ಧಾರ್ಮಿಕ ಆಚರಣೆ ೧೨
🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೨
*ಧ್ಯಾನ*
*ಊರುಸ್ಥೋತ್ತಾನ ಚರಣಃ ಸವ್ಯೇ ನ್ಯಸ್ಯೇತರಂ ಕರಮ್ ಉತ್ತಾನಂ ಕಿಂಚಿದುನ್ನಾಯ್ಯ ಮುಖಂ ವಿಷ್ಟಭ್ಯ ಚೋರಸಾ ನಿಮೀಲಿತಾಕ್ಷಃ , ದಂತೈರ್ದಂತಾನಸಂಸ್ಪೃಶನ್*
_ಧ್ಯಾನ ಮುದ್ರೆಯನ್ನು ವಿವರಿಸುತ್ತಿದ್ದಾರೆ. ಪದ್ಮಾಸನ ಧ್ಯಾನಕ್ಕೆ ಶ್ರೇಷ್ಠ ಆಸನ. ಎರಡು ಕಾಲುಗಳನ್ನು ತೊಡೆಯ ಮೇಲಿರಿಸಿ ಎಡ ಗೈಯ ಮೇಲೆ ಬಲ ಕೈಯನ್ನಿರಿಸಿ ಅಥವಾ ಚಿನ್ಮುದ್ರೆಯೇ ಮೊದಲಾದ ಬೆರಳುಗಳ ಜೋಡಣೆಯನ್ನು ಮಾಡಿ, ಮುಖವನ್ನು ತುಂಬಾ ಮೇಲೆತ್ತದೆ ಹೃದಯದ ಒಳಗಿನ ಪರಮಾತ್ಮನ ಕಡೆಗೆ ಗಮನವಿರಿಸಿ, ಕಣ್ಣನ್ನು ಮುಚ್ಚಿ, ಹಲ್ಲುಗಳನ್ನು ಪರಸ್ಪರ ತಾಗಿಸದೇ ಇಷ್ಟ ರೂಪವನ್ನು ಅಥವಾ ಮಂತ್ರವನ್ನು ಧ್ಯಾನಿಸಬೇಕು. ಇಂತಹ ಆಸನವೇ ನಮ್ಮನ್ನು ಕಾಲಾನುಕ್ರಮದಲ್ಲಿ ಧ್ಯಾನಸ್ಥರಾಗಿಸುತ್ತದೆ. ಆಸನ ಏಕೆ ಬೇಕೆಂದರೆ ಮನಸ್ಸಿನ ನಿಗ್ರಹಕ್ಕೆ ಅತ್ಯವಶ್ಯಕ. *ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ* ಎಂಬ ಕೃಷ್ಣನ ಮಾತಿನಂತೆ ಇಂತಹ ಧ್ಯಾನದ ಅಭ್ಯಾಸವು ಮನೋನಿಗ್ರಹವನ್ನು ಸಾಧ್ಯವಾಗಿಸುತ್ತದೆ._
*ಪ್ರಾಣಾಯಾಮ ದ್ವಿಷಟ್ಕೇನ ಪ್ರತ್ಯಾಹಾರಃ, ಪ್ರತ್ಯಾಹಾರೈರ್ದ್ವಾದಶಭಿರ್ಧಾರಣಾ, ಧಾರಣಾ ದ್ವಾದಶೈರ್ಧ್ಯಾನಮ್*
_ಹನ್ನೆರಡು ಪ್ರಾಣಾಯಾಮಗಳ ಸಾಧನೆಯು ಪ್ರತ್ಯಾಹಾರಕ್ಕೆ ಹೇತುವಾಗುವುದು. ಹನ್ನೆರಡು ಪ್ರತ್ಯಾಹಾರಗಳು ಧಾರಣೆಗೆ ಕಾರಣ. ಹನ್ನೆರಡು ಧಾರಣೆಗಳು ಧ್ಯಾನದ ಸ್ಥಿತಿಗೆ ಕಾರಣ. ಮೊದಲು ಪ್ರಾಣಾಯಾಮವನ್ನು ನಿರಂತರವಾಗಿ ಮಾಡಿ ಪ್ರಾಣವಾಯುವಿನ ಮೇಲೆ ಹಿಡಿತ ಸಾಧಿಸಬೇಕು. ಅನಂತರ ಇಂದ್ರಿಯಗಳ ಏಕರೂಪತೆಯನ್ನು ಅಥವಾ ಮನಸ್ಸು ಮತ್ತು ಇಂದ್ರಿಯಗಳನ್ನು ಒಂದು ವಿಷಯದ ಕಡೆಗೆ ಕೇಂದ್ರೀಕರಿಸುವುದು ಸಾಧ್ಯ. ಇಂತಹ ಪ್ರತ್ಯಾಹಾರದ ನಿರಂತರ ಸಾಧನೆಯು ವಿಷಯದ ಬಗ್ಗೆ ಏಕಾಗ್ರತೆಯನ್ನು , ಮನವು ಅತ್ತಿತ್ತ ಚಲಿಸದಿರುವಂತೆ ಮಾಡುವುದನ್ನು ಕಲಿಸುತ್ತದೆ. ಆಗ ಮನವು ಭಗವಂತನ ರೂಪವನ್ನು ಧರಿಸುತ್ತದೆ. ಅದೇ ಧಾರಣಾ. ಧಾರಣೆಯು ಅವಿರತವಾಗಿ ಮುಂದುವರೆದರೆ ಧ್ಯಾನದಲ್ಲಿ ತಲ್ಲೀನತೆ ಅಥವಾ ಸಮಾಧಿಸ್ಥರಾಗುವುದು ಸಾಧ್ಯವಾಗುತ್ತದೆ. ಶೃಂಗೇರಿಯ ಚಂದ್ರಶೇಖರ ಸ್ವಾಮಿಗಳು, ರಾಮಕೃಷ್ಣ ಪರಮಹಂಸರು, ಶ್ರೀಧರ ಸ್ವಾಮಿಗಳೇ ಮೊದಲಾದ ಮಹನೀಯರು ಇಂತಹ ಅವಸ್ಥೆಯನ್ನು ಅನುಭವಿಸಿದ್ದರು. ಸುಮ್ಮನೆ ನಾವೂ ಹತ್ತು ನಿಮಿಷ ಕುಳಿತು ಏನೇನೋ ಯೋಚನೆ ಮಾಡಿ ಧ್ಯಾನ ಮಾಡಿದೆವೆಂದರೆ ಅದು ಹೆಚ್ಚು ಪ್ರಯೋಜನ ತರಲಾರದು._
*ಜ್ಞಾನಾತ್ ಧ್ಯಾನಂ ವಿಶಿಷ್ಯತೇ ಧ್ಯಾನಾತ್ ಕರ್ಮಫಲತ್ಯಾಗಃ*
_ಗೀತೆಯ ಈ ಮಾತು ಧ್ಯಾನದ ಮಹತ್ವ ಸಾರುತ್ತದೆ. ಕೇವಲ ಜ್ಞಾನವು ನಮ್ಮಲ್ಲಿ ಅಹಂಕಾರವನ್ನು, ಗೌರವದ ಆಕಾಂಕ್ಷೆಯನ್ನು, ಪ್ರಶಸ್ತಿ ಅಥವಾ ಸನ್ಮಾನಗಳ ಅಪೇಕ್ಷೆಯನ್ನು ಉಂಟುಮಾಡುತ್ತದೆ. ಹಾಗಾಗಿ ಜ್ಞಾನ ಪಡೆದ ಮೇಲೆ ಧ್ಯಾನದೆಡೆಗೆ ಗಮನ ಹರಿಸಬೇಕು. ಅಂತಹ ಧ್ಯಾನವು ನಾವು ಮಾಡುವ ಪ್ರತಿಯೊಂದು ಕರ್ಮಗಳ ಫಲವನ್ನು ತ್ಯಾಗ ಮಾಡಲು ಪ್ರೇರೇಪಿಸುತ್ತದೆ. ತ್ಯಾಗದಿಂದ ಸದಾ ಶಾಂತಿಯೂ ಅನಂತರ ದೇವಪ್ರಸಾದವೂ ದೊರಕುತ್ತದೆ._
*ಸರ್ವದೇವಾಃ ಪ್ರಾಕೃತಿಕಾಃ ಯಾವಂತೋ ಮೂರ್ತಿಧಾರಿಣಃ ಅಹಮಾತ್ಮಾ ನಿತ್ಯದೇಹೋ ಭಕ್ತಧ್ಯಾನಾನುರೂಪತಃ*
_ಪುರಾಣದಲ್ಲಿ ಬರುವ ಭಗವಂತನ ಮಾತು. ನಾವು ಮೂರ್ತಿರೂಪದ ಆರಾಧನೆ ನಡೆಸುತ್ತಲೇ ಇದ್ದರೆ ಪ್ರಕೃತಿಯ ಎಲ್ಲೆಯನ್ನು ಮೀರಿ ಮುನ್ನಡೆಯುವುದು ಸಾಧ್ಯವಾಗದು. ಅದನ್ನು ಅಂದರೆ ನಮ್ಮ ವಿಧಿಯನ್ನು ಅಥವಾ ಕರ್ಮಫಲವನ್ನು ಮೀರಬೇಕೆಂದಾದಲ್ಲಿ ನಮ್ಮೊಳಗಿರುವ ದೇವನನ್ನು ನಾವು ಕಾಣಲು ಧ್ಯಾನದ ಮೂಲಕ ಪ್ರಯತ್ನಿಸಬೇಕು. ಒಳಗಿನ ಕತ್ತಲೆಯ ಪರದೆ ಸರಿದಾಗ ಪರಮಾತ್ಮನ ತೇಜೋರೂಪದ ಸಾಕ್ಷಾತ್ಕಾರ ಆಗುತ್ತದೆ. ನಾವೂ ಧ್ಯಾನಿಗಳಾಗಲು ಪ್ರಯತ್ನಿಸೋಣ ಎನ್ನುತ್ತಾ ಈ ಧ್ಯಾನವನ್ನು ಮುಗಿಸುತ್ತೇನೆ. ಮುಂದೆ ಮತ್ತೊಂದು ಆಚರಣೆಯ ಬಗ್ಗೆ ಅರಿಯೋಣ..._
http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ