ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*तान्भूरिधाम्नश्चतुरोपि दूरं विहाय यामानिव वासरस्य । एकौघभूतं तदशर्म कृष्णां विभावरीं ध्वान्तमिव प्रपेदे ।।*
_ಕವಿಯ ಒಂದು ಸುಂದರ ಉಪಮೆ ಇಲ್ಲಿದೆ. ಅರ್ಜುನ ವ್ಯಾಸರ ಆಣತಿಯಂತೆ ಯಕ್ಷನೊಡನೆ ಹಿಮಾಲಯದ ತಪ್ಪಲಲ್ಲಿ ತಪಸ್ಸಿಗೆ ತೆರಳಿದ್ದಾನೆ. ಇಷ್ಟು ಕಾಲ ಜೊತೆಗಿದ್ದ ಕಷ್ಟ ಸುಖಗಳೆರಡರಲ್ಲಿ ಜೊತೆಯಾಗಿದ್ದ ಅರ್ಜುನನ ವಿರಹದಿಂದ ದ್ರೌಪದಿಯೊಡಗೂಡಿದ ನಾಲ್ವರಿಗೂ ಬೇಸರವಾಯಿತು. ಆದರೆ ಯುಧಿಷ್ಠಿರಾದಿಗಳು ಧೈರ್ಯಶಾಲಿಗಳೂ ಹಾಗೂ ಮುಂದಿನ ಉನ್ನತಿಗೆ ಇದು ಹೇತುವಾಗುವುದೆಂಬ ಭರವಸೆಯಿಂದ ಆ ದುಃಖವನ್ನು ಮನದಲ್ಲೇ ಇರಿಸಿಕೊಂಡರು. ದುಃಖವಿದ್ದರೂ ಪ್ರಕಾಶಪಡಿಸಲಿಲ್ಲ. ದ್ರೌಪದಿಗೆ ಮಾತ್ರ ಅರ್ಜುನನಿಲ್ಲದ ಬದುಕು ಅಸಹನೀಯವೆನಿಸಿತು. ಕವಿ ಅದನ್ನೇ ಹಗಲು ರಾತ್ರಿಯ ಬೆಳಕು ಕತ್ತಲಿನ ಉಪಮೆಯ ಮೂಲಕ ವರ್ಣಿಸುತ್ತಿದ್ದಾನೆ. ಅರ್ಜುನನ ವಿರಹದಿಂದ ಉಂಟಾದ ಆ ಶೋಕವು ಅತ್ಯಂತ ತೇಜಸ್ವಿಗಳಾದ ಧರ್ಮಜನೇ ಮೊದಲಾದ ನಾಲ್ವರನ್ನು ಹಗಲಿನ ನಾಲ್ಕು ಯಾಮಗಳಂತೆ ಪರಿತ್ಯಜಿಸಿ ಅಂಧಕಾರವು ರಾತ್ರಿಯನ್ನು ಮಾತ್ರ ಆಶ್ರಯಿಸುವಂತೆ ಕೃಷ್ಣೆಯನ್ನು ಹೊಂದಿತು. ದ್ರೌಪದಿ ಕೃಷ್ಣವರ್ಣದವಳು. ಕವಿ ಅದನ್ನೇ ಚಮತ್ಕಾರಿಕವಾಗಿ ಉಪಯೋಗಿಸಿದ್ದಾನೆ. ಹಗಲ ಮೊದಲನೆಯ ಜಾವ ಯುಧಿಷ್ಠಿರನಂತೆ ಶಾಂತ. ಎರಡು ಮೂರು ಭೀಮ ನಕುಲರಂತೆ ಭಯಂಕರ. ಕೊನೆಯ ಯಾಮ ಸಹದೇವನಂತೆ ಮತ್ತೆ ಶಾಂತ. ತನಗೆ ಇವರಾರೂ ನಿಲುಕರಾರರು ಎಂದು ಎಣಿಸಿದ ಕತ್ತಲೆ ಹೇಗೆ ರಾತ್ರಿಯನ್ನು ಮಾತ್ರ ಆಶ್ರಯಿಸಿತೋ ಅದರಂತೆ ದುಃಖವೂ ದ್ರೌಪದಿಯನ್ನು ಮಾತ್ರ ಪೀಡಿಸಿತು. ಉಳಿದವರಿಗಿಂತ ಹೆಚ್ಚು ದುಃಖತಪ್ತಳಾದುದು ದ್ರೌಪದಿ ಎಂಬ ಭಾವದಲ್ಲಿ ಕವಿಯ ಈ ಮಾತು. ಸೂರ್ಯನ ಬೆಳಕಿನಂತೆ ಕತ್ತಲನ್ನು ಅಥವಾ ದುಃಖವನ್ನು ನಿರಾಕರಿಸುವ ಸಾಮರ್ಥ್ಯ ನಾಲ್ವರಿಗೂ ಇತ್ತು. ಆದರೆ ರಾತ್ರಿಯಂತೆ ಸ್ವಭಾವ ಮುಗ್ಧಳಾದ ನಾಯಿಕೆ ಅನಿವಾರ್ಯವಾಗಿ ಅದರ ಆಲಿಂಗನಕ್ಕೆ ಒಳಗಾಗಬೇಕಾಯಿತು ಎಂದೂ ಹೇಳಬಹುದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ