸರಸ ಸಂಭಾಷಣೆಗಳಲ್ಲಿ ನಿರತರಾಗಿದ್ದಾರೆ. ಭರತನ ರಥ ಅಣ್ಣನಿಗಾಗಿ ಓಡೋಡಿ ಬರುತ್ತಿದೆ. ಆ ರಥದ ಆಗಮನದ ಬಗ್ಗೆ ರಾಮನ ಮಾತು. ಸೀತೆ, ನೋಡು ಆ ಕಡೆ, ಲೋಧ್ರಪುಷ್ಪದಂತೆ ಅಚ್ಚ ಬಿಳುಪಿನ ಧೂಳು ಮಣ್ಣಿನಿಂದ ಏಳುತ್ತಿದೆ. ರಥದ ವೇಗಕ್ಕೆ ಮಣ್ಣಿನ ಮೇಲ್ಮೈಯ ಬಿಳುಪಾದ ಧೂಳು ಅಥವಾ ಮರಳು ಮಿಶ್ರಿತ ಧೂಳು ಪುಟಿದೇಳುತ್ತಿದೆ. ಆ ಧೂಳು ಗಾಳಿಯಲ್ಲಿ ಲೀನವಾಗುತ್ತಾ ದಿಕ್ಕು ದಿಕ್ಕುಗಳನ್ನು ಆವರಿಸುತ್ತಿದೆ. ಎದುರಿನ ದೃಶ್ಯವನ್ನೂ ಮರೆಮಾಚುವಷ್ಟು ವಿಶಾಲವಾಗಿ ವ್ಯಾಪಿಸುತ್ತಿದೆ. ( ಕೆಲವೊಮ್ಮೆ ಕೃತಕ ಮೋಡ ಕವಿದ ವಾತಾವರಣ ಮಾಲಿನ್ಯದ ಧೂಳಿನಿಂದ ಸೃಷ್ಟಿಯಾಗುತ್ತದೆ. ಅದು ಸೂರ್ಯನ ಕಿರಣವನ್ನೇ ಮರೆಮಾಚುತ್ತದೆ.) ಶಂಖ, ನಗಾರಿಗಳ ದೂರವ್ಯಾಪಿಸುವ ಧ್ವನಿಯು ಕ್ಷಣದಿಂದ ಕ್ಷಣಕ್ಕೆ ವರ್ಧಿಸುತ್ತಾ ನಾವಿರುವ ವನಪ್ರದೇಶವನ್ನು ನಗರವಾಗಿ ಪರಿವರ್ತಿಸುವಂತಿದೆ. ನಗರಗಳ ಮುಖ್ಯ ಲಕ್ಷಣಗಳು, ವಾಯು ಮಾಲಿನ್ಯ, ಶಬ್ದಮಾಲಿನ್ಯ, ಎಲ್ಲೆಡೆ ಆವರಿಸಿರುವ ಧೂಳು, ಜನಸಂದಣಿ. ಅವೆಲ್ಲ ಭರತಾಗಮನದ ಕಾರಣ ಈ ವನದಲ್ಲೇ ಉಂಟಾಗುತ್ತಿದೆ. ಹದಿನಾಲ್ಕು ವರ್ಷ ಕಳೆದು ಪುನಃ ಹಿಂತಿರುಗುತ್ತಿರುವ ರಾಜಾರಾಮನ ಸ್ವಾಗತಕ್ಕೆ ಭರತ ಸೈನ್ಯದ ತುಕಡಿಯ ಸಹಿತ ಬರುತ್ತಿದ್ದಾನೆ. ಅಶ್ವಗಳ ಕಾಲಗೊರಸುಗಳಿಂದ ತಿವಿಯಲ್ಪಟ್ಟ ಭೂಮಿಯ ಮೇಲಿನ ರೇಣು ಆಕಾಶದೆತ್ತರಕ್ಕೆ ವ್ಯಾಪಿಸುವಂತಿದೆ. ಗಾಳುಯಲ್ಲಿನ ಉಳಿದ ಕಣಗಳೊಡಗೂಡಿ ಇದು ಲೋಧ್ರ ಪುಷ್ಪದಂತೆ ಬಿಳಿ ಬಣ್ಣವನ್ನೂ ಪಡೆದಿದೆ. ಪ್ರಶಾಂತವಾಗಿ ನಿರ್ಮಲವಾಗಿದ್ದ ಈ ಪರಿಸರದಲ್ಲಿ ಅಶಾಂತಿ ಬೆಳೆದು ನಗರದಂತೆ ಭಾಸವಾಗುತ್ತಿದೆ. ಕವಿಯ ಮಾತು ಆಗಲೇ ನಗರೀಕರಣದ ಕಲ್ಪನೆಯನ್ನು ಸುಂದರವಾಗಿ ಮೂಡಿಸಿದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ