ಸ್ವಪ್ನ ವಾಸವದತ್ತ ೮
🌼 ಸ್ವಪ್ನವಾಸವದತ್ತ ಎಸಳು-೮🌼
*दु:खं त्यक्तुं बद्धमूलोनुराग: स्मृत्वा स्मृत्वा याति दु:खं नवत्वम् । यात्रा त्वेषा यद् विमुच्येह बाष्पं प्राप्तानृण्या याति बुद्धि: प्रसादम् ।।*
_ಉದಯನ ಮರೆಯಾದ ವಾಸವದತ್ತೆಯನ್ನು ಸ್ಮರಿಸಿಕೊಂಡು ಹೇಳುವ ಮಾತು. ಬಹಳ ಕಾಲದ ಒಡನಾಟದಿಂದ ದೃಢವಾದ ಅನುರಾಗವನ್ನು ಅವಳಿಲ್ಲದಿದ್ದರೂ ಹೇಗೆ ಮರೆಯಲಿ! ಮನದಲ್ಲಿ ಅದಾಗಲೇ ಅವಳು ನೆಲೆಯಾಗಿದ್ದಾಳೆ. ಈಗ ಒಂದೇ ಸಲ ಹೇಗೆ ಮರೆಯಲಿ, ಮರೆಯುವುದು ತುಂಬಾ ಕಷ್ಟ. ಹಳೆಯ ನೆನಪುಗಳನ್ನು ಮರೆಯುವುದೇ ದುಃಖಕರ. ಆ ಪ್ರೇಮದ ಅಥವಾ ಅನುರಾಗದ ಸ್ಮರಣೆಯು ಮತ್ತೆ ಮತ್ತೆ ಒದಗಿರಲು, ಕಷ್ಟ ಈಗಲೇ ಒದಗಿಬಂತೇನೋ ಎಂದೆನಿಸುತ್ತಿದೆ. ವಸ್ತುತಃ ವಾಸವದತ್ತೆ ಮರೆಯಾಗಿ ಬಹಳ ಕಾಲ ಕಳೆದಿದೆ. ಆದರೆ ಅವಳ ಮೇಲೆ ಪ್ರೇಮ ಮೂಡಿದಾಗಲೆಲ್ಲ ಅವಳ ನೆನಪು ಉಂಟಾಗಿ ಈಗ ತಾನೇ ಮರೆಯಾಗಿ ಹೋದಳೇನೋ ಎಂಬಂತೆ ಅಂದು ಅನುಭವಿಸಿದ ದುಃಖವು ಮತ್ತೆ ಹೊಸದಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಈ ಒಂದು ಉಪಾಯವೊಂದೇ ನನಗೆ ಗೋಚರಿಸುತ್ತಿದೆ. ಇಲ್ಲಿ ಯಾತ್ರಾ ಶಬ್ದಕ್ಕೆ ಕವಿ ಉಪಾಯ ಎಂಬ ಅರ್ಥವನ್ನು ಸ್ವೀಕರಿಸಿದ್ದಾನೆ. ಕಣ್ಣೀರನ್ನು ಮನದಲ್ಲಿ ಬಂಧಿಸದೇ ದುಃಖದ ಅಣೆಕಟ್ಟನ್ನು ಒಡೆದು ಧಾರಾಕಾರವಾಗಿ ಹರಿಯಬಿಡುವುದು. ಕಣ್ಣೀರು ಬರುವಷ್ಟು ಹೊತ್ತು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುವುದು. ಅಂತಹ ಅಳುವಿಕೆಯೇ ಮನದ ಪ್ರಸನ್ನತೆಗೆ ಕಾರಣವಾಗುವುದು. ಮನದ ಬೇಸರ, ತಾಪ, ಮಡುಗಟ್ಟಿದ ಶೋಕವೆಲ್ಲಾ ಹರಿದುಹೋದಾಗ ಮನವು ನಿರ್ಮಲವಾಗುವುದು. ಆಗ ಮಾತ್ರ ಸ್ವಸ್ಥತೆಯು ಒದಗಿಬರುತ್ತದೆ. ದುಃಖವನ್ನು ಎಂದಿಗೂ ಹಿಡಿದಿಟ್ಟುಕೊಳ್ಳಬಾರದು. ಆಪ್ತರ ಜೊತೆ ಹಂಚಿಕೊಳ್ಳಬೇಕು. ಪತ್ರದಲ್ಲೋ ಪುಸ್ತಕದಲ್ಲೋ ಬರೆಯಬೇಕು. ಇದು ಸಾಧ್ಯವಿಲ್ಲದಿದ್ದಾಗ ಮನಸಾರೆ ಅತ್ತುಬಿಡಬೇಕು. ಇಂತಹ ಉಪಾಯಗಳೇ ನಮ್ಮ ದುಃಖವನ್ನು ಮರೆಸಿ ಮನವನ್ನು ಹಗುರವಾಗಿಸಿ ನಮ್ಮ ಕಾರ್ಯಗಳಿಗೆ ಅಣಿ ಮಾಡುತ್ತದೆ. ಅದಿಲ್ಲದೇ ಚಿಂತಿಸುತ್ತಲೇ ಇದ್ದರೆ ಅದೆಂದೂ ಸುಲಭವಾಗಿ ಮರೆಯಾಗದು. ಹಾಗಾಗಿಯೇ ಹಿರಿಯರ ಮಾತು ಅತ್ತು ಹಗುರಾಗು ಎಂದು. ಅನೇಕರಿಗೆ ಹಂಚಿಕೊಳ್ಳಲು ತಿಳಿಯದೇ ಕೊರಗುತ್ತಿರುತ್ತಾರೆ. ಅವರಿಗೆಲ್ಲ ಕವಿ ಸಹಾಯಹಸ್ತ ಚಾಚಿದ್ದಾನೆ ಈ ಮಾತಿನ ಮೂಲಕ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ