ಸ್ವಪ್ನ ವಾಸವದತ್ತ ೧೦
🌼 ಸ್ವಪ್ನವಾಸವದತ್ತ ಎಸಳು-१०🌼
*किं वक्ष्यतीति हृदयं परिशँकितं मे कन्या मयाप्यपहृता न च रक्षिता सा । भाग्यैश्चलैर्महदवाप्तगुणोपघात: पुत्र: पितुर्जनितरोष इवास्मि भीत: ।।*
_ಉದಯನನು ವಾಸವದತ್ತೆಯ ತವರಿನ ಕಡೆಯಿಂದ ಸಂದೇಶ ವಾಹಕರು ಬಂದಿರುವರು ಎಂಬುದನ್ನು ಕಂಡು ಚಿಂತಿಸಿ ಮತ್ತೊಬ್ಬ ಮಡದಿಯಾದ ಪದ್ಮಾವತಿಯ ಬಳಿ ತನ್ನ ಆತಂಕ ತೋಡಿಕೊಳ್ಳುತ್ತಿದ್ದಾನೆ. ಏನು ಹೇಳುವರೋ ನನ್ನ ಅತ್ತೆ- ಮಾವಂದಿರು ಎಂಬುದ ನಾ ಕಾಣೆ! ನನ್ನ ಮನವು ಅವರ ನುಡಿಗಳಿಗೆ ಬೆದರುತ್ತಿದೆ. ಏಕೆಂದರೆ ಅವರ ಮಗಳನ್ನು ನಾನು ಮುದ್ದಿಸಿ ಅಪಹರಿಸಿದೆ, ಅಲ್ಲದೇ ರಕ್ಷಣೆಯ ಭಾರವನ್ನೂ ಹೊರದೆ ಕಳೆದುಕೊಂಡೆ. ಚಂಚಲವಾದ ಅದೃಷ್ಟದ ಬೆನ್ನತ್ತಿದ ನಾನು ಅವರ ವಿಷಯದಲ್ಲಿ ಅಪರಾಧವನ್ನೇ ಎಸಗಿರುವೆ. ತಪ್ಪು ಮಾಡಿದ ಮಗನು ಹೆದರಿಕೆಯಿಂದ ಅಪ್ಪನ ಬಳಿ ಹೇಗೆ ನಿಲ್ಲುವನೋ ಹಾಗಾಗಿದೆ ಈಗಿನ ನನ್ನ ಸ್ಥಿತಿ. ಬಂದವರು ಪ್ರತಿನಿಧಿಗಳಾದರೂ ಹಿರಿಯರ ಸಂದೇಶ ಹೊತ್ತು ಬಂದವರಾದ ಕಾರಣ ಹಿರಿಯರೇ ಬಂದಂತಿದೆ. ಸೆರೆಮನೆಯಲ್ಲಿ ಬಂಧಿತನಾಗಿದ್ದ ನಾನು ವಿದ್ಯೆ ಕಲಿಯಲೆಂದು ಬಂದ ಆ ಮಾವ ಮಹಾಸೇನನ ಮಗಳನ್ನು ಅಪಹರಿಸಿ ತಂದಿದ್ದೇ ಅಪರಾಧ. ಹೋಗಲಿ ಪರಸ್ಪರ ಪ್ರೀತಿಸಿ ಒಂದಾಗಿದ್ದಾರೆ, ಮುಂದೆ ಸುಖವಾಗಿರಲೆಂದು ಆಶಿಸಿ ಒಪ್ಪಿಗೆ ಇತ್ತ ಅವರಿಗೆ ನಾನು ತೃಪ್ತಿ ತಂದೆನೇ! ಪೂರ್ವಾರ್ಜಿತ ಕರ್ಮಗಳ ಕಾರಣದಿಂದ ಉಂಟಾಗುವ ಭಾಗ್ಯಗಳು ಎಂದಿಗಿದ್ದರೂ ಚಂಚಲ. ಅದನ್ನೇ ನಂಬಿದ ನಾನು ಪ್ರಿಯೆಯನ್ನು ಉಳಿಸಲಾಗದೆ ಅವಳ ರಕ್ಷಣೆಯ ಭಾರ ನಿಭಾಯಿಸದೇ ಕಳೆದುಕೊಂಡೆ. ಈಗ ಏನೆಂದು ಉತ್ತರಿಸಲಿ ಅವರೆದುರು! ರಾಜನ ಮನದ ತುಮುಲನ್ನು ಕವಿ ಸಕಾಲಿಕವಾಗಿ ತೆರೆದಿಟ್ಟಿದ್ದಾನೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ