ಮಹಾಭಾರತ ೬೪

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೪

*ತತೋಹಂ ಪಾಂಸುನಾ ಛಿದ್ರಮಪಿಧಾಸ್ಯಾಮಿ ಪುತ್ರಕಾಃ ಏವಂ ಪ್ರತಿಕೃತಂ ಮನ್ಯೇ ಜ್ವಲತಃ ಕೃಷ್ಣವರ್ತ್ಮನಃ*

_ಜರಿತೆಯು ತನ್ನ ಮಕ್ಕಳಿಗೆ ಅಗ್ನಿಯಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹೇಳುತ್ತಾಳೆ. ಬಳಿಯಲ್ಲಿ ಇರುವ ಮಣ್ಣಿನ ಬಿಲವನ್ನು ನೀವು ಪ್ರವೇಶಿಸಿ. ಅನಂತರ ನಾನು ಮಣ್ಣಿನಿಂದ ಅದನ್ನು ಮುಚ್ಚುವೆನು. ಅಗ್ನಿ ನಂದಿದ ಮೇಲೆ ಸರಿಸಿ ನಿಮ್ಮ ಜೊತೆ ಸೇರಿಕೊಳ್ಳುವೆನು ಎಂದು. ಆಗ ಮಕ್ಕಳು ಅದನ್ನು ನಿರಾಕರಿಸುತ್ತಾರೆ. ಬಿಲದೊಳಗೆ ಹೊಕ್ಕರೆ ಪಕ್ಷವಿಲ್ಲದ ನಮ್ಮನ್ನು ಇಲಿ ತಿನ್ನಬಹುದು. ಹಾಗಾಗಿ ಬೇಡ. ಅನಂತರ ಜರಿತೆಯು ಇಲಿಯನ್ನು ಗಿಡುಗವು ತೆಗೆದುಕೊಂಡು ಹೋಯಿತೆಂದೂ, ನಿಶ್ಚಿಂತರಾಗಿರೆಂದೂ ಹೇಳಿದರೂ ಮಕ್ಕಳು ಕೇಳದಾದರು. ಇದರ ನಡುವೆ ಆ ಪಕ್ಷಿಗಳು ಒಂದು ಒಳ್ಳೆಯ ಸೂಕ್ತಿ ನುಡಿಯುತ್ತವೆ._

*ನ ತ್ವಂ ಮಿಥ್ಯೋಪಚಾರೇಣ ಮೋಕ್ಷಯೇಥಾ ಭಯಂ ಮಹತ್ ಸಮಾಕುಲೇಷು ಜ್ಞಾನೇಷು ನ ಬುದ್ಧಿಕೃತಮೇವ ತತ್*

_ವ್ಯರ್ಥವಾದ ಉಪಚಾರದ ಮಾತಿನಿಂದ ನೀನು ನಮ್ಮ ಪ್ರಾಣಭಯವನ್ನು ತಪ್ಪಿಸಲಾರೆ. ಬುದ್ಧಿ ವ್ಯಾಕುಲವಾಗಿದ್ದಾಗ ಅದು ವಿವೇಕದಿಂದ ಮಾಡಿದಂತಾಗುವುದಿಲ್ಲ. ಎಷ್ಟು ಸತ್ಯ ಮಾತು. ನಮ್ಮ ಬುದ್ಧಿ ಸುಸ್ಥಿತಿಯಲ್ಲಿದ್ದಾಗ ನಮ್ಮ ಹಿಡಿತದಲ್ಲಿರುತ್ತದೆ. ಯಾವುದೋ ಚಿಂತೆಗೆ ಒಳಗಾದ ಮನವು ಏನೇನನ್ನೋ ಪ್ರಚೋದಿಸಿ ಮಾಡಿಸುತ್ತದೆ. ಹಾಗಾಗಿ ಅಂತಹ ಕಾರ್ಯಗಳು ವಿವೇಕಯುತವೆಂದು ಆಗಲಾರವು. ಪಕ್ಷಿಗಳ ಈ ಮಾತೂ ವೈರಾಗ್ಯದ್ದಾಗಿದೆ- ನಾವು ನಿನಗೆ ಉಪಕಾರ ಮಾಡಿಲ್ಲ, ನಾವು ಯಾರೆಂಬುದೂ ನಿನಗೆ ತಿಳಿದಿಲ್ಲ, ನೀನು ತೊಂದರೆ ಸ್ವೀಕರಿಸಿ ನಮ್ಮನ್ನು ರಕ್ಷಿಸಲು ಉದ್ದೇಶಿಸಿರುವೆ. ಸುಂದರಿಯಾದ ನೀನು ಪತಿಯನ್ನು ಹೊಂದಿ ಮತ್ತೆ ಮಕ್ಕಳನ್ನು ಪಡೆ. ನಾವು ಬದುಕಿದ್ದರೆ ನಿನ್ನನ್ನು ಸೇರುವೆವು. ದೇಹದಿಂದಾಗಿ ಸಂಬಂಧವೇ ಹೊರತು ಪರಸ್ಪರ ಆತ್ಮಗಳಿಗಲ್ಲ, ಅವು ಯಾವ ಯಾವ ಸ್ವರೂಪವೋ ಏನೋ ಎಂಬ ಸಂದೇಶವನ್ನು ಇದು ಹೇಳುತ್ತಿದೆ‌. ಅನಂತರ ಮಕ್ಕಳ ಮಾತಿಗೆ ಎದುರಾಡದ ಆ ಜರಿತೆ ತಾನು ಬೇರೆಡೆ ಹೊರಟು ಹೋದಳು._

*ಪುರತಃ ಕೃಚ್ಛ್ರಕಾಲಸ್ಯ ಧೀಮಾಞ್ಜಾಗರ್ತಿ ಪೂರುಷಃ ಸ ಕೃಚ್ಛ್ರಕಾಲಂ ಸಂಪ್ರಾಪ್ಯ ವೃಥಾಂ ನೈವೈತಿ ಕರ್ಹಿಚಿತ್*

_ಇತ್ತ ಕಡೆ ದೊಡ್ಡವನಾದ ಜರಿತಾರಿ ಹೇಳುತ್ತಾನೆ- ಬುದ್ಧಿವಂತನು ಮುಂದಾಗುವ ಕಷ್ಟದ ವಿಷಯದಲ್ಲಿ ಎಚ್ಚರ ವಹಿಸುತ್ತಾನೆ. ಅಂತಹ ಕಷ್ಟ ಬಂದಾಗ ಅವನೆಂದೂ ದುಃಖಿಸುವುದಿಲ್ಲ. ಅವಿವೇಕಿಯು ಕಷ್ಟ ಬರುವ ಮುಂಚೆ ಯಾವ ಜಾಗೃತೆಯನ್ನೂ ವಹಿಸದೇ ದುಃಖಿತನಾಗಿ ಕಷ್ಟದ ಸಮಯದಲ್ಲಿ ಅವಸಾನ ಹೊಂದುತ್ತಾನೆ. ಮುಂದೆ ಹೀಗಾಗಬಹುದೆಂದು ಅಂದಾಜು ಮಾಡಿ ಅದಕ್ಕಾಗಿ ಜಾಗರೂಕತೆ ಈಗಿನಿಂದಲೇ ವಹಿಸಬೇಕು. ಹಾಗೆ ಮಾಡಿದಾಗ ಮಾತ್ರ ಕಷ್ಟ ಸಹಿಷ್ಣುವಾಗುತ್ತದೆ. ಇಲ್ಲದಿದ್ದರೆ ಕಷ್ಟ ಬಂದಾಗ ಬದುಕೇ ದುರ್ಭರವಾಗುತ್ತದೆ.ಮಕ್ಕಳ ನಡುವೆ ಇನ್ನೊಂದಷ್ಟು ಸ್ವಾರಸ್ಯಕರ ಮಾತುಕತೆ ನಡೆಯುತ್ತದೆ. ಮುಂದೆ ಅದನ್ನು ನೋಡೋಣ_

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩