ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*स्वर्गेपि तुष्टिमुपगच्छ विमञ्च दैन्यं कर्म त्वयाभिलषितं मयि यत् तदेतत् | राजा किलास्मि भुवि सत्कृतभारवाही धर्मेण लोकपरिरक्षणमभ्युपेतत् ||*
_ರಾಮನು ಲಂಕೆಯಿಂದ ವಿಜೇತನಾಗಿ ಹಿಂತಿರುಗಿ ಅಭಿಷೇಕಕ್ಕೆ ಅಣಿಯಾಗುತ್ತಿರುವನು. ಆಗ ಆಕಾಶದೆಡೆಗೆ ಒಮ್ಮೆ ಆತ್ಮೀಯವಾಗಿ ನೋಡಿ ನುಡಿಯುವ ಮಾತು. ಅಪ್ಪಾ, ನಿನ್ನಾಸೆ ಈಡೇರಿತು. ಇಂದು ಸಂತೋಷ ಹೊಂದು. ಮನದ ಶೋಕವನ್ನು ತ್ಯಜಿಸು. ನೀನು ಬಯಸಿದಂತೆ ನಿನ್ನ ಜ್ಯೇಷ್ಠ ಮಗನಾದ ಈ ರಾಮ ರಾಜಪದವಿಯನ್ನು ಏರುತ್ತಿರುವನು. ಯಾವುದು ಕಣ್ಣೆದುರು ನಡೆಯಲಿಲ್ಲವೆಂದು ಕೊರಗಿ ನೀನು ಲೋಕ ತ್ಯಜಿಸಿದೆಯೋ ಆ ಶುಭ ಘಳಿಗೆ ಇನ್ನೇನು ಅರೆಕ್ಷಣದಲ್ಲಿ ಸಮೀಪಿಸಿದೆ. ನಿನ್ನ ಮನದಾಸೆ ನೆರವೇರಿದ ಕಾರಣ ಹಳೆಯ ದುಃಖ ಮರೆತು ಮನಸಾರೆ ಆನಂದ ಅನುಭವಿಸಿ ಈ ನಿನ್ನ ಕುವರನನ್ನು ಹರಸು. ಸ್ವರ್ಗದಲ್ಲಿ ವಾಸವಾಗಿರುವ ನೀನು ನಮಗೆ ಇಲ್ಲೇ ಸ್ವರ್ಗವಾಗುವಂತೆ ಅನುಗ್ರಹಿಸು. ಇಂದಿನಿಂದ ರಾಜ್ಯರೂಪ ಭಾರವು ನನ್ನ ಹೆಗಲೇರಿದೆ. ಭೂಮಿಯ ಭಾರವೆಲ್ಲ ಈ ರಾಜನನ್ನೇ ಆಶ್ರಯಿಸಿದೆ. ಇಲ್ಲಿ ರಾಜನ ಜವಾಬ್ದಾರಿ ರಾಮನ ಮಾತಿನಲ್ಲಿದೆ. ರಾಜ್ಯದ ಯಾವ ಪ್ರದೇಶದಲ್ಲಿ ಏನೇ ಸುಕೃತ ದುಷ್ಕೃತಗಳು ಜರುಗಲಿ ಅವೆಲ್ಲಕ್ಕೂ ಅವನೇ ಬಾಧ್ಯ. ನನಗೆ ಗೊತ್ತಿಲ್ಲ, ನಾನು ಹೊಣೆಗಾರನಲ್ಲ ಎಂದು ಈಗಿನಂತೆ ನುಣುಚಿಕೊಳ್ಳುವವನಲ್ಲ ರಾಮ. ಹಾಗಾಗಿಯೇ ಈಗಿನ ದುಷ್ಟರು ಅವನನ್ನೇ ನಿರಾಕರಿಸುತ್ತಾರೆ. ಕೊನೆಯ ಪಾದದ ಮಾತಂತೂ ಎಚ್ಚರಿಸುವ ಮಾತು. ಲೋಕರಕ್ಷಣೆಯನ್ನು ಧರ್ಮದಿಂದ ನಡೆಸುವ ಜವಾಬ್ದಾರಿಯನ್ನು ನಾನು ಇಂದಿನಿಂದ ಅಂಗೀಕರಿಸಿದ್ದೇನೆ. ಲೋಕದ ರಕ್ಷಣೆಯಾಗಬೇಕೆಂದು ಧರ್ಮ ಬಿಡಲಿಕ್ಕಿಲ್ಲ. ಏಕೆಂದರೆ ಧರ್ಮವೇ ರಾಜನನ್ನು ರಕ್ಷಿಸುವಂತಹದು. ಹಾಗಾಗಿ ಧರ್ಮಕ್ಕನುಸಾರವಾಗಿ ಆಡಳಿತ ನಡೆಸುವೆನು. ಧರ್ಮ ಮೀರಿದ ರಕ್ಷಣೆ ಅದು ರಕ್ಷಣೆಯಲ್ಲ. ಒಬ್ಬನಿಗೆ ರಕ್ಷಣೆಯಾದರೂ ಮತ್ತೊಬ್ಬನಿಗೆ ಭಕ್ಷಣೆಯಾಗುವುದು. ಆದ್ದರಿಂದ ಧರ್ಮಕ್ಕೆ ಚ್ಯುತಿ ಬಾರದಂತೆ ರಾಜನ ಅಧಿಕಾರ ಚಲಾಯಿಸುವೆನೇ ಹೊರತು ಸ್ವಹಿತಾಸಕ್ತಿಯಿಂದಲ್ಲ. ರಾಮನ ಮಾತು ಸಾರ್ವಕಾಲಿಕ. ಈಗಿನವರು ಧರ್ಮವೆಂದರೆ ಕನ್ನಡ ಬಳಕೆಯ *ಉಚಿತ* ಎಂಬ ಅರ್ಥ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಆದರೆ ಅದು ಧರ್ಮ ಅಲ್ಲ. ಪರಹಿತ ಬಯಸುವ, ಯಾರೊಬ್ಬರ ಮನ- ತನು ನೋಯಿಸದ ಆಲೋಚನೆಯೇ ಧರ್ಮ.ಕವಿಯ ಈ ಶ್ಲೋಕ ಸುಂದರ._
📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ