ವೇದ ಧರ್ಮ ೩೪
📗🌾📙 ವೇದ-ಧರ್ಮ 📗🌾📙 ಭಾಗ-೩೪
~ವೇದ ಪ್ರಾಮಾಣ್ಯ~
_ವೇದ ಮಂತ್ರಗಳು ಪುರಾತನ, ಅಪೌರುಷೇಯ ಎಲ್ಲವನ್ನೂ ಒಪ್ಪೋಣ. ಆದರೆ ಅವುಗಳು ಪ್ರಮಾಣವೆಂದು ಹೇಗೆ ಮತ್ತು ಯಾಕೆ ಒಪ್ಪಬೇಕು ಎಂದರೆ ಅದಕ್ಕುತ್ತರ ಹೀಗಿದೆ. ಪ್ರತಿಯೊಂದು ಧರ್ಮವೂ ಒಂದಷ್ಟು ಬೋಧನೆಗಳನ್ನು ಪ್ರಮಾಣವೆಂದು ಅಂಗೀಕರಿಸುತ್ತದೆ. ಕ್ರೈಸ್ತ ಮತೀಯರು ಕ್ರಿಸ್ತನ ಬೋಧನೆಯಾದ ಒಡಂಬಡಿಕೆಯನ್ನು, ಇಸ್ಲಾಂ ಅನುಯಾಯಿಗಳು ಕೊನೆಯ ಪ್ರವಾದಿಯಾದ ಮೊಹಮ್ಮದ್ ಪೈಗಂಬರನ ಉಪದೇಶಗಳನ್ನೂ, ಬೌದ್ಧರು ಬುದ್ಧನ ಧಮ್ಮಪದಗಳು ಅಥವಾ ಪಿಟಕಗಳನ್ನೂ, ಜೈನರು ತೀರ್ಥಂಕರರ ಮಾತುಗಳನ್ನೂ, ಸಿಖ್ಖರು ಗುರುನಾಯಕರ ಮಾತುಗಳನ್ನೂ ಪ್ರಮಾಣವೆಂದು ನಂಬುವರು. ಹಾಗೆಯೇ ನಮ್ಮ ಧರ್ಮಕ್ಕೆ ಯಾವುದು ಪರಮ ಪ್ರಮಾಣ ಎಂದಾಗ *ವೇದ* ಎಂದು ಒಪ್ಪಲೇಬೇಕಾಗುತ್ತದೆ. ಯಾವ ರೀತಿಯಲ್ಲಿ ಎಲ್ಲಿಯ ನ್ಯಾಯ ತೀರ್ಮಾನವೂ ಒಪ್ಪಿಗೆಯಾಗದಿದ್ದಾಗ ಮುಖ್ಯ ನ್ಯಾಯಾಲಯದ ತೀರ್ಪನ್ನು ಒಪ್ಪಲೇಬೇಕಾದಂತೆ ವೇದವು ಮುಖ್ಯ ಪ್ರಮಾಣ ಎಂಬುದು ಸತ್ಯ._
_ಪ್ರಮಾಣ ಎಂದರೆ ಯಥಾರ್ಥ. ಇರುವ ವಸ್ತುವನ್ನು ಅದರಂತೆಯೇ ಅರಿಯುವುದು ಪ್ರಮಾಣ. ಗೀತೆ ಹೀಗೆ ಹೇಳಿದ ಕಾರಣ ಅದು ಈಗಲೂ ನ್ಯಾಯಾಲಯಗಳಲ್ಲಿ ಸತ್ಯದ ಸಂಕೇತವಾಗಿ ಪ್ರಮಾಣವೆಂದು ಬಳಕೆಯಲ್ಲಿರುವುದು. ಹೇಳುವವನು ಸುಳ್ಳೇ ಹೇಳಿದರೂ ಗೀತೆಯು ಸತ್ಯವನ್ನೇ ಪ್ರತಿನಿಧಿಸುವುದು ಹೊರತು ಸುಳ್ಳನ್ನಲ್ಲ. ಹೀಗೆ ಯಥಾರ್ಥ ಜ್ಞಾನ ಉಂಟಾಗಲು ಯಾವುದು ಕಾರಣವೋ ಅದೇ ಪ್ರಮಾಣ ಎಂದೆನಿಸುವುದು. ಇವುಗಳು ನಾಲ್ಕು ಮುಖ್ಯ. *ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ*_
_ಕಣ್ಣೆದುರು ಕಾಣುವುದು ಪ್ರತ್ಯಕ್ಷ. ಕಾಣದಿದ್ದಾಗ ಊಹಿಸುವುದು ಅನುಮಾನ. ಪೋಲೀಸರು ತನಿಖೆ ನಡೆಸಿ ಇವನೇ ಆರೋಪಿ ಎಂದು ಊಹಿಸುವಂತೆ. ಒಂದು ಘಟನೆಯ ಅಥವಾ ವಸ್ತುವಿನ ಜೊತೆ ಹೋಲಿಸಿ ನಿರ್ಣಯ ತೆಗೆದುಕೊಳ್ಳುವುದು ಉಪಮಾನ. ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಪ್ರತಿಯೊಬ್ಬ ತಜ್ಞರೂ ತುಲನೆ ಮಾಡಿ ಒಂದು ನಿರ್ಣಯಕ್ಕೆ ಬರುತ್ತಾರೆ. ನ್ಯಾಯ ದಾನ ಮಾಡುವಾಗಲಂತೂ ಹಿಂದೆ ಬಂದ ಸಂದರ್ಭಗಳಲ್ಲಿ ನಿರ್ಣಯ ಎಂತಹದ್ದಾಯಿತೆಂಬ ಹೋಲಿಕೆಯನ್ನು ಉಪಯೋಗಿಸಿ ನ್ಯಾಯನೀಡುತ್ತಾರೆ. ಕೊನೆಯದಾಗಿ ಶಬ್ದ. ನಾವಾಡುವ ಶಬ್ದಗಳಲ್ಲಿ ಸಾಕಷ್ಟು ತಪ್ಪುಗಳ ಸಾಧ್ಯತೆ ಇರುವ ಕಾರಣ ಅದು ಸಾರ್ವಕಾಲಿಕ ಪ್ರಮಾಣವಾಗಲಾರದು. ಅದೇ ಶಬ್ದವು ಭಗವಂತನ ಬಾಯಿಯಿಂದ ಬಂದ ಕಾರಣ ಅವನು ದೋಷಗಳನ್ನು ಮೀರಿರುವ ಕಾರಣ ಅಂತಹ ವೇದಮಂತ್ರಗಳು ಪ್ರಮಾಣವೆನಿಸುತ್ತವೆ._
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ