ರಾಮಾಯಣ ೧೧೮
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೮
*ಸತೈಸ್ತದಾ ಭಾಸ್ಕರತುಲ್ಯವರ್ಚಸೈಃ ಸುತೈರ್ವೃತಃ ಶತ್ರುಬಲಪ್ರಮರ್ದನೈಃ ರರಾಜ ರಾಜಾ ಮಘವಾನ್ ಯಥಾಮರೈಃ ವೃತೋ ಮಹಾದಾನವದರ್ಪನಾಶನೈಃ*
_ವಾಲ್ಮೀಕಿಗಳ ಇಲ್ಲಿನ ಉಪಮೆ ವಿಚಿತ್ರವೆನಿಸುತ್ತದೆ. ದೇವರಾಜ ಅಗ್ನ್ಯಾದಿ ದೇವತೆಗಳೊಡಗೂಡಿ ಸುಧರ್ಮದಲ್ಲಿ ರಾರಾಜಿಸುವುದು ಲೋಕಪ್ರಸಿದ್ಧ. ರಾವಣನಾದರೋ ಅವರೆಲ್ಲರನ್ನೂ ಗೆದ್ದು ರಾಕ್ಷಸರ ಪ್ರತಿಷ್ಠೆಯನ್ನು ಪುನರ್ಸ್ಥಾಪಿಸಿ ತಾನು ಅಂತಹ ಮಹತ್ವ ಪಡೆದಿದ್ದವನು. ಕುಂಭಕರ್ಣನ ಮೃತಿಯ ತರುವಾಯ ತ್ರಿಶಿರನು ಸಮಾಧಾನದ ಮಾತುಗಳನ್ನಾಡಿ ನರಾಂತಕ ದೇವಾಂತಕ ಅತಿಕಾಯರೊಡಗೂಡಿ ಮತ್ತೆ ರಾವಣನು ವಿರಾಜಿಸಿದನು. ಇಲ್ಲಿ ದಾನವದರ್ಪ ಕೊನೆಗೊಳಿಸಿದ ದೇವೆಂದ್ರನಂತೆ ಎಂಬ ಉಪಮೆ ಕೊಟ್ಟಿದ್ದಾರೆ. ಸೂರ್ಯಸಮಾನತೇಜಸ್ಸೇನೋ ಸರಿ! ಆದರೆ ದೇವತೆಗಳ ಪ್ರತಿಷ್ಠೆಯನ್ನು ಮಣ್ಣುಪಾಲಾಗಿಸಿದ ಇವನು ದೇವನಂತೆ ಹೇಗೆ ಮೆರೆದಾನು! ಬಹುಶಃ ವಾಲ್ಮೀಕಿಗಳ ಮತ ದೇವತೆಗಳೇ ತಮ್ಮ ಸತ್ಕರ್ಮಗಳಿಂದ ರಾಜಿಸುವಂತಹ ಯೋಗ್ಯತೆ ಉಳ್ಳವರು ರಾಕ್ಷಸರಲ್ಲ ಎಂಬ ಭಾವದಲ್ಲಿರಬೇಕು._
*ಕೃತ್ವಾ ಪ್ರದಕ್ಷಿಣಂ ಚೈವ ಮಹಾಕಾಯಾಃ ಪ್ರತಸ್ಥಿರೇ ಸರ್ವೌಷಧೀಭಿರ್ಗಂಧೈಶ್ಚ ಸಮಾಲಭ್ಯ ಮಹಾಬಲಾಃ*
_ಹಿಂದೆ ತಂದೆ ತಾಯಂದಿರಿಗೆ ನಮಸ್ಕಾರ ಮಾತ್ರವಲ್ಲ ಪ್ರದಕ್ಷಿಣೆ ಬರುವ ಕ್ರಮವಿತ್ತೆಂದೂ ಅನೇಕ ಉಲ್ಲೇಖಗಳು ಕಂಡುಬರುತ್ತವೆ. ಗಣಪತಿಯ ಕಥೆಯಲ್ಲಿ ಅವನು ಮಾತಾಪಿತರನ್ನು ಪ್ರದಕ್ಷಿಣೆ ಮಾಡಿ ಜಗವನ್ನೇ ಪರ್ಯಟಿಸಿದ ಎಂದೆಲ್ಲಾ ಕಥೆಯಿದೆ. ಪ್ರಕೃತ ಶ್ಲೋಕದಲ್ಲಿ ರಾವಣನ ಪುತ್ರರು ಮೊದಲಿಗೆ ಅವನಿಗೆ ನಮಸ್ಕರಿಸಿ ಅನಂತರ ಪ್ರದಕ್ಷಿಣೆಗೈದು ಯುದ್ಧೋನ್ಮುಖರಾಗುತ್ತಾರೆ. ಈಗಿನ ಕಾಲಘಟ್ಟದಲ್ಲಿ ಬದುಕಿರುವ ವ್ಯಕ್ತಿಗೆ ಸುತ್ತುಬರುವುದು ಸಲ್ಲ ಎಂಬ ಅಭಿಪ್ರಾಯ ಇದೆ. ಆದರೆ ಅದು ಸರಿಯಲ್ಲ, ಗುರು ಹಿರಿಯರಿಗೆ ಪ್ರದಕ್ಷಿಣೆ ಬರಬಹುದೆಂದು ತಿಳಿದುಬರುತ್ತದೆ. ಯುದ್ಧಕ್ಕೆ ಹೊರಡುವಾಗ ಪ್ರಥಮಚಿಕಿತ್ಸಾ ಪೆಟ್ಟಿಗೆಯ ಬದಲು ನಾನಾ ಗಿಡಮೂಲಿಕೆಗಳನ್ನು ಹಿಡಿದು ಹೊರಡುತ್ತಾರೆ. ಬರೀ ಶಸ್ತ್ರಾಸ್ತ್ರ ಮಾತ್ರವಲ್ಲದೆ ಗಾಯ ಆದಾಗ ಏನಾದರೂ ಆಘಾತಗಳಾದಾಗ ಉಪಚಾರಕ್ಕೆ ಬೇಕಾಗುವ ಸಾಮಗ್ರಿ ಔಷಧಿ ತೆಗೆದುಕೊಂಡು ಹೋಗುವುದು ನೋಡಿದರೆ ಆಗಿನ ಕಾಲದ ಅವರ ನಾಗರಿಕತೆ ಎಷ್ಟು ಉನ್ನತಮಟ್ಟದ್ದಾಗಿತ್ತು ಎನ್ನುವುದನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಯುದ್ಧಕ್ಕೆ ಹೋಗುವುದೇ ಸಾವು ಬದುಕಿನ ಹೋರಾಟಕ್ಕೆ. ಹಾಗೆ ಹೋಗುವಾಗ ಬಗೆ ಬಗೆಯ ಆಭರಣ ಧರಿಸಿ ಸುಗಂಧದ್ರವ್ಯ ಪೂಸಿ ರೇಶ್ಮೆಯ ವಸ್ತ್ರಗಳನ್ನು ಧರಿಸಿ, ಬಿಡುವ ಬಾಣಗಳಿಗೆ ಚಿನ್ನದ ತುದಿ, ಹಯಗಳಿಗೆ ಹಾಗೂ ರಥಗಳಿಗೆ ಬಗೆ ಬಗೆ ಅಲಂಕಾರ ಇವೆಲ್ಲವನ್ನೂ ನೋಡಿದಾಗ ಅವರ ಜೀವನಪ್ರೀತಿ ಆಶ್ಚರ್ಯ ತರುತ್ತದೆ. ಈಗಿನ ಕೆಲವರ ಸೌಂದರ್ಯಪ್ರಜ್ಞೆಯನ್ನು ನೋಡಿ ನಗುವ ನಾವು ಹಿಂದಿನವರ ಇಂತಹ ಸಂಗತಿ ನೋಡಿದ್ದರೆ ಹೇಗೆ ಯೋಚಿಸುತ್ತಿದ್ದೆವೊ ಏನೋ!_
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ