ವೇದ ಧರ್ಮ ೩೩

📗🌾📙 ವೇದ-ಧರ್ಮ 📗🌾📙 ಭಾಗ-೩೩

*ವೇದದ ಅಪೌರುಷೇಯತ್ವ*

*ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ*

_ಈ ಮೇಲಿನ ಮಾತಿನಂತೆ ಪರಮಾತ್ಮನು ಚತುರ್ಮುಖನನ್ನು ಸೃಷ್ಟಿಸಿ ಅನಂತರ ವೇದಗಳನ್ನು ಅವನಿಗೆ ಬೋಧಿಸಿದನು. ಹೀಗಾಗಿ ವೇದಗಳು ಸೃಷ್ಟಿಸಿದ್ದಲ್ಲ ಎನ್ನಬಹುದು. ವೇದ ಅಂದರೆ ಜ್ಞಾನ ಎಂಬ ಅರ್ಥ ಸ್ವೀಕರಿಸಿದಾಗ ವಿಶ್ವದ ಸರ್ವಜ್ಞಾನವನ್ನೂ ಪರಮಾತ್ಮನು ಬ್ರಹ್ಮನಿಗೆ ಬೋಧಿಸಿ ಸೃಷ್ಟಿ ಮಾಡಲು ಪ್ರೇರೇಪಿಸನೆನ್ನುವುದು ಸರಿ ಹೊಂದುವುದು. ಮುಂದೆ ಇದನ್ನೇ ಹೇಳುವ ಮತ್ತೊಂದು ಮಾತಿದೆ._

*ಯೋ ವೇದೇಭ್ಯೋ ಅಖಿಲಂ ಜಗತ್ ನಿರ್ಮಮೇ*

_ಯಾರು ವೇದವನ್ನನುಸರಿಸಿ ಈ ಸಮಸ್ತ ಜಗವನ್ನು ಸೃಷ್ಟಿಸಿದರೋ ಅಂತಹ ಮೂರುತಿ ಬ್ರಹ್ಮನು ಎಂದು. ಪುರುಷರಿಗೆ ಸಹಜವಾದ ಭ್ರಮೆ, ಪ್ರಮಾದ ಮೊದಲಾದವುಗಳು ಪರಮಾತ್ಮನಿಂದ ಹೇಳಲ್ಪಟ್ಟ ವೇದದಲ್ಲಿ ಇರಲಿಲ್ಲ. ಹಾಗಾಗಿ ಸೃಷ್ಟಿಯು ಪೂರ್ಣವಾಯಿತು. ಅದನ್ನೇ ಹೇಳುವ ಮಂತ್ರ *ಪೂರ್ಣಮದಃ ಪೂರ್ಣಮಿದಂ* ಎಂಬುದು._

_ಸೃಷ್ಟಿ ಅನ್ನುವ ಪ್ರಕ್ರಿಯೆ ನಿರಂತರವಾದುದರಿಂದ ಸೃಷ್ಟಿಯ ಆದಿಯಲ್ಲೇ ಬರುವ ವೇದಗಳಿಗೆ ಕಾಲವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಭಗವಂತನಂತೆ ಅವುಗಳೂ ಅನಾದಿ ಎನ್ನಬಹುದು. ವ್ಯಾಸರು ಅಧ್ಯಯನ ದೃಷ್ಟಿಯಿಂದ ಅದನ್ನು ಸರಳೀಕರಿಸಿದರು. ಇಲ್ಲದಿದ್ದರೆ ನಮ್ಮ ಊಹೆಗೆ ಆ ವೇದವು ನಿಲುಕದೇ ಹೋಗುತ್ತಿತ್ತು. ಜೈಮಿನಿ ಮಹರ್ಷಿಗಳ ಸೂತ್ರವೊಂದು ಇದನ್ನೇ ಹೇಳುವುದು._

*ಔತ್ಪತ್ತಿಕಸ್ತು ಶಬ್ದಸ್ಯ ಅರ್ಥೇನ ಸಂಬಂಧಃ*

_ಶಬ್ದಾರ್ಥಗಳ ಸಂಬಂಧ ನಿತ್ಯವಾದುದು. ವೇದವು ಶಬ್ದಾತ್ಮಕವಾದ ಕಾರಣ ಅದೂ ನಿತ್ಯವೂ ಅನಾದಿಯೂ ಎನ್ನಬಹುದು. ಕಾಠಕ, ತೈತ್ತಿರೀಯ, ಐತರೇಯ ಮುಂತಾದ ಹೆಸರುಗಳು ವೇದದ ಭಾಗಗಳಿಗೆ ಬಂದಿದ್ದು ಆಯಾ ಭಾಗಗಳನ್ನು ಅಂತಹ ಋಷಿಗಳು ಉತ್ತಮವಾಗಿ ಅಧ್ಯಯನ ಮಾಡಿದ್ದರು ಎಂಬ ಕಾರಣದಿಂದಲೇ ಹೊರತು ಪಾಶ್ಚಾತ್ಯರ ಪ್ರತಿಪಾದನೆಯಂತೆ ಅವರೇ ರಚಿಸಿದರೆಂದಲ್ಲ. ದಾಸರ ಕೀರ್ತನೆಗಳನ್ನು ಸುಂದರವಾಗಿ ಹಾಡುವವನಿಗೆ ನಾವು ದಾಸರು ಎನ್ನುವಂತೆ ಇದೂ ಕೂಡ. ಹೀಗೆ ವೇದಗಳು ಅಪೌರುಷೇಯಗಳಾದ ಕಾರಣ ನಮಗೆ ಅವುಗಳು ಪರಮ ಪ್ರಮಾಣಗಳಾಗಿವೆ. ವೇದವಾಕ್ಯವೆಂದರೆ ಮೀರಲಾಗದ ಮಾತು ಎಂಬುದು ರೂಢಿಯ ಮಾತೂ ಹೌದು._

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩