ಪದಶಕ್ತಿ ೧೯
📝📕ಪದ ಸಂಪದ ೧೯📕📝
*ಶಿವ*
_ಶಿವ ಈಶ್ವರನ ಪ್ರಸಿದ್ಧ ಹೆಸರು. ಉಳಿದ ದೇವರ ನಾಮಗಳಲ್ಲೂ ಈ ಹೆಸರು ಸಹಜವಾಗಿ ಇದೆ. ಶಿವ ಶಬ್ದಕ್ಕೆ ಮುಖ್ಯ ಅರ್ಥ ಮಂಗಳ ಎಂಬುದು. ಯಾವ ದೇವನು ಕಲ್ಯಾಣಕರನೋ ಅವನೇ ಶಿವ. ಅವನು ಮುಕ್ಕಣ್ಣನಾದರೇನು, ಚತುರ್ಭುಜನಾದರೇನು ಅಲ್ಲವೇ! ಮತ್ತೊಂದು ಅರ್ಥ ನೋಡುವುದಾದರೆ *ಶ್ಯತಿ ಅಶುಭಂ* ಅಶುಭವನ್ನು ಕೊನೆಗೊಳಿಸುತ್ತಾನೆ ಅಂದರೆ ಕಷ್ಟ ನಷ್ಟ ಭ್ರಷ್ಟತೆಗೆ ಅಂತ್ಯ ಹಾಡುವವನು ಹಾಗಾಗಿ ಶಿವ. ಇನ್ನೊಂದು ಅರ್ಥ *ಶೇರತೇ ಗುಣಾಃ ಅಸ್ಮಿನ್ ಇತಿ* ಅಣಿಮಾದಿ ಅಷ್ಟಸಿದ್ಧಿಗಳು ಅಥವಾ ಸಕಲಸದ್ಗುಣಗಳು ಯಾರಲ್ಲಿ ನೆಲೆಸಿವೆಯೋ ಅವನೇ ಶಿವ. ಇನ್ನು ಕೋಶಗಳಲ್ಲಿ ಹಾಗೂ ಲೋಕರೂಢಿಯಲ್ಲಿ ಇದೇ ಪದಕ್ಕೆ ನಾನಾ ಅರ್ಥಗಳಿವೆ. ಶಿವ ಎಂದರೆ ಮೋಕ್ಷ ಅಥವಾ ಕೊನೆ ಎಂಬುದೂ ಅರ್ಥ. ಆಡುಮಾತಿನಲ್ಲಿ ಅವನು ಶಿವ ಅಂದಾ ಎಂದರೆ ದೇವರಪಾದ ಸೇರಿದ ಎಂಬ ಬಳಕೆ ಸಂಸ್ಕೃತ ಮೂಲದ್ದು. ರಾಟೆ ಹಾಕಲು ಅಥವಾ ಬಾಗಿಲಿಗೆ ಅಳವಡಿಸುವ ಕೀಲಿಗೂ ಶಿವ ಎಂಬ ನಾಮವಿದೆ. ಕೀಲು ತೆರೆಯಲು ಬರದಿದ್ದರೆ ಅನಂತರ ಶಿವ ಶಿವ. ಗ್ರಹಗಳು ಎಂಬುದೂ ಒಂದು ಅರ್ಥ. ಅಂತೆಯೇ ವಿಷ್ಕಂಭ ಮೊದಲಾದ ಯೋಗಗಳಲ್ಲಿ ಶಿವ ಎಂಬುದೂ ಒಂದು. ಸಣ್ಣ ಬಾಲಕನಿಗೆ ಶಿವ ಎಂಬ ಪದಪ್ರಯೋಗ ನಾಟಕಗಳ ಬಳುವಳಿ. ಮಕ್ಕಳನ್ನು ದೇವರೆಂದು ಕಾಣುವ ಕಣ್ಣಿರಬಹುದು. ಕೆಂಡಕ್ಕೆ ಹಾಕಿ ಉರಿಸಿ ಸುವಾಸನೆ ಬೀರುವ ಗುಗ್ಗುಲು ಧೂಪದ ಒಂದು ಪರ್ಯಾಯ ಶಿವ. ವೇದದ ಓದು ಅರ್ಥೈಸಿಕೊಳ್ಳುವಿಕೆ ಮಂತ್ರಘೋಷ ಇವೆಲ್ಲವೂ ಶಿವ ಅಂದರೆ ಮಂಗಳಕರ. ಹಾಗಾಗಿ ವೇದವೂ ಶಿವಪದವಾಚ್ಯ. ಹೀಗೆಯೇ ಕಮಲದ ಗಿಡ, ಸುಖ, ಕ್ಷೇಮ, ನೀರು ಕೊನೆಯದಾಗಿ ನಪುಂಸಕ ಎಂಬ ಅರ್ಥವೂ ಈ ಪದಕ್ಕಿದೆ. ಹಾಗಾಗಿಯೇ ಇರಬೇಕು ನಪುಂಸಕರನ್ನು ಮಂಗಳಮುಖಿಯರೆನ್ನುವುದು ಅಥವಾ ಕೆಲವೆಡೆಯ ಸಂಪ್ರದಾಯ ನಪುಂಸಕರ ದರ್ಶನ ಶುಭಕರ._
ಸಾಹಿತ್ಯದಲ್ಲಿ ಧಾರಾಳವಾಗಿ ಉಪಯೋಗಿಸಲ್ಪಟ್ಟ ಶಬ್ದವಿದು.
*ಶಿವಂ ಶಾಂತಂ ಜಗನ್ನಾಥಂ*
ಶಿವಷಡಕ್ಷರ ಸ್ತೋತ್ರದ ಒಂದು ಶ್ಲೋಕದಲ್ಲಿ ಮಂಗಳಕರನೂ ಶಾಂತನೂ ಜಗದೊಡೆಯನೆಂದೂ ಸ್ತುತಿಸಿದ್ದಾರೆ.
ಸೊಡ್ಡಳ ಬಾಚರಸ
ಶಿವಯೆಂದೋದದವನ ಓದು,ಗಿಳಿಯೋದು.ಶಿವ ನಿಮ್ಮನಾರಾಧಿಸದವನ ಮನೆ,ಕೆಮ್ಮನೆ.ಶಿವ ನಿಮ್ಮ ನೋಡದವನ ಕಣ್ಣು, ಹೀಲಿಯ ಕಣ್ಣು.ಶಿವ ನಿಮ್ಮ ಹಾಡದವನ ಬಾಯಿ, ಕನ್ನಡದ ಬಾಯಿ.
ಶಿವ ನಿಮ್ಮ ಹೊಗಳದವನ ಬಾಯ ನಾಲಗೆ, ಬಚ್ಚಲ ತಂಪಿನ ಜವುಗಿನಲ್ಲಿ ಹುಟ್ಟಿದ ಜಿಗುಳಿಯಯ್ಯಾ.ಶಿವ ನಿಮಗೆರಗದ ಕರ್ಮಿ, ಶೂಲದ ಹೆಣ.ಶಿವ ನಿಮ್ಮ ನೆನೆಯದವನ ದೇಹ, ಸಂದೇಹ.ಶಿವ ನಿಮ್ಮ ಭಕ್ತನಲ್ಲದವನ ಸಿರಿಯು
_ವಚನ ಸಾಹಿತ್ಯದ ಈ ಪದದಲ್ಲಿ ಶಿವ ಬಗೆಗಿನ ಬಾಚರಸರ ವರ್ಣನೆ ಬಲು ಸೊಗಸಾಗಿದೆ. ಸರಳವಾದ ಕಾರಣ ವಿವರಿಸಲಾರೆ. ನಾವೂ ಶಿವ ಶಿವ ಎನ್ನುತ್ತಾ ಮಂಗಳ ಪಡೆಯೋಣ._
ಸಂಗ್ರಹ. ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ