ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ🌺
*समुदितबलवीर्यं रावणं नाशयित्वा जगति गुणसमग्र्यां प्राप्य सीतां विशुद्धाम् | वचनमपि गुरूणामन्तश: पूरयित्वा मुनिजनवनवासं प्राप्तवानस्मि भूय:||*
_ರಾವಣನನ್ನು ಕೊಂದು ರಾಮ ಹಿಂತಿರುಗಿದ್ದಾನೆ. ದಾರಿಯಲ್ಲಿ ತಪಸ್ವಿಗಳ ಆಶ್ರಮವನ್ನು ಕಂಡು ಅವರನ್ನು ನಮಸ್ಕರಿಸಬೇಕೆಂದು ಇಳಿದು ಬಂದಿದ್ದಾನೆ. ಆಗ ಅವನ ಸ್ವಗತ. ಒಂದೇ ಕಡೆ ಗುಡ್ಡೆ ಹಾಕಿದ ಬಲ ಹಾಗೂ ಸೈನ್ಯಶಕ್ತಿಯುಳ್ಳ ಆ ದುಷ್ಟನನ್ನು ಕೊಂದು ಕೆಡವಿ ಆಯಿತು. ರಾವಣನನ್ನು ಗೆದ್ದರೆ ಮೂರು ಲೋಕಗಳನ್ನೂ ಗೆದ್ದಂತೆಯೇ ಸರಿ. ಏಕೆಂದರೆ ಮೂರು ಲೋಕದ ಯಾರ ಬಳಿಯೂ ಇಲ್ಲದಷ್ಟು ವಿಶಾಲ ಸೈನ್ಯ ಅವನ ಬಳಿ ಇತ್ತು. ಅಷ್ಟೇ ಅಲ್ಲದೇ ಸ್ವತಃ ಅವನು ಕ್ಷತ್ರಿಯರು ಬಿಡಿ, ದೇವತೆಗಳನ್ನೇ ಹೊಡೆದೊಡಿಸಿದ ಪರಾಕ್ರಮಿಯಾಗಿದ್ದ. ಅಂತಹ ದಶಕಂಠನೂ ದುಷ್ಟತನದಿಂದ ಇಂದು ಅವಸಾನ ಹೊಂದಿದ. ತ್ರಿಲೋಕ ಕಂಟಕವೊಂದು ಇಂದು ತೊಲಗಿತು. ಗುಣಗಳಿಂದ ಸಮಗ್ರಳಾದ ಅಕಳಂಕ ಚರಿತೆಯಾದ ಸೀತೆಯನ್ನು ಮರಳಿ ಪಡೆದೆ. ಹೆಣ್ಣೊಬ್ಬಳು ಯಾವ ಗುಣಗಳನ್ನು ಹೊಂದಿರಬೇಕೋ ಅಂತಹ ಎಲ್ಲಾ ಸದ್ಗುಣಗಳಿಂದ ಭೂಷಿತೆಯಾದವಳು ಆ ಸೀತೆ. ಲೋಕದ ಕಣ್ಣಿಗೆ ತನ್ನ ಪರಿಶುದ್ಧತೆಯನ್ನು ಅಗ್ನಿ ಪರೀಕ್ಷೆಯ ಮೂಲಕ ಸಾಧಿಸಿ ಪಾತಿವ್ರತ್ಯ ಸಾರಿದವಳು ಈಕೆ. ಇಂತಹ ಸಾಧ್ವಿಯನ್ನು ಮರಳಿ ಪಡೆದೆ. ಅಪ್ಪನ ಮಾತನ್ನು ಅಕ್ಷರಶಃ ನಡೆಸಿದೆ. ಹದಿನಾಲ್ಕು ವರುಷ ವನವಾಸ ಮಾಡು ಎಂದ ಅಪ್ಪನ ಆಜ್ಞೆಯನ್ನು ಅಕ್ಷರಶಃ ಒಂದು ದಿನಕ್ಕೂ ಕಡಿಮೆಯಿಲ್ಲದಂತೆ ಪಾಲಿಸಿದೆ. ಅದರಲ್ಲಿ ಯಾವ ವಂಚನೆಯನ್ನೂ ತೋರಲಿಲ್ಲ. ಇಷ್ಟೆಲ್ಲಾ ಕಾರ್ಯಗಳನ್ನು ಮಾಡಿ ಈಗ ಮುನಿಗಳ ತಪಸ್ಸಿನಿಂದ ಪವಿತ್ರವಾದ ಈ ಪುರಾತನ ಪುಣ್ಯಭೂಮಿಯನ್ನು ಮತ್ತೆ ನನ್ನ ಕಾಲುಗಳಿಂದ ಸ್ಪರ್ಶಿಸಿ ಧನ್ಯನಾದೆ. ಮುನಿಗಳ ಆಶೀರ್ವಾದವೇ ಇವನ್ನೆಲ್ಲ ಸಾಧ್ಯವಾಗಿಸಿದ್ದು. ಹಾಗಾಗಿ ಅವರ ಪದತಲವನ್ನು ಮತ್ತೊಮ್ಮೆ ಸ್ಪರ್ಶಿಸಲು ತಪೋಪಾವನ ಭೂಮಿಗೆ ಬಂದಿಳಿದಿದ್ದೇನೆ. ಕವಿ ಹಿಂದಿನ ಅಂಕದಲ್ಲಿ ಭರತನು ಅಮ್ಮನ ಬಳಿ ಕ್ಷಮೆ ಕೇಳುವ ಹೊಸತೊಂದು ಕಥೆಯನ್ನು ಸೇರಿಸುವನು. ಅನಂತರ ಯುದ್ಧವನ್ನೆಲ್ಲ ಬಿಟ್ಟು ನೇರವಾಗಿ ಉತ್ತರ ಭಾಗಕ್ಕೆ ಹೊರಡುವನು. ಇಲ್ಲಿ ಅವನ ನಾಟಕಕ್ಕಾಗಿನ ದೃಶ್ಯದ ಹೊಂದಾಣಿಕೆ ಮಾದರಿಯಾಗಿದೆ. ಸೀಮಿತ ಪಾತ್ರಗಳನ್ನು ಬಳಸಿ ಕಥೆ ನಿರ್ದೇಶಿಸುವ ಭಾಸನ ಶೈಲಿ ನಾಟಕಕಾರರಿಗೆಲ್ಲ ಮಾದರಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ