ಪದ ಶಕ್ತಿ ೧೮
📝📕ಪದ ಸಂಪದ ೧೮📕📝
*ಪಶುಪತಿ*
_ಶಿವನ ಮತ್ತೊಂದು ಹೆಸರು. ಪಶು ಶಬ್ದಕ್ಕೆ ಔಷಧಿ ಎಂಬ ಅರ್ಥವಿದೆ. ಓಷಧಿಗಳ ಅಧಿಪ ಸಾಮಾನ್ಯವಾಗಿ ಚಂದ್ರನಾದರೂ ಅವನಿಗೂ ಒಡೆಯನಾದ ಕಾರಣ ಅಥವಾ ಅವನನ್ನೇ ಶಿರದಲ್ಲಿ ಧರಿಸಿದ ಕಾರಣ ಶಿವನು ಪಶುಪತಿ. ಇನ್ನು ಪಶು ಶಬ್ದದ ಸಾಮಾನ್ಯ ಅರ್ಥ ಜೀವಿಗಳು. *ಬ್ರಹ್ಮಾದ್ಯಾಃ ಸ್ಥಾವರಾಂತಾಃ ಪಶವಃ ತೇಷಾಂ ಪತಿಃ* ಚಿಂತಾಮಣಿ ಎಂಬ ಗ್ರಂಥದ ಮಾತಿನಂತೆ ಬ್ರಹ್ಮನಿಂದ ಆರಂಭಿಸಿ ಸೂಕ್ಷ್ಮಾಣುಗಳವರೆಗೆ ವ್ಯಾಪಿಸಿದ ಜಗದ ಜೀವಿಗಳೆಲ್ಲವೂ ಪಶುಗಳು. ಅವುಗಳ ಒಡೆಯ ದೇವನಾದ ಶಿವ. ಈ ಹೆಸರು ಅಗ್ನಿಯ ಪರ್ಯಾಯವೂ ಹೌದು. ಪ್ರಮಥಗಳ ಮತ್ತೊಂದು ಹೆಸರು ಪಶು. ಶಿವನು ಪ್ರಮಥಾಧಿಪತಿಯಾದ್ದರಿಂದ ಅವನೇ ಪಶುಪತಿ. ಶಿವನು ಯಾವುದೋ ಅವತಾರ ಕಾಲದಲ್ಲಿ ಹಿಮಪರ್ವತ ಸಂಚಾರಿಯಾದ ಒಂದು ಪ್ರಾಣಿಯ ರೂಪ ಧರಿಸಿದ್ದನು. ಅದೂ ಪಶುಪತಿ ಶಬ್ದದ ಮತ್ತೊಂದು ಅರ್ಥ. ಹಾಗಾಗಿ ಅವನೇ ಪಶುಪತಿ. ನಮ್ಮಲ್ಲಿನ ಪಶುತ್ವ ಹೋಗಲಾಡಿಸಿ ದೇವತ್ವ ತರಲೆಂದು ಆ ಪಶುಪತಿಯನ್ನು ನೆನೆಯೋಣ._
ಸಾಹಿತ್ಯದಲ್ಲಿ ನಾನಾಕಡೆ ಉಲ್ಲೇಖ ನೋಡಬಹುದು.
*ವಂದೇ ಶಂಭು ಉಮಾಪತಿಂ.... ವಂದೇ ಪಶೂನಾಂ ಪತಿಮ್*
ಪ್ರಸಿದ್ಧ ಶಿವನ ಸ್ತುತಿಯಾದ ಮೇಲಿನ ಶ್ಲೋಕದಲ್ಲಿ ಜೀವಿಗಳೊಡೆಯ ಎಂದು ಸ್ತುತಿಸಿದ್ದಾರೆ.
*ಪಶುಪತಿಯ ಪರಮೇಷ್ಠಿಯಾ ಮುರ ದ್ವಿಷನ .... ವೆನಗೆ ಭಾರಿಯೆ ನಿಮ್ಮ ಘನ ಪದ ವನಜವಿದು*
ಸಭಾಪರ್ವದ ಕುಮಾರವ್ಯಾಸನ ಪದ್ಯವಿದು. ದೇವಸ್ತುತಿಯಾಗಿ ಇಲ್ಲಿ ಪೊಗಳಿದ್ದಾನೆ.
ಸಂಗ್ರಹ. ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ