ರಾಮಾಯಣ ೫೭
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೭
*ಅಮಿತ್ರಾಸ್ತತ್ಕುಲೀನಾಶ್ಚ ಪ್ರಾತಿದೇಶ್ಯಾಶ್ಚ ಕೀರ್ತಿತಾಃ ವ್ಯಸನೇಷು ಪ್ರಹರ್ತಾರಸ್ತಸ್ಮಾದಯಮಿಹಾಗತಃ*
_ವಿಭೀಷಣನ ಆಗಮನದ ಬಗ್ಗೆ ರಾಮನು ಮಾತು ಮುಂದುವರೆಸುತ್ತಿದ್ದಾನೆ. ತನ್ನೊಡನೆಯೇ ಹುಟ್ಟಿದ ಬಂಧುವಿರಲಿ ಅಥವಾ ತನ್ನ ರಾಜ್ಯದ ಸಮೀಪದಲ್ಲಿರುವ ರಾಜರಿರಲಿ ತನಗೆ ಶತ್ರುಗಳೆಂದು ಅನಿಸಿದರೆ ಪರಾಕ್ರಮಿಯು ಅಂತಹವರನ್ನು ಕೊಂದುಬಿಡುತ್ತಾನೆ. ತನಗೆ ತೊಂದರೆ ಎದುರಾದಾಗ ಯಾರು ಏನೆಂದು ಯೋಚಿಸದೇ ಬಂಧುಗಳಿರಲಿ, ಅಣ್ಣತಮ್ಮಂದಿರಲಿ, ಪಕ್ಕದ ರಾಜ್ಯದ ಆತ್ಮೀಯ ರಾಜನೇ ಇರಲಿ ಕೊಲ್ಲುತ್ತಾರೆ. ರಾಜಕಾರಣವೇ ಅಂತಹದು. ಅಲ್ಲಿ ಭಾವನೆಗಿಂತ ಸಂಭಾವನೆಗೆ ಅಂದರೆ ದುಡ್ಡು ಅಧಿಕಾರಕ್ಕೆ ಹೆಚ್ಚು ಪ್ರಾಮುಖ್ಯತೆ. ಪ್ರಕೃತ ವಿಭೀಷಣನು ರಾವಣನ ತಮ್ಮನೇ ಆಗಿದ್ದರೂ ಅವನಿಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಹಾಗಾಗಿ ಇವನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಲ್ಲಿಗೆ ಬಂದಿದ್ದಾನೆ. ಅವನು ನಮ್ಮ ವಿಷಯದಲ್ಲಿ ಖಂಡಿತವಾಗಿಯೂ ಕೇಡೆಣಿಸನು. ಯುದ್ಧ ಆರಂಭವಾದಾಗ ನಾವು ಯಾವ ಪಕ್ಷದಲ್ಲಿರಬೇಕೆಂಬುದು ರಾಮನ ಮಾತಿನಲ್ಲಿ ಸೂಕ್ಷ್ಮವಾಗಿ ತಿಳಿಸಲ್ಪಟ್ಟಿದೆ._
*ಅಪಾಪಾಸ್ತತ್ಕುಲೀನಾಶ್ಚ ಮಾನಯಂತಿ ಸ್ವಕಾನ್ಹಿತಾನ್ ಏವಂ ಪ್ರಾಯೋ ನರೇಂದ್ರಾಣಾಂ ಶಂಕನೀಯಸ್ತು ಶೋಭನಃ*
_ಪಾಪರಹಿತರಾದ ಸ್ವವಂಶದವರು ತಮ್ಮ ಕುಲದ ಹಿತಕ್ಕೆ ಯಾವಾಗಲೂ ಮಾನ್ಯತೆ ಕೊಡುತ್ತಾರೆ. ಆದರೆ ರಾಜರಿಗೆ ಅವರು ಶುಭಪ್ರದರಾಗಿದ್ದರೂ ಶಂಕನೀಯರೇ ಆಗಿರುತ್ತಾರೆ. ವಿಭೀಷಣನು ತನ್ನ ಕುಲ ನಾಶವಾಗಬಾರದೆಂದು ರಾವಣನಿಗೆ ಒಳಿತಾಗುವ ಸಾಕಷ್ಟು ಮಾತು ಆಡಿದ್ದಾನೆ. ಅವನು ಶುದ್ಧ ಮನದವನು. ತನ್ನ ಹಿತಕ್ಕಿಂತ ಕುಲದ ಹಿತವನ್ನು ಹೆಚ್ಚು ಬಯಸುವವನು. ಆದರೆ ರಾವಣನಿಗೆ ಅವನ ಮಾತು ರೋಗಿಷ್ಠನಿಗೆ ಕೊಟ್ಟ ಔಷಧಿಯಂತೆ ಕಹಿ ಎನಿಸುತ್ತಿದೆ. ಅವನ ಮಾತು ಹಿತಕರವಾದರೂ ರಾವಣನು ಸ್ವೀಕರಿಸುತ್ತಿಲ್ಲ. ಅಧಿಕಾರದ ಮದವು ತಿರಸ್ಕರಿಸುವಂತೆ ಮಾಡುತ್ತಿದೆ. ಹಾಗಾಗಿಯೇ ಬೇಸತ್ತ ಇವನು ಆಶ್ರಯ ಅರಸಿ ಬಂದಿರುವನೇ ಹೊರತು ವಂಚನೆಯ ಬುದ್ಧಿಯಿಂದಲ್ಲ. ನಮ್ಮ ಸಲಹೆಗಳು ಅನೇಕರಿಗೆ ವಿಷಮವಾಗಿ ತೋರುತ್ತವೆ. ಅಂತಹ ಸಂದರ್ಭದಲ್ಲಿ ನಾವು ಅವರೊಡನಿರಬೇಕೋ, ನಮ್ಮ ಜೊತೆಗೆ ಅವರ ವರ್ತನೆ ಹೇಗಿರುವುದೆಂಬುದರ ಮೇಲೆ ನಿಶ್ಚಯಿಸಬೇಕು._
*ನ ಸರ್ವೇ ಭ್ರಾತರಸ್ತಾತ ಭವಂತಿ ಭರತೋಪಮಾಃ ಮದ್ವಿಧಾ ವಾ ಪಿತುಃ ಪುತ್ರಾಃ ಸುಹೃದೋ ವಾ ಭವದ್ವಿಧಾಃ*
_ರಾಮನ ಸುಂದರ ಮಾತು. ಸುಗ್ರೀವ, ಶತ್ರುಗಳಲ್ಲಿ ನಾವು ಭೇದ ತರಬೇಕು. ಆದರಿಲ್ಲಿ ಶತ್ರುಗಳೇ ಪರಸ್ಪರ ಭಯಪಟ್ಟು ಭೇದವುಂಟಾಗಿದೆ. ಹಾಗಾಗಿ ಇವನನ್ನು ನಾವು ಸ್ವೀಕರಿಸೋಣ. ಅಣ್ಣನಿಗೆ ಕೇಡು ಬಗೆಯುವ ಇವನು ನಮಗೆ ಹಿತ ಬಯಸುವನೆಂದು ಹೇಗೆ ಹೇಳುವಿ ಎಂದಾಗ ರಾಮ ನೀಡುವ ಉತ್ತರ. ಸುಗ್ರೀವ, ಈ ಪ್ರಪಂಚದಲ್ಲಿ ಎಲ್ಲಾ ತಮ್ಮಂದಿರೂ ಭರತನಂತೆ ಇರಲಾರರು. ತಾನಾಗಿಯೇ ಒದಗಿಬಂದ ಸಿರಿಯನ್ನು ಬಿಟ್ಟು ಅಣ್ಣನೆಡೆಗೆ ಬರುವ ತಮ್ಮಂದಿರು ಸಿಗುವರೇ! ಭರತನಂತೆ ತ್ಯಾಗ ಬುದ್ಧಿ, ಭ್ರಾತೃಪ್ರೇಮ ಎಲ್ಲರಲ್ಲೂ ಇರುವುದೆಂದು ಹೇಗೆ ಹೇಳಲಿ. ಅಂತಹ ಉದಾತ್ತ ಗುಣದ ತಮ್ಮಂದಿರು ಸಿಗಲಾರರು. ಇನ್ನು ಎಲ್ಲಾ ತಂದೆಯರಿಗೆ ನನ್ನಂತಹ ಮಕ್ಕಳೂ ಇರಲಾರರು. ಅಪ್ಪ ಒಂದು ಮಾತು ಹೇಳಿದನೆಂಬ ಕಾರಣಕ್ಕೆ ಅಪ್ಪನ ಮಾತನ್ನು ಉಳಿಸುವ ನಿಷ್ಠೆಯಿಂದ ಸಹಜವಾಗಿ ಒಲಿದ ರಾಜ್ಯಲಕ್ಷ್ಮಿಯನ್ನು ಪರಿತ್ಯಜಿಸಿ ಹದಿನಾಲ್ಕು ವರ್ಷಗಳಷ್ಟು ದೀರ್ಘಕಾಲ ವನವಾಸ ಒಪ್ಪಿ ನಡೆಯುವ ಮಗನು ಸಿಕ್ಕಿಯಾನೇ? ಯಾವ ಮಗನೂ ಅಪ್ಪನಿಗೆ ಇಷ್ಟು ನಿಷ್ಠೆ ತೋರಲಾರ. ಸಂಪತ್ತು, ಅಧಿಕಾರದ ಕಾರಣ ಅಪ್ಪನನ್ನೇ ಧಿಕ್ಕರಿಸಿ ನಡೆವವರ ಮಧ್ಯೆ ರಾಮನಂತಹ ಮಕ್ಕಳು ನಿಜಕ್ಕೂ ವಿರಳ. ಇನ್ನು ಒಂದು ಸಲ ಮೈತ್ರಿ ಮಾಡಿಕೊಂಡು ತನ್ನ ಕೆಲಸವಾದ ಮೇಲೆ ದೂರ ಹೋಗುವವರು ಎಲ್ಲೆಡೆ ಕಾಣುವರು. ಆದರೆ ನೀನು ಹಾಗಲ್ಲ. ರಾಜ್ಯ, ಪತ್ನಿ ದೊರೆತ ಮೇಲೂ ಸಖ್ಯಕ್ಕೆ ಬೆಲೆ ಕೊಟ್ಟು ನನ್ನೊಡನೆ ಪ್ರಾಣ ಕೊಡಲೂ ಸಿದ್ಧನಾಗಿರುವೆ. ಹಾಗಾಗಿ ನಿನ್ನಂತಹ ಗೆಳೆಯನು ಎಲ್ಲರಿಗೂ ಸಿಗಲಾರ. ವಿಭೀಷಣನು ರಾಜ್ಯದ ಆಕಾಂಕ್ಷೆ ಮತ್ತು ಅಣ್ಣನ ಕುಕೃತ್ಯಗಳಿಗೆ ಬೇಸತ್ತು ಬಂದಿದ್ದಾನೆ. ಆಕಾಂಕ್ಷೆ ಏನಿದ್ದರೂ ಭೇದ ನೀತಿಯಂತೆ ಅವನನ್ನು ಆದರಿಸೋಣ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ