ರಾಮಾಯಣ ೧೧೨

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೨

*ರಂಜನೀಯಂ ಹಿ ಭರ್ತಾರಂ ವಿನಷ್ಟಮವಗಮ್ಯ ಸಾ ನೈರಾಶ್ಯಾತ್ ಸ್ತ್ರೀ ಲಘುತ್ವಾಚ್ಚ ತ್ವದ್ವಶಂ ಪ್ರತಿಪತ್ಸ್ಯತೇ. ಸಾ ಪುರಾ ಸುಖಸಂವೃದ್ಧಾ ಸುಖಾರ್ಹಾ ದುಃಖಕರ್ಶಿತಾ ತ್ವಯ್ಯಧೀನಂ ಸುಖಂ ಜ್ಞಾತ್ವಾ ಸರ್ವಥೋಪಗಮಿಷ್ಯತಿ*

_ಮಹೋದರನು ರಾವಣನಿಗೆ ಸಲಹೆ ನೀಡುತ್ತಿದ್ದಾನೆ. ನಾವು ಕುಂಭಕರ್ಣನೊಡನೆ ಯುದ್ಧರಂಗಕ್ಕೆ ತೆರಳಿ ಹೋರಾಡಿ ರಕ್ತಸಿಕ್ತವಾಗಿ ಹಿಂತಿರುಗಿ ರಾಮ ಲಕ್ಷ್ಮಣರನ್ನು ಭಕ್ಷಿಸಿದೆವೆಂದು ಪ್ರಚಾರ ಮಾಡುತ್ತೇವೆ. ನೀನು ಇತ್ತ ಕಡೆ ಸೀತೆಯನ್ನು ಒಲೈಸು. ತನ್ನ ಪತಿ ಸತ್ತನೆಂದು ತಿಳಿದು ಬೇರೆ ಉಪಾಯವಿಲ್ಲದೇ ನಿರಾಸೆಯಿಂದಲೂ, ಸ್ತ್ರೀ ಸಹಜವಾದ ಚಾಪಲ್ಯದಿಂದಲೂ  ಅವಳು ನಿನ್ನ ಕೈ ಸೇರುವಳು. ಅವಳು ಹಿಂದೆ ಸುಖವಾಗಿ ಬೆಳೆದವಳು. ಸುಖದಲ್ಲಿ ಇರಬೇಕಾದವಳು. ಈಗ ನಾನಾ ದುಃಖಗಳಿಂದ ನೊಂದು ಬೆಂದಿದ್ದಾಳೆ. ನಿನ್ನನ್ನು ಸೇರಿದರೆ ಸುಖವಿದೆಯೆಂದು ಮನದಟ್ಟಾದ ಮೇಲೆ ನಿನ್ನನ್ನು ಖಂಡಿತವಾಗಿ ಆಶ್ರಯಿಸುತ್ತಾಳೆ. ಹಾಗಾಗಿ ಈ ಉಪಾಯವನ್ನು ಬೇಗ ಅನುಸರಿಸು. ಇಲ್ಲಿ ಮಹೋದರನ ಮಾತು ಗಮನಿಸಿದರೆ ಹಿಂದೆ ಸತಿಪದ್ಧತಿ ಹೆಚ್ಚು ಚಾಲ್ತಿಯಲ್ಲಿದ್ದಂತೆ ತೋರುವುದಿಲ್ಲ. ಒಂದು ವೇಳೆ ಹಾಗಿದ್ದದ್ದೇ ಆದಲ್ಲಿ ಇಂತಹ ಮೋಸದ ಯೋಚನೆ ಬುದ್ಧಿವಂತನಾದ ಆ ಮಂತ್ರಿ ಮಾಡಲಾರನು. ದಾಳಿಕೋರರ ಅತ್ಯಾಚಾರದಿಂದ ರಕ್ಷಿಸಿಕೊಳ್ಳಲು ಈ ಪದ್ಧತಿ ಹುಟ್ಟಿಕೊಂಡಿತೇ ಹೊರತು ನಮ್ಮ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರಲಿಲ್ಲ. ಆದರೆ ನಮ್ಮ ಪಠ್ಯಗಳಲ್ಲೆಲ್ಲ ದಾಳಿಕೋರರ ಅನಾಚಾರಗಳನ್ನು ಮರೆಮಾಚಿ ಹಿಂದೂಧರ್ಮದ ಕೆಟ್ಟ ಅಂಶವಾದ ಸತಿಪದ್ಧತಿ ಎಂದೇ ಬಿಂಬಿಸಲ್ಪಟ್ಟಿದ್ದು ದುರದೃಷ್ಟಕರ. ಸತ್ಯದ ಮೇಲೆ ಅಸತ್ಯದ ಹೊದಿಕೆ ಧಾರಾಳವಾಗಿ ಹೊದ್ದು ಮಲಗಿದೆ ಎನ್ನಬಹುದು. ಅತ್ಯಾಚಾರಕ್ಕೆ ಒಳಗಾಗುವುದಕ್ಕಿಂತ ಅಥವಾ ಬದುಕಿದ್ದೂ ಸತ್ತಂತೆ ಇರುವುದಕ್ಕಿಂತ ಸಾವೇ ಲೇಸೆಂದು ಭಾವಿಸಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರು. ಹಾಗಲ್ಲದೆ ಗಂಡ ಸಹಜವಾಗಿ ಸತ್ತರೆ ತಾವೂ ಸಾಯುವ ಯೋಚನೆ ಯಾವ ಹೆಣ್ಣುಮಕ್ಕಳೂ ಮಾಡುತ್ತಿರಲಿಲ್ಲ. ಅಥವಾ ಅಂತಹ ಸಂಸ್ಕಾರ ನಮ್ಮಲ್ಲಿ ಇರಲೂ ಇಲ್ಲ._

*ಅನಷ್ಟಸೈನ್ಯೋ ಹ್ಯನವಾಪ್ತಸಂಶಯೋ ರಿಪೂನಯುದ್ಧೇನ ಜಯನ್ನರಾಧಿಪಃ ಯಶಶ್ಚ ಪುಣ್ಯಂ ಚ ಮಹನ್ಮಹೀಪತೇ ಶ್ರಿಯಂ ಚ ಕೀರ್ತಿಂ ಚ ಚಿರಂ ಸಮಶ್ನುತೇ*

_ಮಹೋದರನ ಇನ್ನೊಂದು ಮಾತು. ಭೇದನೀತಿಗೆ ಉತ್ತಮ ಉದಾಹರಣೆ. ರಾಜನು ಯುದ್ಧ ಮಾಡದೆಯೇ ಉಪಾಯದಿಂದ ಶತ್ರುವನ್ನು ಪರಾಭವಗೊಳಿಸಿದರೆ ಸೇನೆಯೂ ನಷ್ಟವಾಗಲಾರದು. ವಿಪತ್ತು ಉಂಟಾಗುವ ಭಯವೂ ಇಲ್ಲ. ಯಶಸ್ಸೂ ದೊರಕುತ್ತದೆ. ಹಿಂಸೆ ಇಲ್ಲದ ಕಾರಣ ಪುಣ್ಯವೂ ಉಂಟು. ಚಿರಕಾಲದವರೆಗೆ ಐಶ್ವರ್ಯವೂ ಕೀರ್ತಿಯೂ ಲಭಿಸುತ್ತದೆ. ಮೋಸದಿಂದ ಶತ್ರುಗಳನ್ನು ನಾಶ ಮಾಡಿ ಅಥವಾ ಅವರ ಮನೋಬಲ ಕುಗ್ಗಿಸಿ ಸುಲಭವಾಗಿ ಬಗ್ಗುಬಡಿಯಬಹುದು ಎಂಬುದು ಅವನ ಆಲೋಚನೆ. ಸೀತೆ ಶತ್ರುವಶಳಾದಳೆಂದು ತಿಳಿದ ರಾಮ ಯುದ್ಧದಿಂದ ವಿಮುಖನಾಗುತ್ತಾನೆ. ನಿರಾಸೆಯಿಂದ ಹೊರಟು ಹೋಗುವನೆಂಬುದು ಅವನ ಮತ. ರಾಮನು ಕೇವಲ ಸೀತೆಯ ಉದ್ದೇಶದಿಂದ ಯುದ್ಧಕ್ಕೆ ಹೊರಟವನಲ್ಲ. ಪರಸ್ತ್ರೀಯರ ಮಾನ ಹರಣ ಮಾಡುವ ದುಷ್ಟ ಬುದ್ಧಿಯ ನಾಶಕ್ಕಾಗಿ ಹೊರಟದ್ದು. ಕೇವಲ ಅದೊಂದೇ ಆಗಿದ್ದರೆ ಅವನು ದೇವನಾಗದೇ ಮಾನವನಾಗಿಯೇ ಇರುತ್ತಿದ್ದ. ಹಿಂಸೆಯನ್ನು ನಿರಾಕರಿಸುವ ಇವನ ಮನಸ್ಥಿತಿ ನಕ್ಸಲರ ಪರವಾದ ಜನರಂತೆ ಇದೆ. ತಮ್ಮ ಯಾವ ಕಾರ್ಯಗಳೂ ದೈಹಿಕ ಅಲ್ಲದಿದ್ದರೂ ಮಾನಸಿಕವಾಗಿ ಇನ್ನೊಬ್ಬರಿಗೆ ಹಿಂಸೆ ತಂದುಕೊಡುತ್ತವೆ ಎಂಬ ಸತ್ಯವನ್ನೇ ಮರೆಮಾಚಿದ್ದಾನೆ ಮಹೋದರ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩