ಸ್ವಪ್ನ ವಾಸವದತ್ತ ೯
🌼 ಸ್ವಪ್ನವಾಸವದತ್ತ ಎಸಳು-೯🌼
*शय्या नावनता तथास्तृतसमा न व्याकुलप्रच्छदा न क्लिष्टं हि शिरोपधानममलं शीर्षाभिघातौषधै: । रोगे दृष्टिविलोभनं जनयितुं शोभा न काचित् कृता प्राणी प्राप्य रुजा पुनर्न शयनं शीघ्रं स्वयं मुँचति ।।*
_ರಾಣಿಗೆ ತಲೆನೋವೆಂದು ಅರಿತ ರಾಜನು ವಿದೂಷಕನೊಡನೆ ಶಯ್ಯಾಗೃಹಕ್ಕೆ ಬರುವನು. ಆ ಸಮಯದಲ್ಲಿ ವಿದೂಷಕನು ಅವಳಾಗಲೇ ಬಂದು ಹೋಗಿರಬೇಕೆಂದು ಅನುಮಾನಿಸಿದಾಗ ರಾಜನು ಹಾಗಾಗಿರುವ ಲಕ್ಷಣಗಳಾವುವೂ ಕಾಣದೆಂದು ಈ ಮಾತನ್ನು ನುಡಿಯುತ್ತಾನೆ. ಇಲ್ಲಿ ಒಂದು ಮಲಗಿದರೆ ಆ ಸ್ಥಳದಲ್ಲಾಗುವ ಬದಲಾವಣೆಗಳನ್ನು ಕವಿ ಸೂಕ್ಷ್ಮವಾಗಿ ಗಮನಿಸಿ ತೆರೆದಿಡುತ್ತಿದ್ದಾನೆ. ಹಾಸಿಗೆ ಅಲ್ಪವೂ ಅವನತವಾಗಿಲ್ಲ. ಒಂದು ವೇಳೆ ಮಲಗಿದ್ದರೆ ದೇಹಭಾರಕ್ಕೆ ಬಗ್ಗಿರುತ್ತಿತ್ತು. ಹಾಸಿಗೆಯ ಮೇಲೆ ಜೋಡಿಸಿದ ಮಲಗಲು ಹೊದಿಸಿದ ಹೊದಿಕೆಗಳು ಅಥವಾ ಮೆತ್ತನೆಯ ಹಾಸು ಸ್ವಲ್ಪವೂ ವ್ಯತ್ಯಾಸವಾಗಿಲ್ಲ. ಅದನ್ನು ಮುಟ್ಟಿದ ಕುರುಹಿಲ್ಲ. ಹೊದ್ದುಕೊಳ್ಳಲು ಹಾಸಿರುವ ಹೊದಿಕೆಯ ಮಡಕೆಯೂ ಕಿಂಚಿತ್ತಾದರೂ ಅಲುಗಾಡಿಲ್ಲ. ಇನ್ನು ತಲೆದಿಂಬು ಕೆಳಗಿಳಿದಿಲ್ಲ. ತಲೆಯ ಇಡುವಿಕೆಯಿಂದ ಉಂಟಾಗುವ ಕೊಳೆಯೂ ಅಂಟಿಲ್ಲ. ಅಥವಾ ತಲೆನೋವಿನ ಪರಿಹಾರಕ್ಕೆ ಉಪಯೋಗಿಸಿದ ಔಷಧಗಳಿಂದ ಆ ದಿಂಬು ಮಲಿನವೂ ಆಗಿಲ್ಲ. ರಾಜಮಹಿಷಿಯಾದರೂ ಕವಿ ಸಹಜವಾಗಿ ವರ್ಣಿಸುತ್ತಿದ್ದಾನೆ. ರಾಣಿ ತಲೆನೋವಿಂದ ಬಳಲುತ್ತಿರುವ ಸಮಯದಲ್ಲಿ ಅವಳ ಚಿತ್ತಕ್ಕೆ ಸಮಾಧಾನವಾಗಲೆಂದು ಗೋಡೆಯಲ್ಲಿ ಚಂದದ ಚಿತ್ರಗಳನ್ನು ತೂಗುಹಾಕಿಲ್ಲ ಅಥವಾ ಭಿತ್ತಿಯ ಮೇಲೆ ತಿಳಿ ಬಣ್ಣಗಳ ಚಿತ್ತಾರವೂ ಮೂಡಿಲ್ಲ. ಯಾವ ಜನರೂ ರೋಗದಿಂದ ಬಳಲುತ್ತಿದ್ದಾಗ ಹಾಸಿಗೆಯನ್ನು ನೋಡಿಯೂ ಹಾಗೆಯೇ ತೆರಳಲು ಸಾಧ್ಯವಿಲ್ಲ. ಅಲ್ಪಕಾಲವಾದರೂ ವಿಶ್ರಾಂತಿ ಪಡೆದೇ ತೆರಳುತ್ತಾರೆ. ಸಾಮಾನ್ಯರೇ ಹಾಸಿಗೆಯನ್ನು ನೋಡಿ ಕೆಲಕ್ಷಣಗಳ ಕಾಲ ಪವಡಿಸಿಯೇ ಮುಂದುವರಿಯುವಾಗ ಶಿರೋವೇದನೆಯಂತಹ ಮಲಗಲು ಮುಖ್ಯ ಕಾರಣವಾದ ರೋಗದಿಂದ ಬಳಲುತ್ತಿದ್ದಾಗ ಹಾಗೆಯೇ ಹೋಗುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿ ಪ್ರಕೃತ ರಾಣಿ ಪದ್ಮಾವತಿ ಇಲ್ಲಿಗೆ ಬಂದೇ ಇಲ್ಲ ಎಂದು ರಾಜ ವಿದೂಷಕನಿಗೆ ಸತರ್ಕವಾಗಿ ಮನವರಿಕೆ ಮಾಡುತ್ತಿದ್ದಾನೆ. ಕವಿಯ ಸಣ್ಣ ವಿಷಯಗಳ ಬಗೆಗಿನ ಗಮನ ಇಲ್ಲಿ ಆಕರ್ಷಕವಾಗಿದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ