ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*व्रजन्ति ते मूढधियः पराभवं भवन्ति मायाविषु ये न मायिनः | प्रविश्य हि घ्नन्ति शठास्तथाविधानसंवृताङ्गान्निशिता इवेषवः ||*

_ದ್ರೌಪದಿ ತನ್ನ ಅಳಲನ್ನು ಧರ್ಮಜನ ಬಳಿ ತೋಡಿಕೊಳ್ಳುತ್ತಿದ್ದಾಳೆ. ಚಾರನು ಶತ್ರುವಿನ ಏಳಿಗೆಯನ್ನು ವರದಿ ಮಾಡಿ ತೆರಳಿದ್ದಾನೆ. ದ್ರೌಪದಿಗೆ ಅದನ್ನು ಕಂಡು ಮತ್ತಷ್ಟು ಆಕ್ರೋಶ ಉಂಟಾಗಿದೆ. ಹಾಗೆ ಹೇಳುವ ಮಾತಿದು - ರಾಜನೇ, ಮುಳ್ಳನ್ನು ಮುಳ್ಳುನಿಂದಲೇ ತೆಗೆಯಬೇಕು, ವಂಚಕರ ಬಳಿ ವಂಚನೆಯ ಮಾರ್ಗವನ್ನೇ ಅನುಸರಿಸಬೇಕು. ದುರ್ಯೋಧನಾದಿಗಳು ಸ್ವಭಾವತಃ ವಂಚಕರು. ಅವರ ಬಳಿ ನಿನ್ನ ಧರ್ಮೋಪದೇಶ ನಡೆದೀತೇ! ಹಾಗೆ ಮಾಡದಿದ್ದರೆ ಅಂತಹ ಮಂದಬುದ್ಧಿಗಳು ಸೋಲನ್ನು ಕಾಣುವರು. ಮೋಸಗಾರರ ಬಳಿ ನ್ಯಾಯಮಾರ್ಗದಿಂದ ವ್ಯವಹರಿಸಿದರೆ ಅಂತಹ ದಡ್ಡರು ಪರಾಜಯವನ್ನೇ ಹೊಂದುವರು. ಏಕೆಂದರೆ ವಂಚಕರು ಅಂತಹ ಪ್ರಾಮಾಣಿಕರಾದ ರಕ್ಷಣೆ ಮಾಡಿಕೊಳ್ಳದ ಜನರನ್ನು  ತಮ್ಮ ಚೂಪಾದ ಬಾಣಗಳಿಂದ ಅಥವಾ ತಮ್ಮ ಕುಟಿಲ ಉಪಾಯಗಳಿಂದ ಅವರ ಮನೆಯೊಳಬಂದು ಕೊಲ್ಲುವರು. ಹಾಗಾಗಿ ಅವರ ಬಳಿ ಅಂತಹ ವರ್ತನೆ ಮಾಡಬಾರದು. ದುರ್ಯೋಧನಾದಿಗಳು ಕಪಟ ದ್ಯೂತದಿಂದ ಪ್ರಾಮಾಣಿಕತೆಯೇ ಉಸಿರಾಗಿರುವ ನಿನ್ನನ್ನು ಮೊದಲೇ ವಂಚಿಸಿದ್ದಾರೆ. ಇನ್ನು ಈ ಕಾಡಲ್ಲಿರುವ ಕಾಲದಲ್ಲೇ ನಮ್ಮನ್ನು ಕೊಲ್ಲಲು ನಾನಾ ಕುಟಿಲೋಪಾಯಗಳನ್ನು ಪ್ರಯೋಗಿಸಬಹುದು. ನಾವು ಅವರಿಗೆ ತಕ್ಕ ಉಪಾಯ ಮಾಡಿ ನಿವಾರಿಸುವ ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸಬೇಕು. ನಮ್ಮ ಜೀವನದಲ್ಲೂ ಎಲ್ಲಾ ಸಮಯದ ಸಾಧುಸ್ವಭಾವವು ನಮ್ಮನ್ನೇ ಬಲಿತೆಗೆದುಕೊಳ್ಳಬಹುದು. ಕಳ್ಳರು ಮನೆಗೆ ಬಂದಾಗ ಕರುಣೆ ತೋರಬಹುದೇ, ದಾರಿಯಲ್ಲಿ ಹೋಗುತ್ತಿದ್ದಾಗ ಗುದ್ದಿ ಗಾಯಮಾಡುವವರನ್ನು ಹೋಗಲಿ ಎಂದು ಬಿಡಬಹುದೇ, ಸಾಲ ಪಡೆದು ಕೊಡದೇ ವಂಚಿಸುವವರನ್ನು ಆದರಿಸಲಾದೀತೇ ಎಂದಿಗೂ ಸಾಧ್ಯವಿಲ್ಲ. ಪಂಚತಂತ್ರದ ಒಂದು ಕಥೆಯೇ *ಶಠಂ ಪ್ರತಿ ಶಾಠ್ಯಮ್* ಎನ್ನುವುದು. ಮೋಸಕ್ಕೆ ತಕ್ಕದಾಗಿರುವುದು ಮೋಸವೇ ಹೊರತು ಆಲಸ್ಯವಲ್ಲ. ನಮ್ಮ ದೇಶದ ಗಡಿಗಳಲ್ಲಿ ಪ್ರಾಣಹಾನಿ ಮಾಡುವವರನ್ನು, ನಮ್ಮ ನಮ್ಮಲ್ಲೇ ಒಡಕು ತರುವವರನ್ನು, ಬಡತನದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವವರನ್ನು ಅವರ ದಾರಿಯಲ್ಲೇ ಸದೆಬಡಿಯಬೇಕು ಹೊರತು ಕೈ ಕಟ್ಟಿ ಆದರಿಸಿ ಮಾತನಾಡುವ ಮೂಲಕ ಅಲ್ಲ. ಭಾಸನ ಈ ಶ್ಲೋಕ ನಮ್ಮೆಲ್ಲರಿಗೂ ಒಂದು ನೀತಿ ಪಾಠ. ಕೃಷ್ಣ ಕುಟಿಲನೀತಿಯನ್ನು ಅನುಸರಿಸಿಯೇ ಕೌರವರನ್ನು ದಮನಿಸಿದ್ದೇ ಹೊರತು ಕೇವಲ ಭೀಮಾರ್ಜುನರ ಪರಾಕ್ರಮವನ್ನು ಅವಲಂಬಿಸಿ ಅಲ್ಲ. ಕುಟಿಲತೆಗೆ, ವಕ್ರತೆಗೆ ಅವರದೇ ಭಾಷೆಯಲ್ಲಿ ಉತ್ತರಿಸಿ ಜಯ ಸಾಧಿಸೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩