ರಾಮಾಯಣ ೧೧೪

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೪

*ಕ್ವ ಗಚ್ಛತ ಭಯತ್ರಸ್ತಾ ಹರಯಃ ಪ್ರಾಕೃತಾ ಯಥಾ  ಅನಾರ್ಯಾಃ ಖಲು ಯದ್ಭೀತಾಸ್ತ್ಯಕ್ತ್ವಾ ವೀರ್ಯಂ ಪ್ರಧಾವತ. ವಿಕತ್ಥನಾನಿ ವೋ ಯಾನಿ ತದಾ ವೈ ಜನಸಂಸದಿ ತಾನಿ ವಃ ಕ್ವನು ಯಾತಾನಿ ಸೋದಗ್ರಾಣಿ ಮಹಾಂತಿ ಚ*

_ಅಂಗದನ ಮಾತು. ಕುಂಭಕರ್ಣನ ಭಯಂಕರ ದೇಹ ಹಾಗೂ ಆಕ್ರಮಣಕ್ಕೆ ಹೆದರಿದ ಕಪಿಗಳು ದಿಕ್ಕುದಿಕ್ಕಿಗೆ ಓಡಲು ಆರಂಭಿಸುತ್ತಾರೆ. ಆಗ ಅವರನ್ನೆಲ್ಲಾ ಸಮಾಧಾನಿಸುತ್ತಾ, ಸಂಘಟಿಸುವ ಅಂಗದ ಅವರ ಸ್ವರೂಪವನ್ನು ಮತ್ತೆ ನೆನಪಿಸುತ್ತಾನೆ. ನೀವೆಲ್ಲ ಸಾಮಾನ್ಯ ಕಾಡಿನ ಕಪಿಗಳಲ್ಲ. ನಾನಾ ಅಸ್ತ್ರ ಶಸ್ತ್ರಗಳ ಪ್ರಯೋಗ, ಶಾಸ್ತ್ರಗಳ ಧರ್ಮಗಳ ಸಾರವನ್ನು ಅರಿತವರು. ಯುದ್ಧ ನೀತಿಯನ್ನು ಬಲ್ಲವರು. ಏಕೆ ಸಾಮಾನ್ಯ ಕಪಿಗಳಂತೆ ಓಡಿಹೋಗುವಿರಿ? ಪೌರುಷವನ್ನು ಬದಿಗೊತ್ತಿ ಭಯದಿಂದ ಏಕೆ ಪಲಾಯನಗೈಯುತ್ತಿರುವಿರಿ? ಜನರೆದುರಿಗೆ ನಿಮ್ಮ ಶೌರ್ಯದ ಬಗ್ಗೆ ಏನೇನೋ ಬಡಾಯಿ ಕೊಚ್ಚಿಕೊಂಡಿದ್ದರಲ್ಲ, ಎಲ್ಲಿ ಹೋಯಿತು ನಿಮ್ಮಯ ಆ ಪರಾಕ್ರಮ?ನಿಮ್ಮ ಜಂಭ ಎಲ್ಲಿ ಅಡಗಿತು? ರಾಕ್ಷಸ ಹನನಕ್ಕಾಗಿ ದೇವತೆಗಳೇ ಕಪಿರೂಪವನ್ನು ಧರಿಸಿ ರಾಮನ ಸಹಾಯಕ್ಕಾಗಿ ಬಂದಿರುತ್ತಾರೆ. ಹಾಗೆ ಬಂದವರು ಈಗ ನೋಡಿದರೆ ಸಾಮಾನ್ಯ ಕಾಡಿನ ಮಂಗಗಳಂತೆ ಒಂದು ದೊಡ್ಡ ದೇಹವನ್ನು ನೋಡಿ ಹೆದರಿ ಓಡುವುದು ಸರಿಯೇ? ನಿಮ್ಮ ನಿಜ ಸ್ವರೂಪವನ್ನು ನೆನೆಸಿಕೊಂಡು ಧೈರ್ಯದಿಂದ ಹೋರಾಡಿ ಎಂದು ಅಂಗದನು ಹೇಳುತ್ತಾನೆ. ನಾಯಕನಾದವನು ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡಬೇಕು. ಅಂಗದ ಅದನ್ನೇ ಇಲ್ಲಿ ತೋರಿಸಿಕೊಟ್ಟಿದ್ದಾನೆ. ಕಪಿಗಳ ನಿಜರೂಪದ ಬಗೆಗೂ ವಾಲ್ಮೀಕಿಗಳು ಇಲ್ಲಿ ಸೂಚ್ಯವಾಗಿ ದೇವತೆಗಳೆನ್ನುವುದನ್ನು ಹೇಳಿದ್ದಾರೆ._

*ಭೀರುಪ್ರವಾದಾಃ ಶ್ರೂಯಂತೇ ಯಸ್ತು ಜೀವತಿ ಧಿಕ್ಕೃತಃ ಮಾರ್ಗಃ ಸತ್ಪುರುಷೈರ್ಜುಷ್ಟಃ ಸೇವ್ಯತಾಂ ತ್ಯಜ್ಯತಾಂ ಭಯಮ್. ಶಯಾಮಹೇಥ ನಿಹತಾಃ ಪೃಥಿವ್ಯಾಮಲ್ಪಜೀವಿತಾಃ ದುಷ್ಪ್ರಾಪಂ ಬ್ರಹ್ಮಲೋಕಂ‌ ವಾ ಪ್ರಾಪ್ನುಮೋ ಯುಧಿ ಸೂದಿತಾಃ"*

_ಅಂಗದನದ್ದೇ ಮತ್ತೊಂದು ಮಾತು- ಯಾರು ಧಿಕ್ಕಾರಕ್ಕೊಳಗಾಗಿ ಜೀವಿಸುವರೋ ಅವರು ಹೇಡಿಯೆಂಬ ಕೆಟ್ಟ ಹೆಸರನ್ನು ಶಾಶ್ವತವಾಗಿ ಗಳಿಸುತ್ತಾರೆ. ಶಿಷ್ಟರಾದ ಶೂರರು ಹೋದ ದಾರಿಯನ್ನು ನೀವೂ ತುಳಿಯಿರಿ. ಅಂಜಿಕೆ ತೊರೆಯಿರಿ. ಹೇಗಿದ್ದರೂ ನಮ್ಮ ಜೀವಿತಾವಧಿ ಅಲ್ಪ. ಒಂದು ವೇಳೆ ಯುದ್ಧದಲ್ಲಿ ಹತರಾಗಿ ಮಲಗಿದರೆ ಅನ್ಯದುರ್ಲಭವಾದ ಬ್ರಹ್ಮಲೋಕ ಸಿಗುತ್ತದೆ . ಹಾಗಾಗಿ ಓಡದೇ ಶತ್ರುವನ್ನು ಓಡಿಸಲು ಪ್ರಯತ್ನಿಸಿ.‌ನಾವು ಜೀವನದಲ್ಲಿ ಒಮ್ಮೆ ಕೆಟ್ಟ ಹೆಸರು ಸಂಪಾದಿಸಿದರೂ ಅದು ಶಾಶ್ವತವಾಗಿ ಉಳಿದುಬಿಡುತ್ತದೆ. ಹಾಗಾಗಿ ಬಹಳ ಜಾಗರೂಕತೆಯಿಂದ ಪ್ರತಿಯೊಬ್ಬರ ಬಳಿಯೂ ವ್ಯವಹರಿಸಬೇಕು. ಬದುಕು ಕೆಲವರ್ಷಗಳ ಮಾತ್ರ. ಅಷ್ಟು ಕಡಿಮೆ ಅವಧಿಯಲ್ಲಿ ಸಾಧನೆ ಮಹತ್ತಾಗುವಂತೆ ಬದುಕಿ ಸಾಧಿಸಬೇಕೆಂಬ ಉತ್ತಮ ಆಶಯ ಕವಿಯ ಮಾತಿನಲ್ಲಿ ಅಡಗಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩