ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ🌸
*महीभृतां सञ्चरितैश्चरै: क्रिया: स वेद नि:शेषमशेषितक्रिय: | महोदयैस्तस्य हितानुबन्धिभि: प्रतीयते धातुरिवेहितं फलै: ||*
_ಚಾರನು ಧರ್ಮಜನ ಬಳಿ ಸುಯೋಧನನ ವರ್ತಮಾನವನ್ನು ನಿವೇದಿಸುತ್ತಿದ್ದಾನೆ. ರಾಜನು ರಾಜ್ಯದ ಎಲ್ಲಾ ಕೆಲಸಗಳನ್ನು ಸಾಧಿಸಿ ಗೂಢಚಾರರ ಮೂಲಕ ಉಳಿದ ಸಾಮಂತರ ಪ್ರತಿಯೊಂದು ನಡೆಯನ್ನೂ ಅವಲೋಕಿಸುತ್ತಿದ್ದಾನೆ. ಯಾರು ತನ್ನ ಪಕ್ಷಪಾತಿಯಾಗಿರುವರು, ಯಾರು ಶತ್ರುಪಕ್ಷದಲ್ಲಿ ಒಲವಿರುವವರು, ಯಾರ ಪ್ರಾಬಲ್ಯ ಹೇಗಿದೆ ಎಂಬುದನ್ನೆಲ್ಲ ಚಾರರ ಮೂಲಕ ಕಾಲಕಾಲಕ್ಕೆ ಅರಿಯುತ್ತಿರುವನು. ಆ ಚಾರರು ಯಥೇಚ್ಛ ಧನ ಪಡೆದರೂ ಸತ್ಯಶೀಲರಿದ್ದಾರೆ. ದುಡ್ಡಿಗಾಗಿ ಪಕ್ಷಾಂತರ ಮಾಡದೇ ರಾಜನಿಗೆ ನಿಷ್ಠರಾಗಿ ಸತ್ಯವನ್ನೇ ನುಡಿಯುತ್ತಿದ್ದಾರೆ. ಸಾಮಂತರ ಹಾಗೂ ಅವರ ಅವಲಂಬಿತರ ವಿಷಯದಲ್ಲಿ ದುರ್ಯೋಧನನ ಪ್ರವೃತ್ತಿಯು ಪರಿಣಾಮದಿಂದಾಗಿ ಮಾತ್ರ ಗೋಚರಿಸುತ್ತದೆ. ಹೇಗೆ ನೀರು ಗೊಬ್ಬರ ಉಣಿಸಿದ ವೃಕ್ಷಗಳು ಫಲಭರಿತವಾದಾಗ ನಮ್ಮ ಕಾರ್ಯದ ಪರಿಣಾಮ ಕಾಣುವುದೋ ಅದರಂತೆ ರಾಜನ ಕರ್ಮಗಳು ಮೊದಲಿಗೆ ತೋರದೇ ಫಲ ಕೊಟ್ಟಾಗ ನಮ್ಮ ರಾಜನ ತಂತ್ರ ಫಲಿಸಿತೆಂದು ಎಲ್ಲರೂ ಮಾತನಾಡುವರು. ಆಡಳಿತದಲ್ಲಿ ಜಾಗರೂಕನಾಗಿದ್ದು, ಉಳಿದವರ ವಿಷಯಗಳನ್ನೆಲ್ಲ ಅರಿತು ತಾನು ಅವರ ಬಗೆಗೆ ತೆಗೆದುಕೊಳ್ಳುವ ನಿಲುವುಗಳನ್ನು ಗುಪ್ತವಾಗಿಟ್ಟು ಕಾರ್ಯ ಸಾಧಿಸಿಕೊಳ್ಳುತ್ತಿದ್ದಾನೆ ಅ ಸುಯೋಧನ. ಇದನ್ನೇ ಸುಭಾಷಿತವೊಂದು ಹೇಳಿದೆ *ಕಾರ್ಯೇ ಚಾಪಿ ನಿಯೋಜಯೇತ್* ನಾವು ಅಂದುಕೊಂಡ ಕೆಲಸಗಳನ್ನೆಲ್ಲಾ ಎಲ್ಲೆಡೆ ಹೇಳಬಾರದು. ಮನದಲ್ಲೇ ಕಾಪಿಟ್ಟುಕೊಂಡು ಸಂದರ್ಭ ನೋಡಿ ಮಾಡಬೇಕು. ರಾಜಕಾರಣದ ಈ ತಂತ್ರ ನಮಗೂ ಅನ್ವಯವಾಗುತ್ತದೆ. ನಾವು ಯೋಚಿಸಿದ ಕಾರ್ಯದ ಬಗೆಗೆ ಮೊದಲೇ ಅನೇಕರ ಬಳಿ ಹೇಳಿದರೆ ಅದನ್ನು ಕೆಡಿಸಲು ಪ್ರಯತ್ನಿಸಬಹುದು ಅಥವಾ ಅದನ್ನು ತಾವೇ ಆಚರಿಸಿ ಯಶಸ್ಸು ಪಡೆದು ಬೀಗಬಹುದು. ಹಾಗಾಗಿ ಚಿಂತಿಸಿದ ವಿಷಯವನ್ನು ಆಪ್ತರು ಬಿಟ್ಟು ಅನ್ಯರಲ್ಲಿ ಹೇಳದೇ ಮಾಡುವುದು ಯಶಸ್ಸಿಗೆ ದಾರಿಯಾಗುವುದು. *ಆಡದೆಲೆ ಮಾಡುವವನುತ್ತಮ* ಎಂಬ ಸರ್ವಜ್ಞನ ವಚನವೂ ಇದನ್ನೇ ಸಾರುತ್ತದೆ. ನಾವೂ ನಮ್ಮ ಕೆಲಸಗಳನ್ನು ಮಾಡುವ ಮುಂಚೆ ಬಯಲು ಮಾಡದೆ ಪರಿಣಾಮದಿಂದಾಗಿ ಕಾರ್ಯದ ಸಾಧುತ್ವ ತಿಳಿಯುವಂತೆ ಮಾಡೋಣ. ಒಂದು ವೇಳೆ ವೈಫಲ್ಯ ಕಂಡರೂ ಆಗ ಟೀಕೆಯೂ ಬಾರದು. ಇದು ನಮ್ಮ ಗಮನವನ್ನು ಕೇಂದ್ರೀಕರಿಸಲೂ ಸಹಕಾರಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ