ಮಹಾಭಾರತ ೬೩
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೩
*ಜರಿತಾರೌ ಕುಲಂ ಹೀದಂ ಜ್ಯೇಷ್ಠತ್ವೇನ ಪ್ರತಿಷ್ಠಿತಮ್ ಸಾರಿಸೃಕ್ವಃ ಪ್ರಜಾಯೇತ ಪಿತೃಣಾಂ ಕುಲವರ್ಧನಃ*
_ಮಂದಪಾಲನು ಅಗ್ನಿಯನ್ನು ಸ್ತುತಿಸಿ ತನ್ನ ಮಕ್ಕಳಿಗೆ ಅಭಯವನ್ನು ಪಡೆದುಕೊಂಡ. ಇತ್ತ ಕಡೆ ಇದಾವುದರ ಅರಿವಿಲ್ಲದ ಆ ಪಕ್ಷಿಗಳು ತಮ್ಮ ಪ್ರಾಣನಾಶದ ಬಗ್ಗೆ ಚಿಂತಿಸಲು ಆರಂಭಿಸಿದವು. ವ್ಯಾಸರು ಆ ಎಲ್ಲಾ ಮಾತುಕತೆಯನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ._
_ಋಷಿ ಪತ್ನಿ ಜರಿತೆಯು ಮಕ್ಕಳನ್ನು ಕುರಿತು ಹೀಗೆ ಹೇಳುವಳು- ನೀವು ಶಕ್ತಿಹೀನರು. ನಿಮ್ಮನ್ನು ಬಿಟ್ಟು ಹೋಗಲು ನಾನು ಸಮರ್ಥಳಾಗಿಲ್ಲ. ನೀವೇ ಹೋಗಲು ನಿಮಗೇ ಸಾಮರ್ಥ್ಯ ಇಲ್ಲ. ನಿಮ್ಮನ್ನು ಕರೆದುಕೊಂಡು ಹೋಗುವಷ್ಟು ಶಕ್ತಿ ನನ್ನ ರೆಟ್ಟೆಯಲ್ಲಿಲ್ಲ. ನಾನು ನನ್ನ ಕರ್ತವ್ಯ ಹೇಗೆ ಮಾಡಲಿ? ನನ್ನ ಅವಯವಗಳಿಂದ ನಿಮ್ಮನ್ನು ಮರೆಮಾಚಿ ಬೆಂಕಿಯಿಂದ ಕಾಪಾಡುವೆನು. ಜರಿತಾರಿ ಜ್ಯೇಷ್ಠನಾದ ಕಾರಣ ಅವನನ್ನು ಈ ವಂಶ ಅವಲಂಬಿಸಿದೆ. ಸಾರಿಸೃಕ್ವನು ಪಿತೃಗಳ ವಂಶವರ್ಧಕನಾಗುವನು. ಸ್ತಂಬಮಿತ್ರನು ತಪಸ್ಸು ಮಾಡುವನು. ದ್ರೋಣನು ಶ್ರೇಷ್ಠ ಬ್ರಹ್ಮಜ್ಞಾನಿ ಅಗುವನೆಂದು ನಿಮ್ಮ ಬಗ್ಗೆ ತಂದೆ ಹೇಳಿ ಎಲ್ಲಿಗೋ ಹೊರಟು ಹೋದನು. ಹೀಗೆಲ್ಲಾ ದುಃಖಿಸಿದಳು. ಆಗ ಮಕ್ಕಳ ಮಾತು ಇದು- ಅಮ್ಮಾ ದುಃಖಿಸದಿರು. ನಮ್ಮ ಮೇಲಿನ ಪ್ರೀತಿ ಬಿಟ್ಟು ಬೆಂಕಿಯಿಲ್ಲದಿರುವೆಡೆ ನೀ ಹೋದರೂ ನಿನಗೆ ಮಕ್ಕಳಾಗುವರು. ನೀನೇ ನಾಶ ಹೊಂದಿದರೆ ವಂಶ ಬೆಳೆಯಲಾರದು. ನಮ್ಮ ವಂಶನಾಶಕ್ಕಾಗಿ ನೀನು ನಮ್ಮ ಮೇಲೆ ಪ್ರೀತಿ ಮಾಡಬೇಡ.ಪಿತೃಲೋಕ ಬಯಸುವ ನಮ್ಮ ತಂದೆಯ ಈ ಕಾರ್ಯ ( ನಿನ್ನನ್ನು ಮದುವೆಯಾದ) ವ್ಯರ್ಥವಾಗಬಾರದು. ನಮ್ಮನ್ನು ಕೂಡಲೇ ಬಿಟ್ಟು ಹೊರಡು. ಯಾವ ಮಕ್ಕಳು ಅಮ್ಮನಿಗಾಗಿ ಅಪ್ಪನ ಶ್ರೇಯಸ್ಸಿಗಾಗಿ ಹೀಗೆ ಯೋಚಿಸಿಯಾರು. ಪಕ್ಷಿ ಜನ್ಮದಲ್ಲಿದ್ದರೂ ಋಷಿಯ ಪ್ರಭಾವದಿಂದ ಇಂತಹ ವೈರಾಗ್ಯದ ಮಾತನ್ನಾಡುವ ಅವುಗಳ ಕಥೆ ಸತತ ವಿಷಯಾಸಕ್ತರಾದ ನಮಗೆ ಪಾಠದಂತಿದೆ. ಅವರ ನಡುವೆ ಮತ್ತೊಂದಷ್ಟು ಸಂಭಾಷಣೆ ನಡೆಯುತ್ತದೆ._
ಅದನ್ನು ಮುಂದೆ ನೋಡೋಣ....._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ