ವೇದ ಧರ್ಮ ೩೨

📗🌾📙 ವೇದ-ಧರ್ಮ 📗🌾📙 ಭಾಗ-೩೨

*ವೇದದ ಅಪೌರುಷೇಯತ್ವ*

_ನಮ್ಮ ಪರಂಪರೆಯಲ್ಲಿ ನಾವು ವೇದವನ್ನು ಅಪೌರುಷೇಯ ಎನ್ನುತ್ತೇವೆ. ಇದು ಕಾವ್ಯ ಸಾಹಿತ್ಯದಂತೆ ಪುರುಷರಿಂದ ನಿರ್ಮಿಸಲ್ಪಟ್ಟಿದ್ದಲ್ಲ ಎಂದು. ಇದು ಯಾಕೆಂದರೆ ಮನುಷ್ಯನ ಬುದ್ಧಿ ಹಾಗೂ ಇಂದ್ರಿಯಗಳ ಕಾರ್ಯಗಳು, ವ್ಯಾಪ್ತಿ ಅದು ಪರಿಮಿತ. ಹೆಣ್ಣಾಗಲಿ ಗಂಡಾಗಲಿ ದೇಹವನ್ನು ಧರಿಸಿರುವವರು ಪುರುಷರು. ಪುರಿ ಶೇತೆ ಇತಿ ಪುರುಷಃ ಎಂಬಂತೆ ಆತ್ಮನು ಈ ದೇಹದಲ್ಲಿ ವಾಸಿಸುವನು ಅಥವಾ ನಿದ್ರಿಸುವನು ಎಂದು ಅರ್ಥ. ಈ ದೇಹಕ್ಕೆ ಎಷ್ಟು ಸಾಮರ್ಥ್ಯ ಇದೆಯೋ ಅಷ್ಟು ಪ್ರಯತ್ನ ಸಾಧ್ಯವಾಗುತ್ತದೆ. ಇಂದ್ರಿಯಗಳ ವ್ಯಾಪ್ತಿ ಸೀಮಿತವಾದುದರಿಂದ ಇಂದ್ರಿಯಗಳಿಗೆ ಗೋಚರಿಸದ ವಸ್ತುಗಳ ವಿಷಯದಲ್ಲಿ ಪುರುಷನ ಪ್ರಯತ್ನ ಫಲಕಾರಿಯಾಗದು. ಸೂಕ್ಷ್ಮ ಜೀವಿಗಳನ್ನು ನೋಡಲು ಹೇಗೆ ಸೂಕ್ಷ್ಮದರ್ಶಕವು ಸಹಾಯ ಮಾಡುವುದೋ ಹಾಗೆ ಎಲ್ಲೆಡೆ ವ್ಯಾಪಿಸಿರುವ ದೇವರನ್ನು ನೋಡಲು ವೇದಗಳೆಂಬ ದರ್ಶಕಗಳು ಸಹಕರಿಸುತ್ತವೆ. ಅಲ್ಲದೆ ಪುರುಷರ ಶರೀರವು ಜನ್ಮಾಂತರದಲ್ಲಿ ಮಾಡಿದ ಸುಕೃತ ಮತ್ತು ದುಷ್ಕೃತಗಳ ಫಲವನ್ನು ಅನುಭವಿಸಲೆಂದೇ ಇರುವುದು. ಶರೀರವು ಎರಡು ವಿಧ. ಸ್ಥೂಲ ಮತ್ತು ಸೂಕ್ಷ್ಮ. ಸ್ಥೂಲ ಶರೀರ ಎಂದರೆ ನಾವು ಕಾಣುತ್ತಿರುವ ಕೈ ಕಾಲಿರುವ ದೇಹ. ಸೂಕ್ಷ್ಮ ಶರೀರವೆಂದರೆ ಪಂಚ ಪ್ರಾಣಗಳು ಹಾಗೂ ಹತ್ತು ಇಂದ್ರಿಯಗಳು._

_ಪ್ರಾಣ,ಅಪಾನ, ವ್ಯಾನ, ಉದಾನ,ಸಮಾನ ಇವು ಐದು ಪ್ರಾಣಗಳು. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯ ಹಾಗೂ ವಾಕ್, ಪಾಣಿ, ಪಾದ, ಪಾಯು, ಉಪಸ್ಥ ಎಂಬ ಐದು ಕರ್ಮೇಂದ್ರಿಯಗಳು. ಇಷ್ಟಲ್ಲದೇ ಬುದ್ಧಿ ಮತ್ತು ಮನಸ್ಸು ಈ ಹದಿನೇಳು ಪದಾರ್ಥಗಳ ಗುಂಪನ್ನು ಸೂಕ್ಷ್ಮ ಅಥವಾ ಲಿಂಗ ಶರೀರ ಎನ್ನುತ್ತೇವೆ. ನಮ್ಮ ಪುಣ್ಯ ಪಾಪಗಳಿಂದುಂಟಾದ ಫಲವನ್ನು ಸೂಕ್ಷ್ಮ ಶರೀರದ ಸಹಾಯದಿಂದ ಸ್ಥೂಲ ಶರೀರವು ಅನುಭವಿಸುತ್ತದೆ. ಇದನ್ನೇ ಹೇಳಿದ್ದು *ಭೋಗಾಯತನಂ ಶರೀರಮ್* ಎಂದು. ಇಂತಹ ಶರೀರ ಹಾಗೂ ಇಂದ್ರಿಯಗಳ ಸಹಾಯದಿಂದ ನಾವು ಸಾರ್ವಕಾಲಿಕ ಅಂಶಗಳನ್ನು ಕಂಡುಹಿಡಿಯಲು ಅಸಾಧ್ಯ. ಹಾಗಾಗಿಯೇ ಇಂದು ಹೇಳಿದ ವಿಜ್ಞಾನದ ಅಂಶಗಳು ನಾಳೆ ಸುಳ್ಳಾಗಬಹುದು. ಆದರೆ ವೇದ ಎಂದೂ ಸುಳ್ಳಾಗದು. ಅಲ್ಲದೆ ಪುರುಷನ ಬುದ್ಧಿಯಲ್ಲಿ ಭ್ರಮೆ ಮತ್ತು ಪ್ರಮಾದ ಎರಡೂ ಸಂಭವಿಸುತ್ತವೆ. ಭ್ರಮೆ ಎಂದರೆ ತಪ್ಪು ತಿಳುವಳಿಕೆ. ಪ್ರಮಾದ ಎಂದರೆ ಗೊತ್ತಿದ್ದರೂ ಅಜಾಗರೂಕತೆಯಿಂದ ಉಂಟಾದ ತಪ್ಪು. *ಪ್ರಮಾದೋನವಧಾನತಾ* ಅವಧಾನ ಕೊಡದೇ ಅಂದರೆ ಪೂರ್ಣ ಗಮನ ಕೊಡದೇ ಮಾಡಿದ ಕೆಲಸದಲ್ಲಿ ತಪ್ಪು ಸಹಜ. ಈ ಎರಡೂ ಹೊಂದಿರದ ವ್ಯಕ್ತಿ ಪರಮಾತ್ಮನೊಬ್ಬನೇ ಸರಿ. ಆದುದರಿಂದಲೇ ವೇದವನ್ನು ಪರಮಾತ್ಮನ ವಾಣಿ ಎಂದರು ನಮ್ಮ ಪೂರ್ವಿಕರು. ಹಾಗಾದರೆ ಪರಮಾತ್ಮ ಯಾವ ಶರೀರವನ್ನು ಧರಿಸಿ ಇದನ್ನು ಹೇಳಿದ ಎಂದರೆ ಅದಕ್ಕೆ ಸಾಯಣರು ಹೀಗೆ ಹೇಳುತ್ತಾರೆ.  *ಯಸ್ಯ ನಿಶ್ವಸಿತಂ ವೇದಾಃ ಯೋ ವೇದೇಭ್ಯೋಖಿಲಂ ಜಗತ್ ನಿರ್ಮಮೇ ತಮಹಂ ವಂದೇ ವಿದ್ಯಾತೀರ್ಥಮಹೇಶ್ವರಮ್* ಯಾವನ ಉಸಿರಿನಂತೆ ವೇದಗಳು ಇವೆಯೋ, ಯಾರು ವೇದಗಳಿಂದಲೇ ಈ ಜಗತ್ತನ್ನೇ ಸೃಜಿಸಿದನೋ ಅಂತಹ ಪರಮಾತ್ಮನನ್ನು ವಂದಿಸುವೆ ಎಂದು. ವಿದ್ಯಾತೀರ್ಥರು ವಿದ್ಯಾರಣ್ಯರ ಗುರುಗಳು.  ಮನುಷ್ಯನ ಉಚ್ಛ್ವಾಸ ನಿಶ್ವಾಸಗಳು ಹೇಗೆ ಅವನಿಗರಿವಿಲ್ಲದಂತೆ ಜರುಗುತ್ತವೆಯೋ ಹಾಗೆಯೇ ವೇದಗಳು ಪರಮಾತ್ಮನ ನಿಶ್ವಾಸರೂಪದಂತೆ ಇವೆ. ಇದನ್ನೇ ಶ್ರುತಿ ಹೀಗೆ ಹೇಳುತ್ತದೆ._
ಮುಂದುವರೆಯುತ್ತದೆ.........

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩