ರಾಮಾಯಣ ೧೧೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೫

*ನಾಹಂ ವಿರಾಧೋ ವಿಜ್ಞೇಯೋ ನ ಕಬಂಧಃ ಖರೋ ನ ಚ ನ ವಾಲೀ ನ ಚ ಮಾರೀಚಃ ಕುಂಭಕರ್ಣೋಹಮಾಗತಃ*

_ಅಂಗದನ ಮಾತಿನಿಂದ ಉತ್ಸಾಹಿತರಾದ ಕಪಿವೀರರು ಬಹಳ ಪರಾಕ್ರಮದಿಂದ ಕುಂಭಕರ್ಣನೆದುರು ಕಾದಾಡುವರು. ಈ ಸಮಯದಲ್ಲಿ ಕಪಿರಾಜ ಸುಗ್ರೀವನು ದ್ವಂದ್ವಯುದ್ಧಗೈಯುತ್ತಾ ಕುಂಭಕರ್ಣನ ಸೆರೆಗೊಳಗಾಗುವನು. ಕುಂಭಕರ್ಣನಾದರೋ ಶತ್ರು ನಾಯಕನ ಬಂಧನದಿಂದ ಉತ್ಸಾಹಿತನಾಗಿ ರಾಮಪಕ್ಷದವರಿಗೆ ವಿಷಾದ ಉಂಟು ಮಾಡಲು ಸುಗ್ರೀವನನ್ನು ಹೊತ್ತೊಯ್ಯುವನು. ಅನತಿಕಾಲದಲ್ಲೇ ಎಚ್ಚೆತ್ತ ಸುಗ್ರೀವನು ಪ್ರತೀಕಾರ ಎಸಗಲು ಬಯಸಿ ಅವನ ಕಿವಿಗಳೆರಡನ್ನೂ ಮೂಗನ್ನೂ ಕಚ್ಚಿ ತುಂಡು ಮಾಡಿ ತಪ್ಪಿಸಿಕೊಂಡು ಬರುವನು. ಈಗ ಮತ್ತಷ್ಟು ವ್ಯಗ್ರನಾದ ಕುಂಭಕರ್ಣನು ರಣರಂಗಕ್ಕೆ ಬಂದು ರಾಮನೆದುರು ನುಡಿಯುವ ಮಾತಿದು. ಹೇ, ರಾಮ ನೀನು ಮಹತ್ತಾದ ಒಂದೊಂದು ಕೂರಂಬುಗಳಿಂದ ವಿರಾಧನನ್ನು, ಖರನನ್ನು, ಕಬಂಧನನ್ನೂ, ವಾಲಿಯನ್ನೂ, ಮಾರೀಚನನ್ನೂ ವಧಿಸಿರಬಹುದು. ಆದರೆ ಅವರೆಲ್ಲರ ಪರಾಕ್ರಮ ಮೀರಿಸುವ ಕುಂಭಕರ್ಣನು ಇಂದು ಬಂದಿದ್ದಾನೆ. ನಿನ್ನಾಟ ನನ್ನೆದುರು ನಡೆಯದು ಎನ್ನುತ್ತಾ ಬಹುಕಾಲ ಕಾದಾಡುವನು. ರಾಮನ. ಸಪ್ತಸಾಲಗಳನ್ನು ಭೇದಿಸಿದ ಆ ತೀಕ್ಷ್ಣ ಶರಗಳೇ ಕುಂಭಕರ್ಣನ ವಿಷಯದಲ್ಲಿ ನಿಷ್ಪ್ರಯೋಜಕ ಎನಿಸುತ್ತವೆ. ಹೊತ್ತು ಮೀರಿದಂತೆ ಅವನ ನಾಶ ಅತಿಶಯವಾಗಿ ವಾನರರು ಸಾವಿರಾರು ಸಂಖ್ಯೆಯಲ್ಲಿ ಧರೆಗುರುಳುತ್ತಾರೆ. ಆಗ ಕೋಪಗೊಂಡ ರಾಮನು ವಾಯವ್ಯ ಹಾಗೂ ಐಂದ್ರಾಸ್ತ್ರಗಳಿಂದ ಅವನ ಬಾಹುಗಳೆರಡನ್ನೂ, ಅರ್ಧಚಂದ್ರಾಕಾರದ ಕೂರಂಬುವಿನಿಂದ ಕಾಲುಗಳೆರಡನ್ನೂ ಕತ್ತರಿಸಿ ಕೆಡಹುತ್ತಾನೆ. ಆದರೂ ಛಲಬಿಡದ ಅವನ ಪ್ರಾಣವನ್ನು ಮತ್ತೆ ಐಂದ್ರಾಸ್ತ್ರ ಪ್ರಯೋಗದಿಂದ ವೈಕುಂಠದ ಪಾಲಾಗಿಸುತ್ತಾನೆ. ಕುಂಭಕರ್ಣನ ಕೈಗಳು ಕಾಲುಗಳು ಒಂದೊಂದು ಭೂಮಿಗೆ ಬಿದ್ದಾಗಲೂ ಅಸಂಖ್ಯಾತ ಕಪಿಗಳೂ ರಾಕ್ಷಸರೂ ಪ್ರಾಣಿಗಳೂ ನಾಶವಾದುವೆಂದರೆ ಅವನ ದೈತ್ಯಾಕಾರದ ದೇಹದ ಕಲ್ಪನೆಯೇ ಅಸಾಧ್ಯ. ಅಂತಹವನನ್ನೂ ರಾಮ ಎದುರಿಸಿ ಸಂಹರಿಸಿದ ರಾಮನ ಪರಾಕ್ರಮ ಅಸದಳ. ಕುಂಭಕರ್ಣನಿಗೆ ಜನ್ಮತಃ ಒಲಿದಿದ್ದ ಪರ್ವತಪ್ರಾಯ ಶರೀರ ಹಾಗೂ ಪರಾಕ್ರಮ ಉಳಿದವರಿಗೆ ಸಂಪಾದಿಸುವುದೂ ಕಷ್ಟ. ‌ಅದರ ವಿನಿಯೋಗ ಸರಿಯಾದ ರೀತಿಯಲ್ಲಿ ನಡೆಯದೇ ಲೋಕಕ್ಕೆ ಹಾನಿಕಾರಕವಾದುದು ದುಃಖಕರ. ಶಕ್ತಿ ಸಮಾಜಕ್ಕೆ ಉಪಯೋಗಕ್ಕೆ ಬಂದಾಗ ಮೌಲ್ಯಯುತವಾಗುವುದು. ಇಲ್ಲದಿದ್ದರೆ ಇದ್ದೂ ಸತ್ತಂತೆ ಸರಿ. ಕುಂಭಕರ್ಣನ ವಿಷಯದಲ್ಲಿ ಇದು ಅಕ್ಷರಶಃ ನಿಜವಾಯಿತು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩