ರಾಮಾಯಣ ೧೧೩

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೩

*ನ ಮರ್ಷಯತಿ ಚಾತ್ಮಾನಂ ಸಂಭಾವಯತಿ ನಾತ್ಮನಾ ಅದರ್ಶಯಿತ್ವಾ ಶೂರಾಸ್ತು ಕರ್ಮ‌ ಕುರ್ವಂತಿ ದುಷ್ಕರಮ್*

_ಮಹೋದರನ ಮಾತನ್ನು ನಿರಾಕರಿಸುತ್ತಾ ಕುಂಭಕರ್ಣನಾಡುವ ನುಡಿ. ಶೂರರಾದವರು ಎಂದಿಗೂ ತಮ್ಮ ಬಗೆಗಿನ ಇನ್ನೊಬ್ಬರ ಅವಮಾನದ ಹೇಳಿಕೆಯನ್ನು ಸಹಿಸುವುದಿಲ್ಲ. ಹಾಗಂತ ತಮ್ಮನ್ನು ತಾವು ಹೆಚ್ಚು ಹೊಗಳಿಕೊಳ್ಳುವುದೂ ಇಲ್ಲ. ತಮ್ಮ ಸಾಮರ್ಥ್ಯವನ್ನು ಯಾರು ಹೇಳಿಕೊಳ್ಳದೆಯೇ ಅದ್ಭುತವಾದ ಕಾರ್ಯ ಮಾಡಿ ತೋರುತ್ತಾರೋ ಅವರೇ ಶೂರರು. ಅನೇಕರ ದೌರ್ಬಲ್ಯವಿದು. ತಮ್ಮ ಬಗ್ಗೆ ತಾವು ಗಂಟೆಗಟ್ಟಲೆ ಹೇಳಿಕೊಳ್ಳುತ್ತಾರೆ. ನಾ ಹಾಗೆ ಮಾಡಬಲ್ಲೆ ,ಹೀಗೆ ಮಾಡಬಲ್ಲೆ ಎಂದೆಲ್ಲಾ ಹೇಳಿಕೊಳ್ಳುತ್ತಾರೆ. ಅದರೆ ಯಾವುದೂ ಕಾರ್ಯರೂಪಕ್ಕೆ ಬರುವುದೇ ಇಲ್ಲ. ನಿಜವಾದ ಸಾಮರ್ಥ್ಯ ಇದ್ದವರು ಪರರು ತಮ್ಮ ಬಗ್ಗೆ ಆಡುವ ಕೀಳು ಮಾತನ್ನೂ, ತಿರಸ್ಕಾರವನ್ನು ಎಂದಿಗೂ ಸಹಿಸಲಾರರು. ತಮ್ಮ ಕೃತಿಯಿಂದಲೇ ಲೋಕಕ್ಕೆ ತಮ್ಮ ಶಕ್ತಿಯನ್ನು ತೋರಿಸುತ್ತಾರೆ. ನಾನೂ ಹೆಚ್ಚು ಮಾತನಾಡಲಾರೆ. ಯುದ್ಧ ರಂಗದಲ್ಲಿ ರಾಮಾದಿಗಳನ್ನು ಸದೆಬಡಿದು ಹಿಂತಿರುಗುವೆನು ಎನ್ನುತ್ತಾನೆ ಕುಂಭಕರ್ಣ._

*ವಿಕ್ಲವಾನಾಮಬುದ್ಧೀನಾಂ ರಾಜ್ಞಾ ಪಂಡಿತಮಾನಿನಾಮ್ ಶೃಣ್ವತಾ ಸಾದಿತಮಿದಂ ತ್ವದ್ವಿಧಾನಾಂ ಮಹೋದರ*

_ರಾಜನ ನಿಜ ಶತ್ರುಗಳು ಯಾರೆಂಬುದನ್ನು ಕುಂಭಕರ್ಣನು ಹೇಳುತ್ತಿದ್ದಾನೆ. ಹೇಡಿಗಳನ್ನೆಂದೂ ರಾಜನು ಬಳಿಯಲ್ಲಿ ಇಟ್ಟುಕೊಳ್ಳಬಾರದು. ಎರಡನೆಯದಾಗಿ ಬುದ್ಧಿ ಇಲ್ಲದವರನ್ನು ಹತ್ತಿರಕ್ಕೆ ಸೇರಿಸಲೇಬಾರದು. ಯಾವ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದೆಂಬ ಅರಿವೇ ಅವರಿಗಿರುವುದಿಲ್ಲ. ಸುಮ್ಮನೆ ರಾಜಾಶ್ರಯವನ್ನು ಬಯಸಿ ಕಾಲಹರಣ ಮಾಡುತ್ತಿರುತ್ತಾರೆ. ಮೂರನೆಯದಾಗಿ ತಾವೇ ದೊಡ್ಡ ಪಂಡಿತರೆಂದು ಅಭಿಮಾನ ಹೊಂದಿರುವವರು. ತಮ್ಮಷ್ಟು ತಿಳಿದವರು ಬೇರಾರೂ ಇಲ್ಲ, ತಮ್ಮ ನಡೆ ನುಡಿಗಳು ಪರಿಪೂರ್ಣ ಎಂಬ ಭಾವವುಳ್ಳ ವ್ಯಕ್ತಿಗಳನ್ನು ರಾಜನೆಂದಿಗೂ ಆದರಿಸಬಾರದು. ಈ ಮಹೋದರ ಮೊದಲಾದವರು ಯುದ್ಧಕ್ಕೆ ಅಂಜುವ ಹೇಡಿಗಳು. ಈ ಲಂಕೆಯಲ್ಲಿ ಪ್ರಜೆಗಳೆಲ್ಲ ಹತರಾಗಿ ನೀನೊಬ್ಬನೇ ಉಳಿಯಲು ಇಂತಹವರ ಮೂರ್ಖತನವೇ ಕಾರಣ. ಸ್ನೇಹದ ಹೊದಿಕೆಯಲ್ಲಿ ಹಗೆತನವನ್ನು ಸಾಧಿಸಿದ್ದೀರಿ. ಕುಂಭಕರ್ಣನ ಈ ಮಾತುಗಳು ಉತ್ತಮ ರಾಜನೀತಿಯನ್ನೇ ಸಾರುತ್ತವೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩