ಮಹಾಭಾರತ
📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙
_ಅರ್ಜುನನು ಗಂಧರ್ವನ ಬಳಿ ಮತ್ತೆ ಕೇಳಿದನು. "ರಾಜನಾದ ಕಲ್ಮಾಷಪಾದನು ಯಾವ ಕಾರಣದಿಂದ ತನ್ನ ಗುರುವಿನ ಬಳಿ ಸಮಾಗಮಕ್ಕೆಂದು ಪತ್ನಿಯನ್ನು ಕಳುಹಿದನು?" ಆಗ ಗಂಧರ್ವ ಉತ್ತರಿಸಿದನು. ವಸಿಷ್ಠ ಪುತ್ರನಾದ ಶಕ್ತಿಯ ಶಾಪದಿಂದ ಕಂಗೆಟ್ಟ ರಾಜನು ಪತ್ನೀ ಸಮೇತನಾಗಿ ಪಟ್ಟಣವನ್ನು ಬಿಟ್ಟು ಅರಣ್ಯಕ್ಕೆ ಹೋದನು. ಅಲ್ಲಿ ರಾಕ್ಷಸರ ವರ್ತನೆ ತೋರಿಸುತ್ತಿದ್ದನು. ಹೀಗಿರಲು ಒಂದು ದಿನ ಹಸಿವಿನ ಕಾರಣದಿಂದ ಆಹಾರ ಹುಡುಕುತ್ತಿದ್ದಾಗ ಮೈಥುನಕ್ಕಾಗಿ ತೊರೆಯ ಬಳಿಯಲ್ಲಿ ಕೂಡಿಕೊಂಡಿದ್ದ ಒಂದು ಬ್ರಾಹ್ಮಣ ದಂಪತಿಯನ್ನು ನೋಡಿದನು. ಇವನನ್ನು ಕಂಡ ಕೂಡಲೇ ಹೆದರಿದ ಅವರು ತಮ್ಮ ಇಷ್ಟಾರ್ಥ ನೆರವೇರದೇ ಓಡಿಹೋದರು. ಹಾಗೆ ಹೋಗುತ್ತಿರುವಾಗ ಈ ರಾಜನು ಬ್ರಾಹ್ಮಣನನ್ನು ಬಲಾತ್ಕಾರವಾಗಿ ಹಿಡಿದನು. ಆಗ ಬ್ರಾಹ್ಮಣಿಯು ಹೀಗೆ ಕೇಳುತ್ತಾಳೆ. " ಉತ್ತಮ ವ್ರತವುಳ್ಳ ರಾಜನೇ ನನ್ನ ಮಾತನ್ನು ಕೇಳು. ಸೂರ್ಯವಂಶದಲ್ಲಿ ನೀನು ಹುಟ್ಟಿರುವೆ. ಪ್ರಮಾದ ಇಲ್ಲದೆ ಧರ್ಮ ಆಚರಿಸುತ್ತಿರುವಿ. ಪ್ರತಿಭಟಿಸಲು ಅಸಾಧ್ಯವಾದವನೇ, ಶಾಪಕ್ಕೊಳಗಾಗಿ ನೀನು ಹೀಗೆ ಮಾಡುತ್ತಿರುವೆ. ಋತುಕಾಲ ಪ್ರಾಪ್ತವಾದ ಕಾರಣ ನಾನು ಪತಿಯೊಡನೆ ಕೂಡುವುದರಲ್ಲಿದ್ದೆ. ನನಗೆ ಸಂತಾನದಿಂದ ಬಹಳ ಪ್ರಯೋಜನವಿದೆ. ನನ್ನ ಇಷ್ಟಾರ್ಥ ಇನ್ನೂ ನೆರವೇರಲಿಲ್ಲ. ಹಾಗಾಗಿ ಪ್ರಸನ್ನನಾಗಿ ನನ್ನ ಪತಿಯನ್ನು ಬಿಟ್ಟುಬಿಡು".
ಅವಳು ಎಷ್ಟು ಗೋಳಾಡಿದರೂ ಶಾಪದ ಪರಿಣಾಮ ರಾಕ್ಷಸರ ಸ್ವಭಾವ ಹೊಂದಿದ್ದ ಆ ರಾಜನು ಹುಲಿಯು ಮೃಗವನ್ನು ತಿನ್ನುವಂತೆ ಆ ಬ್ರಾಹ್ಮಣನನ್ನು ಭಕ್ಷಿಸಿದನು. ಆಗ ಆ ಸಾಧ್ವಿಯ ಕೋಪದ ಕಣ್ಣೀರು ನೆಲಕ್ಕೆ ಬಿದ್ದು ಆ ಪ್ರದೇಶವೇ ಸುಟ್ಟು ಹೋಯಿತು. ತರುವಾಯ ಪತಿಯ ಮರಣದಿಂದ ದುಃಖಿತಳಾದ ಆ ಬ್ರಾಹ್ಮಣಿ ಕ್ರೋಧದಿಂದ ಹೀಗೆ ಶಪಿಸಿದಳು. " ನೀಚ ಇಷ್ಟಾರ್ಥ ಪೂರೈಸದಿರುವ ನನ್ನ ಪತಿಯನ್ನು ಕಣ್ಣೆದುರೇ ಭಕ್ಷಿಸಿದೆ. ದುರ್ಬುದ್ಧಿಯುಳ್ಳವನೇ ನಿನ್ನ ಪತ್ನಿಗೆ ಋತುಕಾಲ ಸಮೀಪಿಸಿದಾಗ ನೀನು ಪತ್ನಿಯೊಡನೆ ಸೇರಿದೆಯೆಂದರೆ ಆ ಕೂಡಲೇ ಪ್ರಾಣಬಿಡುವೆ.ಯಾವ ವಸಿಷ್ಠನ ಪುತ್ರರನ್ನು ನೀನು ಕೊಂದೆಯೋ ಆ ವಸಿಷ್ಠನನ್ನು ಸಂಗಮಿಸಿದರೆ ನಿನ್ನ ವಂಶ ಬೆಳೆಯುವುದು."
ಹೀಗೆ ಶಾಪನೀಡಿದ ಆಂಗಿರಸನ ಮಗಳಾದ ಆ ಸಾಧ್ವಿ ಅವನೆದುರಲ್ಲೇ ಪತಿಯ ದೇಹದೊಡನೆ ಸುಟ್ಟುಹೋದಳು. ಅನಂತರ ವಸಿಷ್ಠನು ತನ್ನ ತಪಶ್ಶಕ್ತಿಯಿಂದ ಇವೆಲ್ಲವನ್ನೂ ತಿಳಿದು ದುಃಖಿಸಿದನು. ವಿಧಿಯ ನಿರ್ಣಯವನ್ನು ತಿಳಿದು ಅಚ್ಚರಿಗೊಂಡನು. ತರುವಾಯ ಶಾಪ ಕಳೆದ ಮೇಲೆ ಋತುಕಾಲದಲ್ಲಿ ಪತ್ನಿಯಾದ ಮದಯಂತಿಯೊಡನೆ ಆ ರಾಜನು ಕೂಡಲು ಹೋದಾಗ ಅವಳು ಶಾಪವನ್ನು ನೆನಪಿಸಿ ಪತಿಯನ್ನು ಬದುಕಿಸಿದಳು. ಅನಂತರ ವಸಿಷ್ಠರನ್ನು ಒಪ್ಪಿಸಿ ತನ್ನ ಪತ್ನಿಯ ಮೂಲಕ ವಂಶ ಬೆಳೆಸಿದನು._
_ತಪ್ಪು ತಿಳಿದು ಮಾಡಿದರೇನು, ತಿಳಿಯದೇ ಮಾಡಿದರೇನು ಫಲವನ್ನು ಅನುಭವಿಸದೇ ವಿಧಿಯಿಲ್ಲ. ನಾವು ಎಷ್ಟೋ ಬಾರಿ ಗೊತ್ತಿಲ್ಲದೆ ಏನೋ ಮಾಡಿದೆವು, ತೊಂದರೆ ಬರಲಾರದೆಂದು ಭಾವಿಸುವೆವು. ಆದರೆ ಅದು ಸಾಧ್ಯವಿಲ್ಲ. ರಾಜನು ರಾಕ್ಷಸನಾಗಿ ಸ್ವಭಾವ ಪರಿವರ್ತನೆ ಆದಾಗ ಮಾಡಿದ ಆ ದುಷ್ಕೃತ್ಯಕ್ಕೆ ಅವನೇ ಫಲವನ್ನು ಅನುಭವಿಸಬೇಕಾಯಿತು. ಈಗ ಯಾರೂ ನಮ್ಮೆದುರು ಶಾಪ ಕೊಡದಿದ್ದರೂ ಒಬ್ಬರ ಮನದ ನೋವು ಖಂಡಿತ ನಮ್ಮನ್ನು ಶಾಪದಂತೆ ಪೀಡಿಸುತ್ತದೆ. ಹಾಗಾಗಿ ಇನ್ನೊಬ್ಬರಿಗೆ ನೋವುಂಟುಮಾಡದಂತೆ ನಮ್ಮ ಜೀವನ ನಡೆಸೋಣ._
_
📗 ಆಕರ - ಉದ್ಯೋಗಪರ್ವ ೧೭೩ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ