ಧಾರ್ಮಿಕ ಆಚರಣೆ ೧೧

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೧

*ಧ್ಯೇಯಾನ್ನಚಲತೇ ಯಸ್ಯ ಮನೋಭಿರ್ಧ್ಯಾಯತೇ ಭೃಶಮ್*

_ಧ್ಯಾನದಲ್ಲಿ ಯಾವುದು ವಿಷಯವಾಗಿರುವುದೋ ಅದರಿಂದ ಮನವನ್ನು ಸ್ವಲ್ಪವೂ ವಿಚಲಿತವಾಗದಂತೆ ನೋಡಿಕೊಳ್ಳುಬೇಕು. ಬೌದ್ಧರ ಮತದ ರೀತ್ಯಾ ವಿಷಯ ನಿರಾಕೃತವಾದುದರಿಂದ ಶೂನ್ಯವನ್ನಾದರೂ ಧ್ಯಾನಿಸಬೇಕು. ಅನೇಕ ಬುದ್ಧನ ಅನುಯಾಯಿಗಳಿಗೆ ಈ ವಿಷಯದಲ್ಲಿ ಧ್ಯಾನ ಇರುವುದಿಲ್ಲ. *ಪರಮಾತ್ಮ ಚಿಂತನೇ ಚಿಂತಾ ತದ್ವಿಷಯೇ ಧ್ಯಾನಮ್* ಎಂಬಂತೆ ನಮಗಿಂತ ಶ್ರೇಷ್ಠನಾದ ಹಾಗಾಗಿಯೇ ಪರಮಾತ್ಮನಾದ ಆ ದೇವನ ಬಗೆಗೆ ಮನದಲ್ಲಿ ಮತ್ತೆ ಮತ್ತೆ ಚಿಂತಿಸುತ್ತಾ ಇರುವುದು ಕೂಡ ಧ್ಯಾನವೇ ಆಗಿದೆ. ಧ್ಯಾನವೆಂದರೆ ಬರೀ ಒಂದೆಡೆ ಕುಳಿತು ನಿಶ್ಶಬ್ದವಾಗಿ ಕಣ್ಣು ಮುಚ್ಚಿ ನಿದ್ರೆ ಬಂದರೂ ತಡೆದುಕೊಂಡು ಕರೆದರೂ ಕಿವುಡಾಗಿ ಕಷ್ಟ ಪಟ್ಟು ಮಾಡುವ ಪ್ರಕ್ರಿಯೆಯಲ್ಲ. ಅದೊಂದು ಆನಂದದ ಅನುಭೂತಿ. ಪ್ರಿಯನ ಅಥವಾ ಪ್ರಿಯಳ‌ ವಿರಹದಲ್ಲಿ ಹಿಂದಿನ ನೆನಪುಗಳ ಅವಲೋಕನ ಎಂತಹ ಆನಂದ ಜನಕವೋ ಅಂತಹದೇ ಆನಂದ ನಿರಂತರವಾದ ದೇವನ ಧ್ಯಾನದಿಂದ ದೊರಕುತ್ತದೆ._

*ಯತ್ರ ಚಿತ್ತಂ ಧೃತಂ ತತ್ರ ಜ್ಞಾನಸ್ಯ ಯಾ ಏಕತಾನತಾ*

_ಮನದ ಪ್ರಬೇಧಗಳು ಅನೇಕ. ಬುದ್ಧಿ, ಚಿತ್ತ, ಅಂತಃಕರಣ ಮೊದಲಾಗಿ. ಎಲ್ಲವೂ ಒಂದರಲ್ಲೇ ಜನಿಸಿದ್ದರೂ ಭೇದ ಇದ್ದೇ ಇದೆ. ಇಲ್ಲಿ ಚಿತ್ತವು ಎಲ್ಲಿ ಆಸಕ್ತವೋ ಅದರ ಬಗೆಗಿನ ತಿಳುವಳಿಕೆಯೇ ಅಥವಾ ಏಕತಾನತೆಯೇ ಧ್ಯಾನ ಎನ್ನಬಹುದು. ನಾವೊಂದು ಕಾದಂಬರಿ ಇಹದ ಪರಿವಿಲ್ಲದೇ ಪಠಿಸುತ್ತಿರುವೆವು, ಅಥವಾ ಯಾವುದೋ ಘಟನೆಯ ಬಗೆಗೆ ಗಾಢವಾಗಿ ಯೋಚಿಸುತ್ತಿರುವೆವು, ಇವೇ ಮೊದಲಾದ ಅತ್ಯಂತ ಆಸಕ್ತಿಯ ಅವಸ್ಥೆಗಳು ಧ್ಯಾನದ ಬೇರೆ ಬೇರೆ ರೂಪಗಳು. ವಿಷಯ ಒಳ್ಳೆಯದಾದರೆ ಪರಿಣಾಮವೂ ಉತ್ತಮವಾಗಿರುತ್ತದೆ. ಕಳ್ಳನಿಗೆ ತಾನು ಕದಿಯಬೇಕಾದ ವಸ್ತು- ಸ್ಥಳ- ಸಮಯ ಇವುಗಳ ಬಗೆಗೆ ಧ್ಯಾನ ಇದ್ದೇ ಇರುತ್ತದೆ. ಸಮಾಧಿ ಎನ್ನುವುದು ಧ್ಯಾನದ ಚರಮ ಸ್ಥಿತಿ._

*ದ್ವಿಧಾ ಸಗುಣಂ ನಿರ್ಗುಣಂ ವಾ ಸರೂಪಂ ಅರೂಪಂ‌ ಇತಿ*

_ಧ್ಯಾನವು ಮುಖ್ಯವಾಗಿ ಎರಡು ಬಗೆ. ಸಗುಣ ಹಾಗೂ ನಿರ್ಗುಣ. ಓಂಕಾರ ವನ್ನೋ, ಗುರೂಪದಿಷ್ಟ ಮಂತ್ರವನ್ನೋ ಶ್ಲೋಕವನ್ನೋ ಹೆಸರನ್ನೋ ಉಚ್ಚರಿಸುತ್ತಾ ಮಾಡುವ ಧ್ಯಾನ ಸಗುಣ. ಅದೇನೂ ಇಲ್ಲದೇ ದೇವರೂಪವನ್ನು ಮಾತ್ರ ಚಿಂತಿಸುವುದು ನಿರ್ಗುಣ. ಇಲ್ಲಿ ನಿರ್ಗುಣವೆಂದರೆ ಸಲಕರಣೆ ಇಲ್ಲ ಎಂದಷ್ಟೇ ಅರ್ಥ ಹೊರತು ವಿಷಯವೇ ಇಲ್ಲ ಎಂದಲ್ಲ. *ಅನಾಕ್ಷಿಪ್ತೇನ ಮನಸಾ ಧ್ಯಾನ* ಎಂಬಂತೆ ಮನವು ಯಾವ ಜಂಜಾಟದಲ್ಲಿ ಮುಳುಗಿರದಂತೆ ಮಾಡುವ ಧ್ಯಾನ ನಿಜವಾದ ಧ್ಯಾನವೆಂದು ಕರೆಸಿಕೊಳ್ಳುವುದು._

*ಗಚ್ಛನ್ ತಿಷ್ಠನ್ ಸ್ವಪನ್ ಜಾಗ್ರದುನ್ಮಿಷನ್ ನಿಮಿಷನ್ ಶುಚಿರ್ವಾಪ್ಯಶುಚಿರ್ವಾಪಿ ಧ್ಯಾಯೇತ್ ಸತತಮೀಶ್ವರಮ್*

_ಅನೇಕ ಜನರ ಅಭಿಪ್ರಾಯ ಹೀಗಿರುತ್ತದೆ. ಧ್ಯಾನ ಎಲ್ಲಾ ಮಾಡಲು ನಮಗೆ ಸಮಯವೇ ಇರುವುದಿಲ್ಲ ಎಂದು. ಆದರೆ ಇಲ್ಲಿ ಹೇಳಿದ ಧ್ಯಾನಕ್ಕೆ ಸಮಯ ಬೇಡ. ಮನಸ್ಸು ಮಾತ್ರ ಬೇಕೇಬೇಕು. ನಡೆಯುವಾಗ, ನಿಂತಾಗ-ಕುಳಿತಾಗ, ಮಲಗಿರುವಾಗ, ಎಚ್ಚರವಿದ್ದಾಗ, ಕಣ್ಣು ತೆರೆದಾಗ-ಮುಚ್ಚಿದಾಗ, ಅಷ್ಟೇಕೆ ಶುಚಿಯಿರಲಿ-ಅಶುಚಿಯಾಗಿರಲಿ ಸತತವಾಗಿ ಈಶ್ವರನನ್ನು ಅಂದರೆ ಜಗದೊಡೆಯನನ್ನು ಧ್ಯಾನಿಸುತ್ತಲೇ ಇರಬೇಕು. ನಾನು ಸ್ನಾನ ಮಾಡಿಲ್ಲ, ಹಲ್ಲು ತೊಳೆದಿಲ್ಲ, ಬಟ್ಟೆ ಸ್ವಚ್ಛವಿಲ್ಲ, ಬಸ್ಸಿನಲ್ಲಿರುವೆ ಮುಂತಾದ ಯಾವುದರ ಹಂಗೂ ಇದಕ್ಕಿಲ್ಲ. ನೀವು ಯಾವ ಕ್ರಿಯೆಯಲ್ಲಿದ್ದರೂ ಧ್ಯಾನ ಮಾಡಿದರೆ ಅದು ಸರಿಯೇ. ಎಂದಿಗೂ ತಪ್ಪಾಗಲಾರದು. ಸತಿ ಪತಿಯರ ಸಂಯೋಗದ ಸಮಯದಲ್ಲೂ ಭಗವಂತನ ಧ್ಯಾನವನ್ನು ವೇದವೇ ಹೇಳುತ್ತದೆ. ಹಾಗಾಗಿ ಸಮಯದ ಬಗ್ಗೆ ಮರುಗದೇ ಮನದ ಆಲಸ್ಯದ ಬಗ್ಗೆ ಮರುಕ ಪಡಬೇಕು. ಇಡೀ ದಿನ ನೆನಪಾಗದಿದ್ದರೂ ನೆನಪಾದಾಗಲಾದರೂ ಧ್ಯಾನ ಮಾಡಬಹುದಲ್ಲವೇ! ಇನ್ನೊಂದಷ್ಟು ವಿಷಯ ಮುಂದೆ ಧ್ಯಾನಿಸೋಣ....._

http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩