ಮಹಾಭಾರತ
📗☘ ಮಹಾಭಾರತದ ಕೆಲವು ವಿಶೇಷ ಮಾಹಿತಿಗಳು ☘📗
_ದ್ರುಪದನು ಮಗಳ ಸ್ವಯಂವರ ಏರ್ಪಡಿಸಿದ್ದು *ಶಿಶುಮಾರಪುರ* ಎಂಬ ದಕ್ಷಿಣ ಪಾಂಚಾಲದ ಒಂದು ಊರಿನಲ್ಲಿ. ಈ ಊರು ಮೊಸಳೆಯ ಮರಿಯ ಆಕಾರ ಪಡೆದಿತ್ತು._
_ಹದಿನಾರು ದಿವಸಗಳ ಕಾಲ ನೃತ್ಯ ಗೀತಾದಿಗಳ ಉತ್ಸವ ಅಲ್ಲಿ ನಡೆಯಿತು. ಹದಿನಾರನೇ ದಿನ ಯಾಜ್ಞಸೇನಿಯಾದ ದ್ರೌಪದಿ ಸಮಾಜ( ಸಭೆ) ಪ್ರವೇಶಿಸಿದಳು. ಮತ್ಸ್ಯ ಯಂತ್ರದ ಉಲ್ಲೇಖ ಇಲ್ಲಿಲ್ಲ. ಬರೀ ಯಂತ್ರದ ಮೂಲಕ ಐದು ಬಾಣಗಳನ್ನು ಆಕಾಶದೆತ್ತರಕ್ಕೆ ಹಾರಿಸಬೇಕೆಂದು ಇದೆ. *ಯಂತ್ರಚ್ಛಿದ್ರೇಣಾಭ್ಯತಿಕ್ರಮ್ಯ ಲಕ್ಷ್ಯಂ ಸಮರ್ಪಯಧ್ವಂ ಖಗಮೈರ್ದಶಾರ್ಧೈಃ* ಎಂಬುದು ದೃಷ್ಟದ್ಯುಮ್ನನ ಮಾತು._
_ಇನ್ನು ಸ್ವಯಂವರಕ್ಕೆ ಆ ಕಾಲದ ನೂರಾರು ವೀರರು ಬಂದಿದ್ದರು. ದೃಷ್ಟದ್ಯುಮ್ನನು ಅವರೆಲ್ಲರ ಕುಲ- ಗೋತ್ರ ಸಹಿತ ಪರಿಚಯ ಮಾಡಿಕೊಡುತ್ತಾನೆ. ಅದರಲ್ಲಿ ಕೆಲವರ ಉಲ್ಲೇಖ ಇಲ್ಲಿದೆ. ನೂರು ಜನ ಕೌರವರು,ಕರ್ಣ, ಶಕುನಿ ಹಾಗೂ ಅವನ ಸಹೋದರರಾದ ಬಲ ವೃಷಕ ಬೃಹದ್ಬಲ, ಅಶ್ವತ್ಥಾಮ, ಭೋಜ ( ಇವನು ಧಾರಾನಗರದ *ಚಂಪೂ ರಾಮಾಯಣ* ಬರೆದವನಲ್ಲ. ಪೂರ್ವಿಕನಿರಬಹುದು.) ಸಹದೇವ( ಪಾಂಡವನಲ್ಲ ಇವನು), ಮಗಧದ ಮೇಘಸಂಧಿ( ಜರಾಸಂಧನ ವಿರೋಧಿಯೋ ಮಿತ್ರನೋ ಇರಬಹುದು) , ವಿರಾಟ ಹಾಗೂ ಇಬ್ಬರು ಮಕ್ಕಳು ಶಂಖ- ಉತ್ತರ( ಮುಂದೆ ಉತ್ತರನ ಉಲ್ಲೇಖ ಇದೆ. ಶಂಖ ಅಂದಾಜು ದೇವರಕೋಣೆ ಸೇರಿದ.) ಸಮುದ್ರಸೇನನ ಮಕ್ಕಳು ( ಇದೇ ವಂಶದವರು ಅನಂತರ ಪ್ರಸಿದ್ಧರಾಗಿದ್ದಿರಬಹುದು. ನಮ್ಮ ಇತಿಹಾಸದಲ್ಲಿ ಸಮುದ್ರಸೇನ, ಸಮುದ್ರಗುಪ್ತ ಇತ್ಯಾದಿ ಹೆಸರಿವೆ.) ಪೌಂಡ್ರಕ ವಾಸುದೇವ, ಭಗದತ್ತ, ಕಳಿಂಗ ( ಅಂದಾಜು ಅಶೋಕ ಯುದ್ಧ ಮಾಡಿದ ದೇಶದ ರಾಜನಿರಬಹುದು.) ರುಕ್ಮಾಂಗದ ರುಕ್ಮರಥರೆಂಬ ಮಕ್ಕಳ ಜೊತೆ ಶಲ್ಯ, ಕೌರವ್ಯ ( ಕುರು ವಂಶದ ಇನ್ನೊಂದು ಕವಲಿರಬಹುದು) ಸೋಮದತ್ತ ಮಕ್ಕಳಾದ ಭೂರಿ- ಭೂರಿಶ್ರವ- ಶಲ, ಶಿಬಿ ( ಇವನು ಅಂಗದಾನಿ ಶಿಬಿಯ ವಂಶದವನೋ ಅಥವಾ ಅವನೇನೋ!) ಔಶೀನರ, ಬಲರಾಮ, *ಕೃಷ್ಣ*, ರುಕ್ಮಿಣಿ ಪುತ್ರ, ಸಾಂಬ, ಚಾರುದೇಷ್ಣ, ಸಾರಣ, ಗದ ( ಇವರೆಲ್ಲರೂ ಕೃಷ್ಣನ ಪುತ್ರರಿರಬೇಕು.) ಅಕ್ರೂರ, ಸಾತ್ಯಕಿ, ಉದ್ಧವ( ಇವನು ಜ್ಞಾನಿಯೂ ಪರಾಕ್ರಮಿಯೂ ಹೌದು.) ಕೃತವರ್ಮ, ಕಂಕ, ಝಿಲ್ಲೀ- ಪಿಂಡಾರಕ ( ಮ್ಲೇಚ್ಛ ರಾಜರಿರಬಹುದು ವೃಷ್ಣಿಗಳು ಇವರು ) ಉಶೀನರ, ಭಗೀರಥ (ಅಂದಾಜು ಸಗರ ವಂಶದ ಅದೇ ಹೆಸರಿನ ಮತ್ತೊಬ್ಬ ದೊರೆ) ಜಯದ್ರಥ, ಬಾಹ್ಲಿಕ, ಚಿತ್ರಾಂಗದ, ವತ್ಸರಾಜ ( ಬೃಹತ್ಕಥೆಯಲ್ಲಿ ಬರುವ ವತ್ಸರಾಜ ಇವನ ವಂಶದವನಿರಬಹುದು) , ಕೋಸಲಾಧಿಪತಿ ( ಅಯೋಧ್ಯೆಯ ಆಗಿನ ರಾಜ). ಇಷ್ಟೆಲ್ಲಾ ವೀರರ ನಡುವೆ ಅರ್ಜುನನೊಬ್ಬನೇ ಬಿಲ್ಲನ್ನೆತ್ತಿ ಲಕ್ಷ್ಯ ಭೇದಿಸಿದ್ದು ಗಮನಿಸಿದರೆ ಆ ಕಾಲದ ಲೋಕೈಕವೀರ ಇವನೆಂಬುದು ಸ್ಪಷ್ಟವಾಗುತ್ತದೆ. ಕರ್ಣನು ಪರಾಕ್ರಮಿಯಾದರೂ ಸುಳ್ಳು ಹೇಳಿ ಮೋಸದ ಮಾರ್ಗದಿಂದ ವಿದ್ಯೆ ಸಂಪಾದಿಸಿದ್ದನು. ಅರ್ಜುನ ತನ್ನ ಅರ್ಹತೆಯಿಂದ ಮಾತ್ರ ಸಂಪಾದಿಸಿದ್ದನು ಹೊರತು ಜಾತಿ ಅಥವಾ ಇತರೆ ಕಾರಣಗಳಿಂದಲ್ಲ. ಇದನ್ನು ಅನೇಕ ಕರ್ಣಪಕ್ಷಪಾತಿ ಕವಿಗಳು ಮರೆ ಮಾಚಿದ್ದಾರೆ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ