ಮಹಾಭಾರತ ೬೭

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೭

*ಸುವ್ರತಾಪಿ ಹಿ ಕಲ್ಯಾಣೀ ಸರ್ವಲೋಕಪರಿಶ್ರುತಾ ಅರುಂಧತೀ ಪರ್ಯಶಂಕದ್ವಸಿಷ್ಠಮೃಷಿಸತ್ತಮಮ್*

_ಸಪತ್ನಿ ಅಥವಾ ಸವತಿ ಎನ್ನುವ ಅಸೂಯೆ ಸ್ತ್ರೀಯರಿಗೆ ಎಷ್ಟು ಬಲವಾದುದೆಂಬುದಕ್ಕೆ ಮಂದಪಾಲನು ಉದಾಹರಣೆ ಒಂದನ್ನು ನೀಡುತ್ತಿದ್ದಾನೆ. ಒಳ್ಳೆಯ ವ್ರತನಿಷ್ಠಳೂ, ಮಂಗಳೆಯೂ, ಸಮಸ್ತ ಲೋಕಗಳಲ್ಲಿ ಪ್ರಖ್ಯಾತಳೂ ಆದ ಅರುಂಧತಿ ಕೂಡ ತ್ರಿಲೋಕ ಶ್ರೇಷ್ಠನಾದ ವಸಿಷ್ಠನ ಶಂಕೆಪಟ್ಟಳು. ವಸಿಷ್ಠ ಮುನಿಯನ್ನು ತಿರಸ್ಕರಿಸಿದ ಕಾರಣ ಆ ಅರುಂಧತಿ ಧೂಮಕೇತುವಿನಂತೆ ಕೆಂಪಾದ ಕಾಂತಿಯುಳ್ಳವಳೂ ಅಸ್ಪಷ್ಟವಾದ ರೂಪವುಳ್ಳವಳಾಗಿ ಸಪ್ತರ್ಷಿಮಂಡಲದ ನಡುವೆ ಅಪಶಕುನದಂತೆ ಕಾಣುತ್ತಾಳೆ. ( ವಿವಾಹ ಕಾಲದಲ್ಲಿ ಗುರುತಿಸಲು ಇದೂ ಸಹಾಯಕವೇನೋ! ಎಲ್ಲಾ ನಕ್ಷತ್ರಗಳೂ ಒಂದೇ ಬಣ್ಣದವಾದರೆ ಗುರುತು ಕಷ್ಟ) ಈಗ ನೀನು ಅರುಂಧತಿಯಂತೆ ವರ್ತಿಸುತ್ತಿರುವೆ. ಲಪಿತೆ, ನಿನ್ನ ಇಷ್ಟಾರ್ಥ ಬಯಸುವ ನನ್ನನ್ನು ಪರಿತ್ಯಜಿಸಲು ಯೋಚಿಸಿರುವೆ._

*ನೈವ ಭಾರ್ಯೇತಿ ವಿಶ್ವಾಸಃ ಕಾರ್ಯಃ ಪುಂಸಾ ಕಥಂಚನ ನಹಿ ಕಾರ್ಯಮನುಧ್ಯಾತಿ ಭಾರ್ಯಾ ಪುತ್ರವತೀ ಸತೀ*

_ಪುರುಷನು ಹೆಂಡತಿಯ ವಿಷಯದಲ್ಲಿ ಎಂದಿಗೂ ಪೂರ್ಣ ವಿಶ್ವಾಸವನ್ನಿಡಬಾರದು. ಪುತ್ರವತಿಯಾದ ಭಾರ್ಯೆ ಪತಿಸೇವಾಕಾರ್ಯವನ್ನು ಚಿಂತಿಸುವುದೇ ಇಲ್ಲ. ಮಕ್ಕಳಾಗುವ ತನಕ ಪತಿಯ ಮೇಲಿದ್ದ ಪ್ರೀತಿ ಅನಂತರ ಮಕ್ಕಳ ಮೇಲೆ ತಿರುಗಿ ಪತಿಯ ಬಗ್ಗೆ ಅಸಡ್ಡೆ ಉಂಟಾಗುತ್ತದೆ. ಇದಕ್ಕೆ ವಿರುದ್ಧವಾದ ಶ್ಲೋಕಗಳೂ ಇರಬಹುದು. ಒಟ್ಟಾರೆ ಹೇಳುವುದಾದರೆ ಮನುಷ್ಯರ ಮೇಲೆ ಹೆಚ್ಚು ನಂಬಿಕೆ ಇಡುವುದಕ್ಕಿಂತ ಭಗವಂತನ ಮೇಲೆ ನಂಬಿಕೆ ದೃಢವಾಗಿರಬೇಕು. ಇದಕ್ಕೆ ವಿರುದ್ಧವಾಗಿ ಈಗಿನ ದಿನಗಳಲ್ಲಿ ಪ್ರಾಣಿಗಳ ಮೇಲೆ, ವಸ್ತುಗಳ ಮೇಲೆ ವಿಶ್ವಾಸ ಹೆಚ್ಚಾಗಿದೆ._

*ಪಾರ್ಥಸ್ತು ವರಯಾಮಾಸ ಶಕ್ರಾದಸ್ತ್ರಾಣಿ ಸರ್ವಶಃ ಗ್ರಹೀತುಂ ತಚ್ಚ ಶಕ್ರೋಸ್ಯ ತದಾ ಕಾಲಂ ಚಕಾರ ಹ*

_ಈರ್ವರ ಪರಾಕ್ರಮದಿಂದ ತುಷ್ಟನಾದ ಇಂದ್ರನು ಪ್ರತ್ಯಕ್ಷನಾಗಿ ಕೃಷ್ಣಾರ್ಜುನರ ಬಳಿ ವರ ಕೇಳುವಂತೆ ಹೇಳುತ್ತಾನೆ. ಅರ್ಜುನನು ಈ ಸಮಯದಲ್ಲಿ ಎಲ್ಲಾ ಅಸ್ತ್ರಗಳನ್ನು ಕೇಳುತ್ತಾನೆ. ಇಂದ್ರನು ಮುಂದೆ ಮಹಾದೇವನು ಎಲ್ಲವನ್ನೂ ಅನುಗ್ರಹಿಸುವನೆಂದು ಹೇಳಿದನು. ಕೃಷ್ಣನಾದರೋ ತನಗೆ ಅರ್ಜುನನ‌ ಮೇಲೆ ತನಗೆ ಸದಾ ಪ್ರೀತಿಯುಂಟಾಗುವಂತೆ ಕೇಳಿಕೊಂಡನು. ಇಲ್ಲಿ ಭಗವಂತನ ಉದಾರತೆಯ ಅರಿವಾಗುತ್ತದೆ. ಭಕ್ತರ ಮೇಲೆ ತನಗೆ ಎಂದಿಗೂ ಪ್ರೀತಿ ಇರಲೆಂದೇ ಅವನ ಬಯಕೆ. ನಾವಾದರೋ ಬೇಕಾದಾಗ ಮಾತ್ರ ಅವನನ್ನು ನೆನಪು ಮಾಡಿಕೊಳ್ಳುತ್ತೇವೆ._

*ಪಾವಕಶ್ಚಾಪಿ ತಂ ದಾವಂ ದಗ್ಧ್ವಾ ಸಮೃಗಪಕ್ಷಿಣಮ್ ಅಹಾನಿ ಪಂಚ ಚೈಕಂ ಚ ವಿರರಾಮ ಸುತರ್ಪಿತಃ*

_ಅಗ್ನಿಯು ಆರು ದಿನಗಳ ಕಾಲ ಆ ಖಾಂಡವವನವನ್ನು ದಹಿಸಿ ಮೃಗಪಕ್ಷಿಗಳ ಸಮೇತ ತಿಂದು ತೃಪ್ತಿ ಹೊಂದಿ ವಿರಮಿಸಿದನು. ಅನಂತರ ಅವರೀರ್ವರನ್ನೂ ಮಯನನ್ನೂ ಬೀಳ್ಕೊಟ್ಟನು. ಕಾರಣವಿಲ್ಲದೆ ಪರರಿಗೆ ಮಾಡುವ ಸಹಾಯ ಎಷ್ಟೊಂದು ಪ್ರತಿಫಲವನ್ನು ಅಯಾಚಿತವಾಗಿ ತಂದುಕೊಡುತ್ತದೆಯೆಂಬುದನ್ನು  ಕೃಷ್ಣಾರ್ಜುನರ ಸಾಹಸದಿಂದ ನಾವು ಅರಿಯಬಹುದು. ಯಾವ ಪ್ರತಿಫಲವನ್ನೂ ಬಯಸದೇ ಅವರು ಅಗ್ನಿಗೆ ಸಹಾಯ ಮಾಡಿದ್ದರು. ನಾವೂ ಇಂತಹ ಸಹಾಯ ಬುದ್ಧಿಯನ್ನು ಬೆಳೆಸಿಕೊಳ್ಳೋಣ. *ಅಪೇಕ್ಷೆ ಇದ್ದಷ್ಟೂ ನಿರಾಸೆಗೆ ಅವಕಾಶ*_

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩