ರಾಮಾಯಣ ೫೬
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೬
*ಮಿತ್ರಭಾವೇನ ಸಂಪ್ರಾಪ್ತಂ ನ ತ್ಯಜೇಯಂ ಕಥಂಚನ ದೋಷೋ ಯದ್ಯಪಿ ತಸ್ಯ ಸ್ಯಾತ್ಸತಾಮೇತದಗರ್ಹಿತಮ್*
_ಎಲ್ಲರ ಮಾತನ್ನು ಆಲಿಸಿದ ರಾಮ ತಾನು ಮಾತನಾಡುತ್ತಿದ್ದಾನೆ. ರಾಮನ ಆಲಿಸುವ ಗುಣ ಇಲ್ಲಿ ಸ್ಪಷ್ಟವಾಗಿದೆ. ಯಾರು ಏನೇ ಹೇಳಲಿ, ಒಪ್ಪುವಂತಹ ವಿಷಯವಿರಲಿ, ತಿರಸ್ಕರಿಸುವ ವಿಷಯವಿರಲಿ ಸಮಾಧಾನದಿಂದ ಕೇಳಿ ಪ್ರತಿಕ್ರಯಿಸುವ ರೀತಿ ನಮಗೂ ಆದರ್ಶ. ನಾವಾದರೆ ಅದು ಹಾಗಲ್ಲ, ಇದು ಹೀಗಲ್ಲ ಎಂದು ಬಗೆಬಗೆಯಾಗಿ ಒಡನೆಯೇ ಬುಸುಗುಡುತ್ತೇವೆ. ಮಿತ್ರಭಾವದಿಂದ ಬಂದಿರುವ ಈ ವಿಭೀಷಣನನ್ನು ನಾನು ಯಾವುದೇ ಕಾರಣದಿಂದಲೂ ತ್ಯಜಿಸಲಾರೆ. ಅವನಲ್ಲಿ ಕೆಲ ದೋಷಗಳು ಇರಬಹುದು. ದೋಷವಿರುವವನಿಗೂ ಆಶ್ರಯ ನೀಡುವುದು ಸತ್ಪುರುಷರಿಗೆ ನಿಂದ್ಯಕರ್ಮ ಅಲ್ಲ. ಅದು ಸಾಧುವೇ ಆಗಿದೆ. ಎಂತಹ ಸತ್ಯ ಮಾತು. ಒಬ್ಬರ ದೋಷ ಮಾತ್ರ ನೊಡದೇ ಗುಣವನ್ನೂ ಗೌರವಿಸುವ ಗುಣ ರಾಮನಂತೆ ನಮಗೆಂದು ಬಂದೀತು! ವಿಭೀಷಣ ಅಲ್ಪ ಸ್ವಲ್ಪ ದೋಷವುಳ್ಳವನೆಂದು ಅವನನ್ನು ನಡುನೀರಿನಲ್ಲಿ ಕೈ ಬಿಡುವುದೇ! ಅಷ್ಟಾಗಿ ಅವನು ಮೈತ್ರಿಯನ್ನು ಬಯಸಿ ಬಂದಿದ್ದಾನೆ. ಸತ್ಪುರುಷರ ಲಕ್ಷಣವೇ ಅದು. ದೋಷ- ಗುಣಗಳೆರಡರಲ್ಲೂ ಸಮಾನ ಭಾವ. ಅದು ಅವರ ಕೀರ್ತಿಯನ್ನು ಹೆಚ್ಚಿಸುವುದೇ ಹೊರತು ಕುಂದಿಸಲಾರದು. ರಾಮನಂತೆ ನಾವೂ ಪರರ ದೋಷ ಗುರುತಿಸದೇ ಗುಣಕ್ಕೆ ಮನ್ನಣೆ ಕೊಟ್ಟು ಗಣ್ಯರಾಗೋಣ._
*ಸುದುಷ್ಟೋ ವಾಪ್ಯದುಷ್ಟೋ ವಾ ಕಿಮೇಷ ರಜನೀಚರಃ ಈದೃಶಂ ವ್ಯಸನಂ ಪ್ರಾಪ್ತಂ ಭ್ರಾತರಂ ಯಃ ಪರಿತ್ಯಜೇತ್ ಕೋ ನಾಮ ಭವೇತ್ತಸ್ಯ ಯಮೇಷ ನ ಪರಿತ್ಯಜೇತ್*
_ರಾಮನ ಮಾತು ಕೇಳಿದ ಸುಗ್ರೀವ ತನ್ನ ಮತವನ್ನು ಹೇಳುತ್ತಿದ್ದಾನೆ. ನೀವು ಅವನು ಈಗ ಜೊತೆಗಿದ್ದು ಮುಂದೆ ಕೈಕೊಡಬಹುದೆಂದು ಶಂಕಿಸುತ್ತಿರುವಿರಿ. ಎಷ್ಟೆಂದರೂ ಅವನು ರಾಕ್ಷಸ. ಆದರೆ ಸಂಕಟದಲ್ಲಿರುವ ಅಣ್ಣನನ್ನೇ ಬಿಟ್ಟು ಹೋದ ವನು ಮುಂದೆ ನಮ್ಮನ್ನು ಬಿಟ್ಟುಹೋಗಲಾರೆನೆಂದು ಹೇಗೆ ಶಂಕಿಸುವುದು? ರಾಕ್ಷಸರು ದೃಢ ಮನಸ್ಕರಲ್ಲ. ತಮಗೆ ಅನುಕೂಲವಾಗುವ ದಾರಿಯನ್ನು ಹಿಡಿಯುವವರು. ಇವನೂ ಅದೇ ಸಮೂಹದಿಂದ ಬಂದವನು. ಹಾಗಾಗಿ ನಮಗೆ ಒಂದು ವೇಳೆ ಆಪತ್ತು ಬಂದರೆ ನಮ್ಮನ್ನು ಬಿಟ್ಟುಹೋಗಲಾರನೆಂದು ಹೇಗೆ ನಂಬುವುದು? ನಾವೂ ಎಷ್ಟೋ ಬಾರಿ ರಾಕ್ಷಸರಂತೆ ಅನುಕೂಲದಾರಿಯನ್ನು ಆಶ್ರಯಿಸುತ್ತೇವೆ. ಅದು ತಪ್ಪಲ್ಲವಾದರೂ ನಂಬಿದವರನ್ನು ಕೈ ಬಿಡದಿರುವುದು ಯೋಗ್ಯಮಾರ್ಗ. ಇಲ್ಲದಿದ್ದರೆ ಅದು ನಯವಂಚಕತನವಾಗುವುದು._
*ಅನಧೀತ್ಯ ಚ ಶಾಸ್ತ್ರಾಣಿ ವೃದ್ಧಾನನುಪಸೇವ್ಯ ಚ ನ ಶಕ್ಯಮೀದೃಶಂ ವಕ್ತುಂ ಯದುವಾಚ ಹರೀಶ್ವರಃ*
_ರಾಮನ ಉದಾರತೆ ಇಲ್ಲಿ ಕಾಣಸಿಗುತ್ತದೆ. ಸುಗ್ರೀವನ ಶಂಕೆ ಸರಿಯಾದುದೇ ಆಗಿದೆ. ಶಾಸ್ತ್ರಗಳನ್ನು ಓದದೇ ವೃದ್ಧರನ್ನು ಸೇವಿಸದೇ ಇರುವವರು ಇಂತಹ ಮೌಲಿಕವಾದ ಮಾತು ಆಡಲಾರರು. ಸುಗ್ರೀವ ನಿಶ್ಚಿತವಾಗಿ ವಾನರನಾದರೂ ಬಹಳ ಶಾಸ್ತ್ರಾಧ್ಯಯನ ನಡೆಸಿದ್ದಾನೆ. ಅಲ್ಲದೇ, ಗುರು ಹಿರಿಯರನ್ನು ಆದರಿಸಿ ಸಾಕಷ್ಟು ಅನುಭವ ಪಡೆದಿದ್ದಾನೆ. ಹಾಗಾಗಿ ಅವನ ಮಾತು ಯೋಗ್ಯ ವಾಗಿದೆ. ಸುಗ್ರೀವ ರಾಮನಿಗೆ ಸಾಟಿಯಾಗಲಾರನು. ಆದರೂ ರಾಮನು ಅವನ ಗುಣವನ್ನು ಗೌರವಿಸುವ ಪರಿ ಅದ್ಭುತ. ಗುಣೈಕಗ್ರಾಹಿತ್ವ ರಾಮನ ಸಹಜ ಸ್ವಭಾವ. ಅಧ್ಯಯನ ಮತ್ತು ಗುರು ಹಿರಿಯರ ಸೇವೆಗೆ ಎಷ್ಟು ಮಹತ್ವ ಎನ್ನುವುದೂ ಇದರಿಂದ ತಿಳಿಯುವುದು. ಅವರ ಮಾತನ್ನೇನು ಕೇಳುವುದು, ಅದನ್ನೋದಿ ಪ್ರಯೊಜನವೇನು ಎಂಬ ಉದಾಸೀನತೆ ಬಿಟ್ಟು ಅವೆರಡನ್ನು ಆಶ್ರಯಿಸಿ ಗುರುವಾಗೋಣ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ