ಮಹಾಭಾರತ ೬೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೫
*ಶೂರಃ ಪ್ರಾಜ್ಞೋ ಬಹೂನಾಂ ಹಿ ಭವತ್ಯೇಕೋ ನ ಸಂಶಯಃ* *ಜ್ಯೇಷ್ಠಸ್ತ್ರಾತಾ ಭವತಿ ವೈ ಜ್ಯೇಷ್ಠೋ ಮುಂಚತಿ ಕೃಚ್ಛ್ರತಃ ಜ್ಯೇಷ್ಠಶ್ಚೇನ್ನ ಪ್ರಜಾನಾತಿ ಕನೀಯಾನ್ಕಿಂ ಕರಿಷ್ಯತಿ*
_ಎರಡನೆಯವನಾದ ಸಾರಿಸೃಕ್ವ ಹೇಳುತ್ತಾನೆ- ನೀನು ಜರಿತಾರಿ ದೈರ್ಯಶಾಲಿಯಾಗಿರುವೆ. ನಮಗೆ ಪ್ರಾಣಸಂಕಟ ಬಂದರೂ ನೀನು ಎದೆಗುಂದದೆ ಪಾರಾಗುವುದನ್ನು ಯೋಚಿಸುತ್ತಿರುವೆ. ಬಹುಜನರಲ್ಲಿ ಶೂರನೂ ವಿವೇಕಿಯೂ ಎಲ್ಲೋ ಒಬ್ಬನಿರುತ್ತಾನೆ ಅಷ್ಟೇ. ಅನೇಕ ಶೂರರು ಲೋಕದಲ್ಲಿ ಕಾಣಸಿಗುತ್ತಾರೆ. ಅನೇಕ ಜನ ವಿವೇಕಿಗಳೂ ಸಿಗುತ್ತಾರೆ. ಇವೆರಡೂ ಗುಣಗಳಿರುವ ವ್ಯಕ್ತಿ ಸಿಗುವುದು ಬಹಳ ಕಷ್ಟ. ದೇಹ ಶಕ್ತಿಯ ಜೊತೆಗೆ ಬುದ್ಧಿಶಕ್ತಿಯೂ ಕೂಡಿರುವವನು ಎಂತಹ ಕಷ್ಟದಿಂದಲೂ ಪಾರಾಗುತ್ತಾನೆ. ಇವನ ನಂತರ ಕನಿಷ್ಠನಾದ ಸ್ತಂಬಮಿತ್ರನು ಹೀಗೆ ಹೇಳುತ್ತಿದ್ದಾನೆ- ಜ್ಯೇಷ್ಠನೇ ನಿಜವಾದ ರಕ್ಷಕನು. ಜ್ಯೇಷ್ಠನೇ ಕಷ್ಟದಿಂದ ಪಾರುಮಾಡುತ್ತಾನೆ. ಜ್ಯೇಷ್ಠ ನಿಗೇ ತಿಳಿಯದಿದ್ದರೆ ಕನಿಷ್ಠ ಏನು ತಾನೇ ಮಾಡಿಯಾನು! ಲೋಕದಲ್ಲಿ ನಾವು ಎಷ್ಟೋ ಬಾರಿ ಎಲ್ಲಾ ವಿಧದ ಅಧಿಕಾರ ಜ್ಯೇಷ್ಠ ಪುತ್ರನಿಗೆ ಸೇರುವುದನ್ನು ಗಮನಿಸುತ್ತೇವೆ. ಅಧಿಕಾರ ಮಾತ್ರ ಅಲ್ಲದೇ ಅವನಿಗೆ ಜವಾಬ್ದಾರಿಯೂ ಹೆಚ್ಚು. ಅವನೇ ಪ್ರತಿಯೊಂದು ಸಂದರ್ಭದಲ್ಲೂ ಮುನ್ನಡೆಯಬೇಕು. ಅವನೇ ಬದಿಗೆ ಸರಿದರೆ ಕಿರಿಯರು ಯಾರು ಪ್ರವೃತ್ತಿ ಮಾಡಿಯಾರು! ಹೆಸರಿಗೆ ಮಾತ್ರ ಜ್ಯೇಷ್ಠನಾಗದೇ ತನ್ನ ಕಾರ್ಯದಿಂದಲೂ ಜ್ಯೇಷ್ಠನಾಗುವವನು ನಿಜವಾದ ಹಿರಿಯ ಎಂದು ಕರೆಸಿಕೊಳ್ಳುತ್ತಾನೆ. ಜನಸ್ಥಾನದಲ್ಲಿ ರಾಕ್ಷಸರು ಬಂದಾಗ ರಾಮ ಲಕ್ಷ್ಮಣನನ್ನು ಕಳುಹದೇ ತಾನೇ ಹೋರಾಡಿ ಸದೆ ಬಡಿಯುತ್ತಾನೆ. ತಮ್ಮಂದಿರು ಗತಪ್ರಾಣರಾದಾಗ ಧರ್ಮಜನೊಬ್ಬನೇ ಉತ್ತರಿಸಿ ಅವರನ್ನೆಲ್ಲಾ ಬದುಕಿಸಿಕೊಳ್ಳುತ್ತಾನೆ. ಇದು ಕಾರ್ಯದಿಂದಲೂ ಜ್ಯೇಷ್ಠರಾಗುವುದು._
*ಆತ್ಮಾಸಿ ವಾಯೋಃ ಪವನಃ ಶರೀರಮುತ ವೀರುಧಾಮ್ ಯೋನಿರಾಪಶ್ಚ ತೇ ಶುಕ್ರ ಯೋನಿಸ್ತ್ವಮಸಿ ಚಾಂಭಸಃ ಊರ್ಧ್ವಂ ಚಾಧಶ್ಚ ಗಚ್ಛಂತಿ ವಿಸರ್ಪಂತಿ ಚ ಪಾರ್ಶ್ವತಃ ಅರ್ಚಿಷಸ್ತೇ ಮಹಾವೀರ್ಯ ರಶ್ಮಯಃ ಸವಿತುರ್ಯಥಾ*
_ಅಗ್ನಿ ಅವರೆಡೆಗೆ ತನ್ನ ಜ್ವಾಲೆ ಚಾಚಿದಾಗ ಜರಿತಾರಿ ಸುಂದರವಾಗಿ ಸ್ತುತಿಸುತ್ತಾನೆ. ನೀನು ವಾಯುವಿನ ಆತ್ಮನು, ನೀನೇ ಎಲ್ಲರನ್ನೂ ಪವಿತ್ರಗೊಳಿಸುವವನು, ನೀನು ಲತೆಗಳ ಶರೀರ, ಜಲವೇ ನಿನ್ನ ಉತ್ಪತ್ತಿಗೆ ಕಾರಣ, ನೀನೇ ಜಲದ ಉತ್ಪತ್ತಿಗೆ ಕಾರಣ. ಇಲ್ಲಿ ವಿರೋಧಾಭಾಸದಂತಿದೆ. *ಅಗ್ನೇರಾಪಃ* ಎಂಬ ಶ್ರುತಿಯಂತೆ ಆಪದ ಮೂಲ ಬೆಂಕಿ. ಜಲವೇ ಅಗ್ನಿಯ ಉತ್ಪತ್ತಿಗೆ ಕಾರಣವಾಗುವುದು ವಡವಾಗ್ನಿ ಅಂದರೆ ಸಮುದ್ರದೊಳಗಿನ ಬೆಂಕಿಯ ಸಂದರ್ಭದಲ್ಲಿ ಇರಬಹುದು. ಅಥವಾ *ಅಂಭಸ್ಯ ಪಾರೇ ಭುವನಸ್ಯ ಮಧ್ಯೇ* ಎಂಬ ಶ್ರುತಿಯಂತೆ ಮೊದಲು ನೀರು ಮಾತ್ರ ಇದ್ದಿತು. ಅನಂತರ ಒಂದೊಂದು ಹುಟ್ಟಿಕೊಂಡವು ಎನ್ನಬಹುದು. ಅನೇಕ ಮಾತುಗಳಲ್ಲಿ ಆ ಮಕ್ಕಳು ಸ್ತುತಿಸುತ್ತಾರೆ. ನಾವು ಯಜ್ಞದಲ್ಲಿ ಕೊಟ್ಟ ಹವಿಸ್ಸನ್ನು ಒಯ್ಯುವವನು ನೀನೇ. ಉತ್ತಮ ಹವಿಸ್ಸು ನೀನೇ. ಜ್ಞಾನಿಗಳು ನಿನ್ನನ್ನು ಏಕರೂಪದಿಂದಲೂ ಅನೇಕ ರೂಪದಿಂದಲೂ ಆರಾಧಿಸುತ್ತಾರೆ. ಈ ಚಿತ್ರಣ ಬಹಳ ಚೆನ್ನಾಗಿದೆ. ಏಕ ದೇವೋಪಾಸಕನೂ ಜ್ಞಾನಿಯೇ, ಬಹು ದೇವೋಪಾಸಕನೂ ಜ್ಞಾನಿಯೇ. ಯಾರೂ ಮೇಲಲ್ಲ ಯಾರೂ ಕೀಳಲ್ಲ. ಪಿಂಗಳ ಬಣ್ಣದ ಕಣ್ಣುಗಳುಳ್ಳವನೇ, ಕೆಂಪುಬಣ್ಣದ ಕತ್ತುಳ್ಳವನೇ, ಕಪ್ಪಾದ ಮಾರ್ಗವುಳ್ಳವನೇ ನಮ್ಮನ್ನು ಸಮುದ್ರವು ನದಿಗಳನ್ನು ಬಿಡುವಂತೆ ಬಿಡುವಂತೆ ನಮ್ಮನ್ನು ಬಿಟ್ಟು ಬಿಡು. ಅನಂತರ ಅಗ್ನಿಯು ಪ್ರತ್ಯಕ್ಷನಾಗಿ ವರ ಕೇಳಲು ಆ ಪಕ್ಷಿರೂಪದ ಋಷಿಗಳು ಸಮೀಪದಲ್ಲಿ ಇದ್ದ ಬೆಕ್ಕನ್ನು ಭಕ್ಷಿಸಿ ತಮ್ಮನ್ನೂ ಅದರಿಂದಲೂ ಅಗ್ನಿಯಿಂದಲೂ ಕಾಪಾಡುವಂತೆ ಕೇಳಿಕೊಳ್ಳುತ್ತಾರೆ. ಇಲ್ಲಿ ಅವರ ಮುಂದಾಲೋಚನೆ ಚೆನ್ನಾಗಿದೆ. ಅಗ್ನಿಯ ಕೈಯಿಂದ ರಕ್ಷಿತರಾದರೂ ಮತ್ತೆ ಬೆಕ್ಕಿಗೆ ಆಹಾರವಾದರೇ ಏನು ಗತಿ ಎಂಬ ಯೋಚನೆ.ಮುಂದೆ ಇನ್ನೊಂದಷ್ಟು ಸ್ವಾರಸ್ಯ ನೋಡೋಣ....._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ