ರಾಮಾಯಣ ೫೨
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೨
*ಅರ್ಥಾನರ್ಥೌ ವಿನಿಶ್ಚಿತ್ಯ ವ್ಯವಸಾಯಂ ಭಜೇತ ಹ ಗುಣತಃ ಸಂಗ್ರಹಂ ಕುರ್ಯಾದ್ದೋಷತಸ್ತು ವಿಸರ್ಜಯೇತ್*
_ಅಂಗದನು ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ. ವಿಭೀಷಣನನ್ನು ಸೇರಿಸಿಕೊಳ್ಳುವ ಬಗೆ ನೀನೇ ನಿರ್ಣಯಿಸು. ಗುಣ ಯಾವುದು ದೋಷ ಯಾವುದೆಂಬುದನ್ನು ಮೊದಲೇ ವಿಚಾರ ಮಾಡಿ ನಿಶ್ಚಯಿಸಬೇಕು. ಈ ವ್ಯಕ್ತಿಯನ್ನು ಸೇರಿಸಿಕೊಂಡರೆ ಪ್ರಯೊಜನವಾಗುವುದೇ ಅಥವಾ ಅನರ್ಥವಾಗುವುದೇ ಎಂಬುದನ್ನು ವಿಮರ್ಶೆಯ ಮೂಲಕ ನಿರ್ಣಯಿಸಬೇಕು. ಸೇರಿಸಿಕೊಂಡರೆ ಒಳ್ಳೆಯದೆನಿಸಿದರೆ ಖಂಡಿತವಾಗಿಯೂ ಸೇರಿಸಿಕೊಳ್ಳಬೇಕು. ಅದೇ ದೋಷವೆಂದು ಕಂಡುಬಂದರೆ ವಿಸರ್ಜಿಸಬೇಕು. ನಮ್ಮ ಬದುಕಿನಲ್ಲಿ ಇದೇ ಮಾರ್ಗವನ್ನು ನಾವು ಅನುಸರಿಸಬೇಕು. ಗೆಳೆತನ ಬೆಳೆಸುವಾಗ, ವ್ಯವಹಾರ ಮಾಡುವಾಗ ಗುಣ-ದೋಷಗಳನ್ನು ಪರಿಶೀಲಿಸಿ ಅಡಿ ಇಟ್ಟರೆ ಆ ಅಡಿಗೆ ಕೆಸರಾಗದು. ಅಂಗದನ ಈ ಮಾತು ಎಂದಿಗೂ ನೆನಪಿಡಬಹುದಾದ ಮಾತು._
*ನ ಭವಂತಂ ಮತಿಶ್ರೇಷ್ಠಂ ಸಮರ್ಥಂ ವದತಾಂ ವರಮ್ ಅತಿಶಾಯಯಿತುಂ ಶಕ್ತೋ ಬೃಹಸ್ಪತಿರಪಿ ಬ್ರುವನ್*
_ಎಲ್ಲಾ ಸಚಿವರು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯ ಕೊಡುವಾಗ ಹನುಮಂತನು ಕಡೆಯದಾಗಿ ಮಾತನಾಡುತ್ತಿದ್ದಾನೆ. ರಾಮಪ್ರಭುವೇ, ನೀನು ಬುದ್ಧಿವಂತರಲ್ಲಿ ಶ್ರೇಷ್ಠನು. ಸಮರ್ಥನು, ವಾಗ್ಮಿಗಳಲ್ಲಿ ಶ್ರೇಷ್ಠನು. ಬೃಹಸ್ಪತಿಗೇ ಆದರೂ ನಿನ್ನನ್ನು ಅತಿಶಯಿಸಿ ಮಾತನಾಡಲು ಸಾಧ್ಯವಾಗುವುದಿಲ್ಲ. ಬೃಹಸ್ಪತಿಯ ಎದುರೂ ವಾದ ಮಾಡಿ ಗೆಲ್ಲುವ ಸಾಮರ್ಥ್ಯ ನಿನ್ನಲ್ಲಿದೆ. ಮಾತನಾಡುವ ನಿನ್ನ ಸಾಮರ್ಥ್ಯ ಅದ್ಭುತವಾದುದು. ಹಾಗಾಗಿ ಬೇರೆಯವರೊಡನೆ ವಿಭೀಷಣನ ವ್ಯವಹಾರಕ್ಕಿಂತ ನಿನ್ನೊಡನೆ ಅವನ ಮಾತಾದರೆ ನೀನೆ ಅವನಿಂಗಿತವನ್ನು ಸುಲಭವಾಗಿ ಗ್ರಹಿಸುವೆ. ಈ ಸಂದರ್ಭದಲ್ಲಿ ನಿನ್ನ ನಿರ್ಣಯವೇ ನಮ್ಮೆಲ್ಲರ ನಿರ್ಣಯ._
*ನ ವಾದನ್ನಪಿ ಸಂಘರ್ಷಾನ್ನಾಧಿಕ್ಯಾನ್ನ ಚ ಕಾಮತಃ ವಕ್ಷ್ಯಾಮಿ ವಚನಂ ರಾಜನ್ಯಥಾರ್ಥಂ ರಾಮ ಗೌರವಾತ್*
_ಈಗ ನಾನು ವಾದ ಮಾಡಲೆಂದಾಗಲೀ, ಸ್ಪರ್ಧೆಗಾಗಲೀ, ಎಲ್ಲರಿಗಿಂತಲೂ ಅಧಿಕವಾದ ಬುದ್ಧಿವಂತಿಕೆ ಇದೆಯೆಂದಾಗಲೀ, ಯಾವುದಾದರೂ ಕಾಮನೆಯಿಂದಾಗಲೀ ಮಾತನಾಡುತ್ತಿಲ್ಲ. ಕಾರ್ಯಗೌರವದ ದೃಷ್ಟಿಯಿಂದ ಯಥಾರ್ಥ ವಾದ ಮಾತನ್ನು ನಿವೇದಿಸುತ್ತೇನೆ. ನಾವು ಮಾತನಾಡುವಾಗ ಈ ದೋಷಗಳು ಸಹಜವಾಗಿ ಘಟಿಸುತ್ತವೆ. ಕೆಲವೊಮ್ಮೆ ವಾದ ಮಾಡಿ ಗೆಲ್ಲಬೇಕೆಂದೇ ಆಡುವೆವು. ಇನ್ನು ಕೆಲವೊಮ್ಮೆ ಇನ್ನೊಬ್ಬರ ಜೊತೆಗೆ ಸ್ಪರ್ಧೆಗೆ ಬಿದ್ದು ಪ್ರತಿಕ್ರಿಯೆ ಕೊಡುವೆವು. ಮತ್ತೆ ಕೆಲವೊಮ್ಮೆ ನಮ್ಮ ಜ್ಞಾನವನ್ನು ಪ್ರದರ್ಶನ ಮಾಡಲೆಂದು ಆಡುತ್ತೇವೆ. ಇನ್ನು ಕೆಲವು ಬಾರಿ ಯಾವುದೋ ಪ್ರಯೋಜನ ಆಗಲೆಂದು ಅಥವಾ ನಮ್ಮನ್ನು ಹೊಗಳಲೆಂದು ಅಥವಾ ನಮ್ಮ ಅಸ್ತಿತ್ವ ತೋರಲೆಂದೋ ಮಾತಮಾಡುತ್ತೇವೆ. ಮಾತು ನುಡಿದರೆ ಹೋಯಿತು ಎನ್ನುವಂತೆ ಆಡುವ ಮಾತಿನಲ್ಲಿ ಇಂತಹ ದೋಷಗಳು ನುಸುಳದಂತೆ ಜಾಗರೂಕತೆ ವಹಿಸುವುದು ಅವಶ್ಯಕ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ